ನವದೆಹಲಿ : 10 ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು 4 ಬ್ಯಾಂಕುಗಳನ್ನಾಗಿ ವಿಲೀನಗೊಳಿಸುತ್ತಿರುವ ಕೇಂದ್ರ ಸರ್ಕಾರ ನಿರ್ಧಾರವನ್ನು ಖಂಡಿಸಿ ಅಖಿಲ ಭಾರತ ಬ್ಯಾಂಕ್ ಸಿಬ್ಬಂದಿ ಒಕ್ಕೂಟ (ಎಐಬಿಇಎ) ಮತ್ತು ಬ್ಯಾಂಕ್ ಉದ್ಯೋಗಿಗಳ ಫೆಡರೇಷನ್ ಆಫ್ ಇಂಡಿಯಾ (ಬಿಇಎಫ್‍ಐ) ಮಂಗಳವಾರ ಮುಷ್ಕರಕ್ಕೆ ಕರೆ ನೀಡಿವೆ.
ಮುಷ್ಕರದಿಂದ ಮಂಗಳವಾರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳ ಸೇವೆಯಲ್ಲಿ ಸಮಸ್ಯೆಯಾಗುವ ಸಾಧ್ಯತೆಯಿದ್ದು, ಖಾಸಗಿ ವಲಯದ ಬ್ಯಾಂಕ್‍ಗಳು ಈ ಮುಷ್ಕರದಲ್ಲಿ ಭಾಗವಹಿಸುತ್ತಿಲ್ಲ. ಮುಷ್ಕರ ನಡೆಯುವ ಪ್ರದೇಶದಲ್ಲಿ ಎಟಿಎಂಗಳನ್ನೂ ಮುಚ್ಚುವುದಾಗಿ ಸಂಘಟನೆಗಳು ತಿಳಿಸಿವೆ.
ಬ್ಯಾಂಕ್ ಮುಷ್ಕರವನ್ನು ಹಿಂದಕ್ಕೆ ಪಡೆಯುವಂತೆ ಸರ್ಕಾರ ಮುಖ್ಯ ಕಾರ್ಮಿಕ ಆಯುಕ್ತ, ಕಾರ್ಮಿಕ ಸಚಿವಾಲಯದ ಜೊತೆಗಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ನಿಗದಿಯಂತೆ ಮುಷ್ಕರ ನಡೆಯಲಿದೆ.
ಬ್ಯಾಂಕ್ ನೌಕರರ ಸಂಘದ ಒಟ್ಟು 3.50 ಲಕ್ಷ ಸಿಬ್ಬಂದಿ ಈ ಮುಷ್ಕರದಲ್ಲಿ ಭಾಗಿಯಾಗಲಿರುವ ಕಾರಣ ಬ್ಯಾಂಕುಗಳ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.
ಒಕ್ಕೂಟದಲ್ಲಿ ಸದಸ್ಯತ್ವ ಪಡೆದಿರುವ ಸಿಬ್ಬಂದಿ ಸಂಖ್ಯೆ ಕಡಿಮೆ ಇರುವ ಪರಿಣಾಮ ವಹಿವಾಟಿನ ಮೇಲೆ ಹೆಚ್ಚಿನ ಪರಿಣಾಮವೇನೂ ಆಗುವುದಿಲ್ಲ ಎಂದು ಎಸ್‍ಬಿಐ ಷೇರುಪೇಟೆಗೆ ಮಾಹಿತಿ ನೀಡಿದೆ. ಠೇವಣಿ ಇಡುವುದು, ನಗದು ಹಿಂದಕ್ಕೆ ಪಡೆಯುವುದು, ಚೆಕ್ ಕ್ಲಿಯರೆನ್ಸ್ ಸೇರಿದಂತೆ ಇನ್ನಿತರ ವಹಿವಾಟುಗಳಿಗೆ ಮುಷ್ಕರದಿಂದ ಸಮಸ್ಯೆಯಾಗುವ ಸಾಧ್ಯತೆಯಿದೆ.
Click this button or press Ctrl+G to toggle between Kannada and English