ಮಂಡ್ಯ : ಉಪಚುನಾವಣೆಯಾಗಲಿ, ಸಾರ್ವತ್ರಿಕ ಚುನಾವಣೆ ಬರಲಿ, ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಕಾರ್ಯನಿಮಿತ್ತ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ವೇಳೆ ನಗರದಲ್ಲಿ ಕಾಂಗ್ರೆಸ್ಸಿಗರಿಂದ ಸ್ವಾಗತ ಸ್ವೀಕರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಕಟ್ಟಲು ನಾವೆಲ್ಲ ಕೆಲಸ ಮಾಡುತ್ತಿದ್ದೇವೆ. ರಾಜ್ಯ ಬಿಜೆಪಿ ಸರ್ಕಾರದಿಂದ ಜನರಲ್ಲಿ ಭ್ರಮನಿರಸನ ಆಗಿದೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಸಿಎಂಗೆ ಏನು ಕೇಳಿದರೂ ನನ್ನ ಹತ್ತಿರ ಹಣವಿಲ್ಲ, ನಡೆಸಲು ಆಗುತ್ತಿಲ್ಲ ಎನ್ನುತ್ತಿದ್ದಾರಲ್ಲ ಏನು ಹೇಳಬೇಕು. ಚುನಾವಣೆ ಬಂದರೆ ಎದುರಿಸ್ತೇವೆ, ಇಲ್ಲ ಅಂದ್ರೆ ಪಕ್ಷ ಕಟ್ಟಿ ಸಂಘಟನೆ ಮಾಡುತ್ತೇವೆ ಎಂದು ಹೇಳಿದರು.
ಇಂದಿನ ಬೆಳವಣಿಗೆ ನೋಡಿದರೆ ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು. ಉಪ ಚುನಾವಣೆ ಸಂಬಂಧ 22ರಂದು ಏನಾಗುತ್ತದೆ ನೋಡೋಣ. ನಾವೆಲ್ಲ ತಯಾರಾಗಿದ್ದೇವೆ. ಯಾರನ್ನ ಅಭ್ಯರ್ಥಿ ಮಾಡಬೇಕು ಅಂತಲೂ ನಿರ್ಧಾರ ಆಗಿದೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರು ಬೆಂಬಲಿಸಿದ್ದಾರೆ. ಪಕ್ಷ ಬೆಂಬಲಿಸಲಿಲ್ಲ ಎಂಬ ಸಂಸದೆ ಸುಮಲತಾ ಹೇಳಿಕೆಗೆ ಅಂದಿನ ವಾತವರಣ ಹೇಗಿತ್ತು ಎಂಬುದು ಜನರಿಗೆ ತಿಳಿದಿದೆ. ಪ್ರತಿ ಕ್ಷೇತ್ರದಲ್ಲಿ ಯಾರು ಏನು ಮಾಡಿದರು, ಏನಾಯ್ತು ಎಂಬುದು ತಿಳಿದಿದೆ. ಕಾಂಗ್ರೆಸ್ ಇನ್ನು ಮುಂದೆ ಯಾರ ಜತೆಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ನಗರಸಭೆ ಆಗಲಿ ಪಂಚಾಯ್ತಿ ಚುನಾವಣೆ ಆಗಲಿ ಸ್ವತಂತ್ರವಾಗಿ ಎದುರಿಸುತ್ತೇವೆ. ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿದ್ದೆವು ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ಹೇಳಿಕೆಗೆ ಜೆಡಿಎಸ್ ಹಿಂದೆಯೂ ಬಿಜೆಪಿಗೆ ಬೆಂಬಲಿಸಿತ್ತು. ಸುರೇಶ್ ಗೌಡ ದೊಡ್ಡ ನಾಯಕರೇನಲ್ಲ. ಜೆಡಿಎಸ್ ತೀರ್ಮಾನ ಮಾಡುವವರೇ ಬೇರೆ ಎಂದು ಹೇಳಿದರು.
ದೇವೇಗೌಡ, ಕುಮಾರಸ್ವಾಮಿ ಏನ್ ಮಾಡಬೇಕು ಅಂತ ಸುರೇಶ್ ಗೌಡರನ್ನ ಕೇಳುತ್ತಾರಾ? ಬಿಜೆಪಿ ಸಿದ್ಧಾಂತ, ನಡವಳಿಕೆಗಳನ್ನ ನಾವು ವಿರೋಧಿಸುತ್ತಲೇ ಬಂದಿದ್ದೇವೆ. ಬಿಜೆಪಿ ಪಕ್ಷದ ಜತೆ ಹೊಂದಾಣಿಕೆ ಇಲ್ಲ, ಕಟುವಾಗಿ ವಿರೋಧ ಮಾಡುತ್ತೇವೆ ಎಂದರು.
ಜೆಡಿಎಸ್ ಬಿಜೆಪಿ ಜತೆ ಸಖ್ಯನೂ ಮಾಡಿದ್ದಾರೆ ವಿರೋಧನೂ ಮಾಡಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ. ನಮ್ಮ ಸಿದ್ದಾಂತದ ಮೇಲೆ ನಮಗೆ ನಂಬಿಕೆ ಇದೆ. ಹಿಂಸೆಯಿಂದ, ಭಯದಿಂದ ದೇಶ ಕಟ್ಟುವ ಕೆಲಸ ಬಿಜೆಪಿಯಧ್ದು. ನಾವು ಅವರ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.
Click this button or press Ctrl+G to toggle between Kannada and English