ಯಾದಗಿರಿ : ವಿವರಣೆ ಕೇಳಿದರೆ ಉತ್ತರ ಕೊಡುವುದು ಜವಾಬ್ದಾರಿಯಾಗುತ್ತದೆ. ಉತ್ತರ ಕೊಡದೆ ಹೋದರೆ ಅದು ಅಹಂಕಾರವಾಗುತ್ತದೆ. ಪಕ್ಷಕ್ಕೆ ಅದರದ್ದೇ ಆದ ನೀತಿ, ಚೌಕಟ್ಟಿದೆ. ಎಷ್ಟೇ ದೊಡ್ಡ ವ್ಯಕ್ತಿ ಆದರೂ ಅವರು ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಕ್ಷದಿಂದ ನೀಡಿದ ಶೋಕಾಸ್ ನೋಟಿಸ್‍ಗೆ ಬಸನಗೌಡ ಪಾಟೀಲ್ ಯತ್ನಾಳ್ ಉತ್ತರ ನೀಡದ ಹಿನ್ನೆಲೆ ಯಾದಗಿರಿಯ ಸರ್ಕಿಟ್ ಹೌಸ್ ನಲ್ಲಿ ಪ್ರತಿಕ್ರಿಯಿಸಿದ ಅವರು, ಪಕ್ಷದಿಂದ ಬಿ ಫಾರಂ ಪಡೆದ ಮೇಲೆ ಪಕ್ಷದ ನೀತಿ ನಿಯಮದ ಒಳಗೆ ಮಾತನಾಡಬೇಕು. ಪಕ್ಷದ ಕಾರ್ಯಕರ್ತರ ನಡವಳಿಕೆಯಲ್ಲಿ ವ್ಯತ್ಯಾಸ ಆದರೆ ಮೇಲಿನಿಂದ ವಿವರಣೆ ಕೇಳುವುದು ಸಹಜ. ಅದಕ್ಕಾಗಿ ಕೇಂದ್ರದಿಂದ ವಿವರಣೆ ಕೇಳಿದ್ದಾರೆ ಎಂದು ವಿವರಿಸಿದರು.
ವಿವರಣೆ ಕೊಡಬೇಕಾದದ್ದು ಎಲ್ಲರ ಜವಾಬ್ದಾರಿ. ನಾನು ರಾಜ್ಯಾಧ್ಯಕ್ಷ ಆಗಿದ್ದರೂ ನನ್ನಿಂದ ತಪ್ಪು ನಡೆದರೆ ಹೈಕಮಾಂಡ್ ನನ್ನನ್ನು ವಿವರಣೆ ಕೇಳುತ್ತದೆ. ಇದಕ್ಕೆ ನಾವು ಸ್ಪಷ್ಟನೆ ನೀಡಬೇಕು. ಅದನ್ನು ನೀಡದಿದ್ದರೆ ಮುಂದೆ ಎಲ್ಲದ್ದಕ್ಕೂ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಯಡಿಯೂರಪ್ಪ ಹಾಗೂ ಕಟೀಲ್ ಬೆಂಬಲಿಗರ ಕಿತ್ತಾಟ ವಿಚಾರದ ಬಗ್ಗೆ ಮಾತನಾಡಿದ ಅವರು, ನಮ್ಮ ಕಚೇರಿಯಲ್ಲಿ ಅಂತಹ ಯಾವುದೇ ಘಟನೆಗಳು ನಡೆದಿಲ್ಲ ಇದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಆದ ತಪ್ಪು ಕಲ್ಪನೆಗಳು. ನನ್ನ ಮತ್ತು ಯಡಿಯೂರಪ್ಪ ಮಧ್ಯೆ ಸಣ್ಣ ವ್ಯತ್ಯಾಸ ಸಹ ಇಲ್ಲ. ನಾನು ಎಲ್ಲ ಮಾಹಿತಿಯನ್ನು ಯಡಿಯೂರಪ್ಪನವರ ಮೂಲಕ ತಿಳಿದುಕೊಳ್ಳುತ್ತಿದ್ದೇನೆ. ನಮ್ಮ ರಾಜ್ಯ ಬಿಜೆಪಿಗೆ ಬಿಎಸ್‍ವೈ ಅವರೇ ಸುಪ್ರೀಂ ಎಂದು ಬಿಎಸ್‍ವೈ ಮತ್ತು ತಮ್ಮ ನಡುವಿನ ಇರುಸು ಮುರಿಸಿನ ಬಗ್ಗೆ ಸ್ಪಷ್ಟನೆ ನೀಡಿದರು.
Click this button or press Ctrl+G to toggle between Kannada and English