ಬಳ್ಳಾರಿ : ನೆರೆ ಹಾವಳಿಯಿಂದಾಗಿ ರೈತರು ಮತ್ತು ನೇಕಾರರಿಂದ ಸಾಲಮನ್ನಾ ಮಾಡುವಂತೆ ಒತ್ತಾಯ ಬರುತ್ತಿದೆ. ಈ ಕುರಿತು ಸಿಎಂ ಯಡಿಯೂರಪ್ಪ ಬಳಿ ಚರ್ಚಿಸಲಾಗುವುದು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲಮನ್ನಾ ವಿಚಾರದಲ್ಲಿ ಗೊಂದಲ ಇದೆ. ಹಿಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಿಗೂ ಸ್ಪಷ್ಟತೆ ಇರಲಿಲ್ಲ. ಹಾಗಾಗಿ ಈ ಬಗ್ಗೆ ನಾಳೆ ನಾಡಿದ್ದು ಸಿಎಂ ಬಳಿ ಕೂಲಂಕುಷವಾಗಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಐತಿಹಾಸಿಕ ಹಂಪಿ ಉತ್ಸವವನ್ನು ಬರ, ನೆರೆ ಹಾವಳಿ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಎರಡು ದಿನಗಳ ಕಾಲ ಸರಳವಾಗಿ ಆಚರಿಸಲು ಸಿಎಂ ಯಡಿಯೂರಪ್ಪ ಮೌಖಿಕವಾಗಿ ಅನುಮತಿ ನೀಡಿದ್ದಾರೆ. ರಾಜ್ಯದಲ್ಲಿ ನೆರೆಹಾವಳಿ ಜತೆಗೆ ಬರ ಪರಿಸ್ಥಿತಿಯೂ ಆವರಿಸಿದೆ. ಈ ಹಿನ್ನೆಲೆಯಲ್ಲಿ ಹಂಪಿ ಉತ್ಸವವನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂಬ ಉದ್ದೇಶದಿಂದ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲಾ ಉತ್ಸುವಾರಿ ಸಚಿವ ಲಕ್ಷ್ಮಣ ಸವದಿ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಅವರೂ ಸಹ ಸಮ್ಮತಿ ಸೂಚಿಸಿದ್ದಾರೆ. ಹೀಗಾಗಿ ಎರಡು ದಿನಗಳ ಮಟ್ಟಿಗೆ ಸರಳವಾಗಿಯಾದರೂ ಹಂಪಿ ಉತ್ಸವವನ್ನು ಆಚರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
Click this button or press Ctrl+G to toggle between Kannada and English