ವಿಟ್ಲ : ಕೆಳ ಮಧ್ಯಮ ವರ್ಗದಲ್ಲಿ ಜನಿಸಿದರೂ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಬೇಕೆಂಬ ಕನಸನ್ನು ಪ್ಲೇವನ್ ಗ್ಲೆನ್ ಮಸ್ಕರೇಂಞಸ್ ನನಸು ಮಾಡಿಕೊಳ್ಳುವ ಮೂಲಕ ಛಲ ಹಠದಿಂದ ಏನನ್ನೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನವಾಗಿದ್ದಾರೆ.
ಶ್ರೀಮಂತರು ವಿದೇಶಕ್ಕೆ ತೆರಳಿ ಉನ್ನತ ಶಿಕ್ಷಣ ಪಡೆಯುವುದನ್ನು ನೋಡಿದ ತಾನೂ ಒಂದು ದಿನ ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದು, ತಾಯ್ನಡಿಗೆ ಮರಳಿ ಕೆಲಸ ಮಾಡುತ್ತ ಸಮಾಜಕ್ಕೆ, ದೇಶಕ್ಕೆ ಕೊಡುಗೆ ಕೊಡಬೇಕೆಂಬ ಕನಸು ಕಂಡವರು ವಿಟ್ಲ ನಿವಾಸಿ ಪ್ಲೇವನ್ ಗ್ಲೆನ್ ಮಸ್ಕರೇಂಞಸ್. ಇವರ ತಂದೆ ಫೆಲೆಕ್ಸ್ ಮಸ್ಕರೇಂಞಸ್, ತಾಯಿ ಗ್ರೆಟಾ ಮಸ್ಕರೇಂಞಸ್. ಫೆಲೆಕ್ಸ್ ಸುಮಾರು 40 ವರ್ಷಗಳಿಂದ ಆಟೋ ಚಾಲಕ. ತಾಯಿ ಗ್ರೆಟಾ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೇಸಿ ವಿಟ್ಲದ ಸದಸ್ಯನಾಗಿರುವ ಪ್ಲೇವನ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿದ್ದು, ಜರ್ಮನಿಯ ರೋಸನ್ ಹೈಮ್ ಟೆಕ್ನಿಕಲ್ ಯುನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸ್‌ನಲ್ಲಿ ಮಾಸ್ಟರ್ ಆಫ್ ಸೈನ್ಸ್ ಮಾಡುತ್ತಿದ್ದಾರೆ. ಬಡತನವಿದ್ದರೂ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಕನಸು ಕಂಡು ಅದನ್ನು ಈಡೇರಿಸುವಲ್ಲಿ ಪ್ಲೇವನ್ ಮಾದರಿಯಾಗಿದ್ದಾರೆ.
ವಿಟ್ಲದ ಸೇಂಟ್ ರೀಟಾ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪೂರೈಸಿದ ಪ್ಲೇವನ್, ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದರು. ಮಂಗಳೂರು ಅಡ್ಯಾರ್‌ನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರೈಸಿದ್ದಾರೆ.
ಜರ್ಮನಿಯಲ್ಲಿ ಬೇರೆ ದೇಶದ ವಿದ್ಯಾರ್ಥಿಗಳು ಮೆರಿಟ್‌ನಲ್ಲಿ ಈ ಉನ್ನತ ವಿದ್ಯಾಭ್ಯಾಸ ಪಡೆಯಲು ಅರ್ಹತೆ ಪಡೆಯುತ್ತಾರೆ. ಭಾರತದಿಂದ 18 ವಿದ್ಯಾರ್ಥಿಗಳು ಇಂಥ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಅರ್ಹತೆ ಪಡೆದಿದ್ದು, ಅದರಲ್ಲಿ ಪ್ಲೇವನ್ ಒಬ್ಬರು. ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕ್ ಸಾಲ ಮಾಡಿದ ಕುಟುಂಬಕ್ಕೆ ವಿದೇಶಿ ಶಿಕ್ಷಣ ಉಚಿತವಾಗಿ ಸಿಗುತ್ತಿರುವುದು ಸಂತಸ ತಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿ ಈ ರೀತಿಯ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ.
ಇಂಜಿನಿಯರಿಂಗ್ ವಿದ್ಯಾಭ್ಯಾಸದ ಅಂತಿಮ ವರ್ಷದ ಅವಧಿಯಲ್ಲಿ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲೇಬೇಕೆಂದು ಓದಿನ ಕಡೆಗೆ ಅಧಿಕ ಪರಿಶ್ರಮ ಹಾಕಿದ್ದಾರೆ. ಮೂರು-ನಾಲ್ಕು ತಿಂಗಳು ಮಂಗಳೂರಿನಲ್ಲಿ ಜರ್ಮನ್ ಭಾಷೆ ಕಲಿಯುವ ಸಲುವಾಗಿ ತರಗತಿಗೆ ಸೇರಿ ಅದಕ್ಕಾಗಿ ಪರೀಕ್ಷೆ ಬರೆದು ಯಶಸ್ವಿಯಾದರು.
Click this button or press Ctrl+G to toggle between Kannada and English