ಅನರ್ಹರಿಗೆ ಬಿಪಿಎಲ್ ಕಾರ್ಡ್ – ಕ್ರಿಮಿನಲ್ ಕೇಸು ದಾಖಲಿಸಲು ಉಸ್ತುವಾರಿ ಕಾರ್ಯದರ್ಶಿ ಸೂಚನೆ

7:08 PM, Wednesday, October 16th, 2019
Share
1 Star2 Stars3 Stars4 Stars5 Stars
(1 rating, 1 votes)
Loading...

ZP-meeting ಮಂಗಳೂರು :  ಬಡ ಕುಟುಂಬಗಳಿಗೆ ವಿತರಿಸಲಾಗುತ್ತಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಸುಳ್ಳು ಮಾಹಿತಿ ನೀಡಿ ಕಾರ್ಡು ಪಡೆದು, ಸರಕಾರಕ್ಕೆ ವಂಚನೆ ಮಾಡಿರುವವರ ವಿರುದ್ಧ ಐಪಿಸಿ 420 ಅಡಿ ಕ್ರಿಮಿನಲ್ ಕೇಸು ದಾಖಲಿಸಲು ರಾಜ್ಯ ಸರಕಾರದ ಕಂದಾಯ ಪ್ರಧಾನ ಕಾರ್ಯದರ್ಶಿ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಸೂಚಿಸಿದ್ದಾರೆ.

ಅವರು ಬುಧವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡಿತರ ಕಾರ್ಡು ಪಡೆದಿರುವುದು ಅಕ್ಷಮ್ಯ ವಂಚನೆಯಾಗಿದೆ. ಅನರ್ಹರು ಪಡೆದುಕೊಂಡಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ತಾವಾಗಿಯೇ ಇಲಾಖೆಗೆ ಹಿಂದಿರುಗಿಸಲು ಈಗಾಗಲೇ ಗಡುವು ನೀಡಲಾಗಿದೆ. ಆದರೂ ಮತ್ತೊಮ್ಮೆ ಅವಕಾಶ ನೀಡಿ ಕೂಡಲೇ ಅನರ್ಹರು ಪಡೆದುಕೊಂಡಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಸಂಬಂಧ ಪಟ್ಟ ಕಚೇರಿಗೆ ಹಿಂದಿರುಗಿಸಬೇಕು. ಹಿಂದಿರುಗಿಸದೇ ಇದ್ದಲ್ಲಿ ಅಂತಹವರ ಕುಟುಂಬಗಳನ್ನು ಪತ್ತೆ ಮಾಡಿ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಅವರು ಆಹಾರ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪ್ರವಾಹ ಪುನರ್ವಸತಿ : ಇದೇ ಸಂದರ್ಭದಲ್ಲಿ ನೆರೆ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮಗಳ ಪರಿಶೀಲನೆ ನಡೆಸಿದ ಉಸ್ತುವಾರಿ ಕಾರ್ಯದರ್ಶಿಗಳು, ಬೆಳ್ತಂಗಡಿ ತಾಲೂಕಿನ ಕೆಲವಡೆ ಸಂತ್ರಸ್ತರ ಮನೆ ಪುನರ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ತಕರಾರು ಎತ್ತಿರುವುದಕ್ಕೆ ಅಸಮಾಧಾನ ಸೂಚಿಸಿದರು. ಸಂತ್ರಸ್ತರ ಬದುಕು ಪುನರ್ ನಿರ್ಮಾಣದಲ್ಲಿ ಸರಕಾರ ನಿರಂತರವಾಗಿ ತೊಡಗಿಸಿದ್ದು, ಈ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ನೆರೆ ಹಾವಳಿಯಲ್ಲಿ ಫಲಾನುಭವಿಗಳಿಗೆ ಆದಷ್ಟು ಬೇಗ ಪರಿಹಾರ ದೊರಕುವಂತೆ ಕಾರ್ಯನಿರ್ವಹಿಸಬೇಕು ಎಂದರು.

ಪಿಂಚಣಿದಾರರಿಗೆ ತಾಂತ್ರಿಕ ಸಮಸ್ಯೆಗಳಿಂದ ಪಿಂಚಣಿ ಸರಿಯಾಗಿ ದೊರಕದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಇವುಗಳನ್ನು ತ್ವರಿತವಾಗಿ ಪರಿಹರಿಸಿ ಕ್ಲಪ್ತವಾಗಿ ಪಿಂಚಣಿ ದೊರಕಿಸಿಕೊಡಲು ಮಂಜುನಾಥ್ ಪ್ರಸಾದ್ ತಿಳಿಸಿದರು. ಪ್ರತಿಯೊಂದು ಗ್ರಾಮದಲ್ಲಿ ರುದ್ರಭೂಮಿ ಕಡ್ಡಾಯವಾಗಿ ಇರಬೇಕು, ಇಲ್ಲದ್ದಿದ್ದ ಪಕ್ಷದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಜಾಗವನ್ನು ಗುರುತಿಸಿ ರುದ್ರಭೂಮಿ ನಿರ್ಮಾಣ ಮಾಡುವಂತೆ ಆದೇಶ ನೀಡಿದರು. ಕೃಷಿ ಹಾಗೂ ತೋಟಗಾರಿಕಾ ಬೆಳೆಹಾನಿಗೊಂಡವರಿಗೆ ಸಕಾಲಕ್ಕೆ ವಿಮಾ ಹಣ ದೊರಕದಿರುವ ಬಗ್ಗೆ ವಿಮಾ ಕಂಪೆನಿಗಳ ಅಧಿಕಾರಿಗಳೊಂದಿಗೆ ಕೂಡಲೇ ಚರ್ಚಿಸಲು ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮಾತನಾಡಿ, ಮಹಾನಗರಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ತ್ಯಾಜ್ಯ ಘಟಕದಲ್ಲಿ ತ್ಯಾಜ್ಯಕುಸಿತದಿಂದ ಮಂದಾರ ಪ್ರದೇಶದ ಸಂತ್ರಸ್ತರ ಪುನರ್ವಸತಿಗೆ ಸುಮಾರು 20 ಕೋಟಿ ರೂ. ಅಗತ್ಯವಿದೆ. ರಾಜ್ಯ ಸರಕಾರದಿಂದ ನೇಮಕಗೊಂಡ ತಜ್ಞರ ಸಮಿತಿ ಘಟನಾ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದು, ಬಯೋ ಮೈನಿಂಗ್ ಮೂಲಕ ಅಲ್ಲಿನ ತ್ಯಾಜ್ಯ ಸಮಸ್ಯೆ ಬಗೆಹರಿಸಲು ಸೂಚಿಸಿದೆ. ಇದಕ್ಕಾಗಿ ಅಂದಾಜು 50 ಕೋಟಿ ರೂ. ಅಗತ್ಯವಿದೆ ಎಂದು ತಿಳಿಸಿದರು.

ತುಂಬೆ ವೆಂಟೆಡ್ ಡ್ಯಾಂಗೆ ಹೊಂದಿಕೊಂಡ ನದಿ ಬದಿಯಲ್ಲಿ ತಡೆಗೋಡೆ ಇತ್ತೀಚೆಗೆ ಪ್ರವಾಹದಲ್ಲಿ ಕುಸಿದುಬಿದ್ದಿದ್ದು, ಇದರ ಪುನರ್ ನಿರ್ಮಾಣಕ್ಕೆ 8 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್ ತಿಳಿಸಿದರು.

2019ರಲ್ಲಿ ( ಜನವರಿಯಿಂದ ಸೆಪ್ಟಂಬರ್‍ವರೆಗೆ) ದ.ಕ. ಜಿಲ್ಲೆಯಲ್ಲಿ 1322 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಅದೇ ರೀತಿ ಮಲೇರಿಯಾ – 2082, ಇಲಿಜ್ವರ – 150 ಹಾಗೂ ಎಚ್1ಎನ್1- 210 ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ ಆರ್ ಸೆಲ್ವಮಣಿ, ತರಭೇತಿ ಐಎಎಸ್ ಅಧಿಕಾರಿ ರಾಹುಲ್ ಸಿಂಧ್ಯಾ, ಡಿಸಿಪಿ ಅರುಣಾಂಶು ಗಿರಿ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English