ರೈತನನ್ನು ಬಲಿ ಪಡೆದ ಹುಲಿಯನ್ನು ಯಾವುದೇ ಕಾರಣಕ್ಕೂ ಕೊಲ್ಲುವುದಿಲ್ಲ : ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್

4:40 PM, Wednesday, October 9th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

tigerಬೆಂಗಳೂರು : ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿಯಲ್ಲಿ ರೈತನನ್ನು ಬಲಿ ಪಡೆದ ಹುಲಿಯನ್ನು ಯಾವುದೇ ಕಾರಣಕ್ಕೂ ಕೊಲ್ಲುವುದಿಲ್ಲ ಎಂದು ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅರಣ್ಯ ಇಲಾಖೆಯು ಹುಲಿಯನ್ನು ಸೆರೆಹಿಡಿಯುವ ಆಥವಾ ಗುಂಡಿಕ್ಕಿ ಕೊಲ್ಲುವ ಆದೇಶ ವೈರಲ್ ಆದ ಹಿನ್ನೆಲೆ ಈ ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಂಡಿಪುರ ವ್ಯಾಪ್ತಿಯಲ್ಲಿ 120 ಹುಲಿಗಳಿವೆ. ಒಂದೆರಡು ಹುಲಿಗಳ ಸಮಸ್ಯೆ ಇದೆ. ಕಳೆದ ಬಾರಿ 60 ವರ್ಷದ ವೃದ್ಧನ ಮೇಲೆ ಹುಲಿ ದಾಳಿ ನಡೆಸಿತ್ತು. ಅದೇ ಹುಲಿ ಇದಾಗಿರಬಹುದು ಎಂಬ ಸಂಶಯ ಇದೆ. ಹೀಗಾಗಿ ಮೊದಲು ಯಾವ ಹುಲಿ ಅನ್ನೋದನ್ನ ಪತ್ತೆ (ಟ್ರೇಸ್ ಔಟ್) ಮಾಡುತ್ತೇವೆ. ಬಳಿಕ ಅದನ್ನ ಸೆರೆಹಿಡಿಯಲಾಗುತ್ತದೆ ಎಂದು ತಿಳಿಸಿದರು.

ನರಭಕ್ಷಕ ಹುಲಿಯನ್ನು ಗುಂಡಿಕ್ಕಿ ಕೊಲ್ಲುವುದಕ್ಕೆ ಯಾವುದೇ ಆದೇಶ ಮಾಡಿಲ್ಲ. ಮಾಡುವುದೂ ಇಲ್ಲ. ಜೀವಂತವಾಗಿ ಸೆರೆಹಿಡಿಯಲಾಗುತ್ತದೆ. ಪ್ರತಿ ವರ್ಷ ಎರಡೆರಡು ಬಾರಿ ಕ್ಯಾಮೆರಾ ಇಡಲಾಗುತ್ತದೆ. ಕ್ಯಾಮೆರಾ ಮೂಲಕ ಪ್ರತಿಯೊಂದು ಹುಲಿ ವಿವರ ತಿಳಿಯಲಾಗುತ್ತದೆ. ಆ ಪ್ರದೇಶದಲ್ಲಿ ಓಡಾಡುವ ಹುಲಿ ಯಾವುದು? ದಪ್ಪ ಇದ್ಯೆಯೋ ಸಣ್ಣ ಇದೆಯೋ, ಮೈಮೇಲೆ ಎಷ್ಟು ಪಟ್ಟಿಗಳಿವೆ ಎನ್ನುವ ವಿವರ ತಿಳಿದ ಬಳಿಕ ಯಾವ ಹುಲಿ ದಾಳಿ ಮಾಡಿರಬಹುದು ಅನ್ನುವುದು ಪತ್ತೆಯಾಗುತ್ತದೆ. ಹುಲಿಯನ್ನು ಸೆರೆಹಿಡಿದ ಬಳಿಕ ಸುರಕ್ಷಿತವಾಗಿ ಮೈಸೂರು ಅಥವಾ ಬನ್ನೇರುಘಟ್ಟ ರಕ್ಷಣಾ ಶಿಬಿರಕ್ಕೆ ಬಿಡಲಾಗುವುದು ಎಂದು ಹೇಳಿದರು.

ಇನ್ನು ಹುಲಿ ಕೊಲ್ಲಲು ಮಹಾರಾಷ್ಟ್ರದಿಂದ ಶೂಟರ್ ಗಳು ಬಂದಿದ್ದಾರೆ ಎಂಬ ಸುದ್ದಿ ಬಗ್ಗೆ ಗೊತ್ತಿಲ್ಲ. ಒಂದು ವೇಳೆ ಆ ರೀತಿಯ ತಜ್ಙರು ಬಂದಿದ್ದರೂ ಅವರನ್ನು ಕೂಡಲೇ ವಾಪಸ್ ಕಳುಹಿಸಲಾಗುವುದು. ಶೌಕತ್ ಅಲಿ ಖಾನ್ ಸೇರಿದಂತೆ ಯಾರೇ ಆದರೂ ಹೊರರಾಜ್ಯದಿಂದ ಬಂದಿರುವ ಶೂಟರ್ ಗಳು ಈ ಆಪರೇಷನ್ ನಲ್ಲಿ ಪಾಲ್ಗೊಳ್ಳುವುದಿಲ್ಲ. ನಮ್ಮ ರಾಜ್ಯದಲ್ಲೇ ವನ್ಯಜೀವಿಗಳ ವೈದ್ಯರು ಇರುವುದರಿಂದ ಅವರನ್ನೇ ಕಾರ್ಯಾಚರಣೆಯಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಈಗಾಗಲೇ ವೈದ್ಯರ ತಂಡವೂ ಆ ಪ್ರದೇಶಕ್ಕೆ ಹೋಗಿರುವುದರಿಂದ ಹುಲಿಯನ್ನು ಸೆರೆ ಹಿಡಿಯುವ ಕೆಲಸ ಭರದಿಂದ ಸಾಗುತ್ತಿದೆ ಎಂದು ಸಂಜಯ್ ಮೋಹನ್ ತಿಳಿಸಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English