ಉಡುಪಿ: ಸೋಮವಾರ ರಾತ್ರಿ ಸುಮಾರು 8.45 ರ ವೇಳೆಗೆ ಪಡುಬಿದ್ರಿಯ ತೆಂಕ ಎರ್ಮಾಳು ಬಳಿ ಟಾಟಾಸುಮೊ ಹಾಗೂ ಗ್ಯಾಸ್ ಸಿಲಿಂಡರ್ ಇದ್ದ ಲಾರಿಯ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಗಂಭೀರವಾಗಿ ಗಾಯಗೊಂಡರೆ, ನಾಲ್ವರು ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡ ಉಳಿದ ನಾಲ್ವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಾಟಾಸುಮೊದಲ್ಲಿದ್ದವರು ಕೇರಳದವರಾಗಿದ್ದು ಒಂದೇ ಕುಟುಂಬದ ಸದಸ್ಯರೆಂದು ತಿಳಿದು ಬಂದಿದ್ದು. ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನಕ್ಕೆ ನವರಾತ್ರಿ ಆಚರಣೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಂದರ್ಭ ಈ ಭೀಕರ ಅಪಘಾತ ಸಂಭವಿಸಿದೆ.
ಕೇರಳದ ಪೆರುಂಬಾವೂರ್ ನ ವಿಜಯನ್, ಜಯಂತಿ ಎನ್.ಎಸ್, ಶಾಂತ ಹಾಗೂ ಶಾಜಿ ಮೃತಪಟ್ಟವರು. ಶಾಜಿ, ಶಾಂತಾ ಮತ್ತು ಜಯಂತಿ ಸಹೋದರ – ಸಹೋದರಿಯರು ಮತ್ತು ವಿಜಯನ್ ಅವರು ಶಾಂತಾ ಅವರ ಪತಿ ಎಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಟಾಟಾಸುಮೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅಪಘಾತ ಸಂಭವಿಸಿದ ಸ್ಥಳದಲ್ಲಿ ಹೆದ್ದಾರಿ ಚತುಃಷ್ಪಥ ಕಾಮಗಾರಿ ಅರ್ಧಂಬರ್ಧವಾಗಿದ್ದು ರಸ್ತೆಯ ಒಂದು ಪಾರ್ಶ್ವವನ್ನು ದ್ವಿಮುಖ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಮತ್ತೊಂದು ಪಾರ್ಶ್ವದ ಕಾಮಗಾರಿ ಮುಕ್ಕಾಲು ಭಾಗ ಮುಗಿದಿದ್ದು ಆ ಬದಿಯಲ್ಲೂ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೆ ಈ ಅಪಘಾತ ಸಂಭವಿಸುತ್ತಿರಲಿಲ್ಲ ಎಂಬುದು ಸ್ಥಳೀಯರ ವಾದ.
ಪ್ರಕರಣ ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.