ಮಂಗಳೂರು : ಅಂಚೆ ಚೀಟಿ ಮತ್ತು ನಾಣ್ಯಗಳಿಗೆ ತಮ್ಮದೇ ಆದ ಇತಿಹಾಸವಿದ್ದು, ಅವು ಸಂಶೋಧನೆಯ ಆಕರಗಳಾಗಿವೆ. ಆದ್ದರಿಂದ ಬಾಲ್ಯದಿಂದಲೇ ಇವುಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೇಳಿದರು.
ಕರ್ನಾಟಕ ಅಂಚೆ ವೃತ್ತದ ವತಿಯಿಂದ ನಗರದಲ್ಲಿ ಹಮ್ಮಿಕೊಳ್ಳಲಾದ ರಾಜ್ಯ ಮಟ್ಟದ “ಕರ್ನಾಪೆಕ್ಸ್- 2019’ನಲ್ಲಿ ರವಿವಾರ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.
ಅಂಚೆಚೀಟಿ ಮತ್ತು ನಾಣ್ಯಗಳ ಅಧ್ಯಯನ ಕುತೂಹಲ ಕೆರಳಿಸುತ್ತದೆ. ಆದ್ದರಿಂದ ಮಕ್ಕಳನ್ನು ಇಂತಹ ಪ್ರದರ್ಶನಗಳಿಗೆ ಕರೆದೊಯ್ಯಬೇಕು ಎಂದವರು ಹೇಳಿದರು.
ಅಂಚೆ ಇಲಾಖೆ ಹೊರತಂದ “ಅಂಚೆ ಚೀಟಿಯಲ್ಲಿ ಕನ್ನಡ ಅಕ್ಷರ ಮಾಲೆ’ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ, ಈ ಪುಸ್ತಕವನ್ನು ಎಲ್ಲ ಶಾಲೆಗಳಿಗೆ ಒದಗಿಸಬೇಕು ಎಂದು ಸಲಹೆ ಮಾಡಿದರು.
ಹಿರಿಯ ಅಂಚೆ ಚೀಟಿ ಸಂಗ್ರಾಹಕರಾದ ಎಂ.ಕೆ. ಕೃಷ್ಣಯ್ಯ, ಡಾ| ಕೆ.ಎಸ್. ಪ್ರಭಾಕರ ರಾವ್, ಎಸ್. ನಾರಾಯಣ ರಾವ್ ಮತ್ತು ಎಂ.ಆರ್. ಪಾವಂಜೆ ಅವರನ್ನು ಸಮ್ಮಾನಿಸಲಾಯಿತು.
ಬೆಂಗಳೂರಿನ ಪೋಸ್ಟ್‌ಮಾಸ್ಟರ್ ಜನರಲ್ ಕ| ಅರವಿಂದ ವರ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರ್.ಎಂ.ಎಸ್. ಸೀನಿಯರ್ ಸೂಪರಿಂಟೆಂಡೆಂಟ್ ಸಂದೇಶ್ ಮಹಾದೇವಪ್ಪ ಸ್ವಾಗತಿಸಿ, ಅಂಚೆ ಇಲಾಖೆಯ ಬೆಂಗಳೂರು ದಕ್ಷಿಣ ವಿಭಾಗದ ಸೀನಿಯರ್ ಸೂಪರಿಂಟೆಂಡೆಂಟ್ ಟಿ.ಎಸ್. ಅಶ್ವತ್ಥ ನಾರಾಯಣ ವಂದಿಸಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರ್ವಹಿಸಿದರು.
ಉಡುಪಿ ಜಿಲ್ಲೆಯ ಕಟಪಾಡಿ ಬಳಿಯ ಮಟ್ಟು ಗ್ರಾಮ ಮತ್ತು ಅದರ ಸುತ್ತಮುತ್ತಲ ಪ್ರದೇಶದಲ್ಲಿ ಬೆಳೆಯುವ ಮಟ್ಟುಗುಳ್ಳ, ಶಂಕರಪುರದಲ್ಲಿ ಬೆಳೆಯುವ ಶಂಕರಪುರ ಮಲ್ಲಿಗೆಗಳನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅನನ್ಯತೆಗಳು ಎಂದು ಪರಿಗಣಿಸಿ ಅಂಚೆ ಇಲಾಖೆಯು ಅವುಗಳಿಗೆ ವಿಶೇಷ ಅಂಚೆ ಲಕೋಟೆಯ ಗೌರವ ನೀಡಿದೆ. ಇದೇ ರೀತಿ ಅಡ್ಯಾರ್ ಪರಿಸರದಲ್ಲಿ ಕಂಡುಹಿಡಿಯಲಾದ ಹೊಸ ಪ್ರಭೇದ ಕಪ್ಪೆಗೂ ವಿಶೇಷ ಅಂಚೆ ಲಕೋಟೆಯ ಗೌರವ ನೀಡಲಾಗಿದೆ.
ಪರಿಸರ ದಿನಾಚರಣೆಯನ್ನು ಅರ್ಥಪೂರ್ಣಗೊಳಿಸುವುದಕ್ಕಾಗಿ ಕರಾವಳಿಯ ಅನನ್ಯತೆಗಳಾದ ಮಟ್ಟು ಗುಳ್ಳ, ಶಂಕರಪುರ ಮಲ್ಲಿಗೆ ಮತ್ತು “ಯುಪ್ಲಿಕ್ಟಿಸ್ ಅಲೋಸಿ’ ಎಂಬ ಪ್ರಭೇದದ ಕಪ್ಪೆಯ ಚಿತ್ರಗಳನ್ನು ಹೊಂದಿರುವ ವಿಶೇಷ ಅಂಚೆ ಲಕೋಟೆಗಳನ್ನು ಅನಾವರಣ ಮಾಡಲಾಯಿತು. ಶಿವಮೊಗ್ಗ ಜಿಲ್ಲೆ ಹುಂಚ ಅಂಚೆ ಕಚೇರಿಯ ಶಾಶ್ವತ ಚಿತ್ರ ಸಹಿತ ಅಂಚೆ ಮೊಹರನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಗೌರವ ಅತಿಥಿ, ಸಂತ ಅಲೋಶಿಯಸ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ನಿವೃತ್ತ ಪ್ರೊಫೆಸರ್ ಡಾ| ಹರೀಶ್ ಜೋಶಿ ಅವರು ತಾನು ಜಪಾನಿ ವಿಜ್ಞಾನಿಗಳ ಸಹಕಾರದಲ್ಲಿ ನಗರದ ಅಡ್ಯಾರ್‌ನಲ್ಲಿ ಕಂಡುಹಿಡಿದ ಹೊಸ ಪ್ರಬೇಧದ ಕಪ್ಪೆ ಯುಪ್ಲಿಕ್ಟಿಸ್ ಅಲೋಸಿ ಮತ್ತು ಪರಿಸರ ಸಂರಕ್ಷಣೆಯಲ್ಲಿ ಕಪ್ಪೆಗಳು ವಹಿಸುತ್ತಿರುವ ಪಾತ್ರದ ಬಗ್ಗೆ ಮಾಹಿತಿ ನೀಡಿದರು.
Click this button or press Ctrl+G to toggle between Kannada and English