ಮಂಗಳೂರು : ಮಂಗಳೂರಿನ ದಸರಾ ಕರಾವಳಿ ಪ್ರದೇಶದ ಪ್ರಮುಖ ಉತ್ಸವ. ಕುದ್ರೋಳಿಯ ಗೋಕರ್ಣನಾಥೇಶ್ವರನ ಸನ್ನಿಧಿಯಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿ, ಪೂಜಿಸಿ ನಂತರ ಮೆರವಣಿಗೆ ಮಾಡುವುದು ದಸರಾ ಆಚರಣೆಯ ವಿಶೇಷ. ಇತ್ತೀಚಿನ ವರ್ಷಗಳಲ್ಲಿ ಮಂಗಳೂರು ದಸರಾ ನಾಡಿನ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. `ದಸರಾ’ ಅಂದಾಕ್ಷಣ ನೆನಪಾಗುವುದು ಮೈಸೂರಿನ ದಸರಾ. ಆನೆ, ಅಂಬಾರಿ, ಜಂಬೂ ಸವಾರಿ ಇತ್ಯಾದಿಗಳು ಕಣ್ಣಮುಂದೆ ಸುಳಿಯುತ್ತವೆ. `ಮಂಗಳೂರಿನ ದಸರಾ’ ಕರಾವಳಿ ಪ್ರದೇಶದ ಅತ್ಯಂತ ದೊಡ್ಡ ಉತ್ಸವ. ಇತ್ತೀಚಿನ ವರ್ಷಗಳಲ್ಲಿ ಮಂಗಳೂರು ದಸರಾ ಜನಪ್ರಿಯವಾಗುತ್ತಿದೆ.
ಒಂಬತ್ತು ದಿನಗಳ ಕಾಲ ನಡೆಯುವ ಪೂಜೆ, ಪುನಸ್ಕಾರಗಳು ಮಾತ್ರವೇ ಅಲ್ಲದೆ ನವದುರ್ಗೆಯರ ಮೆರವಣಿಗೆ, ಹತ್ತಾರು ಸ್ತಬ್ಧ ಚಿತ್ರಗಳು, ಕೊಂಬು- ಕಹಳೆ, ಚೆಂಡೆ- ವಾದ್ಯಗಳು ಮೇಳೈಸಿದ ಉತ್ಸವ ಮಂಗಳೂರಿನ ಪ್ರಮುಖ ಧಾರ್ಮಿಕ ಕಾರ್ಯಕ್ರಮ. ಇದರಲ್ಲಿ ಎಲ್ಲ ಧರ್ಮಗಳ ಜನರೂ ಭಾಗವಹಿಸುತ್ತಾರೆ ಎಂಬುದೇ ವಿಶೇಷ. `ಮಂಗಳೂರು ದಸರಾ’ ಕೇವಲ `ನಾಡಹಬ್ಬ’ ಎಂಬ ವಿಶೇಷಣಕ್ಕೆ ಸೀಮಿತವಾಗಿಲ್ಲ. ಇಲ್ಲಿನ ವಿವಿಧ ಧರ್ಮೀಯರ ನಡುವೆ ಸೌಹಾರ್ದ, ಸಾಮರಸ್ಯ ಹಾಗೂ ಭಾವೈಕ್ಯ ಬೆಸೆಯುವ ಉತ್ಸವವಲ್ಲದೆ ಕರಾವಳಿ ಪ್ರದೇಶದ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾಗಿಯೂ ದಸರಾ ಗಮನ ಸೆಳೆಯುತ್ತದೆ.
ಮಂಗಳೂರು ದಸರಾ ಅಂದರೆ ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದ `ನವರಾತ್ರಿ ಉತ್ಸವ’. ಶ್ರೀ ಕ್ಷೇತ್ರದ ಕಲ್ಯಾಣ ಮಂಟಪದಲ್ಲಿ ಆಕರ್ಷಕವಾಗಿ ನಿರ್ಮಿಸಿದ ಮಂಟಪಗಳಲ್ಲಿ ನವದುರ್ಗೆಯರು ಮತ್ತು ಶಾರದಾ ಮಾತೆ ಮೂರ್ತಿಯನ್ನು ಏಕಕಾಲಕ್ಕೆ ಸಾಂಪ್ರದಾಯಿಕ ಪೂಜಾವಿಧಿಗಳೊಂದಿಗೆ ಪ್ರತಿಷ್ಠಾಪಿಸುವ ಮೂಲಕ ಇಲ್ಲಿ ನವರಾತ್ರಿ ಹಬ್ಬಕ್ಕೆ ಚಾಲನೆ ಸಿಗುತ್ತದೆ. ನವದುರ್ಗೆಯರು ಹಾಗೂ ಶಾರದಾ ಮಾತೆಯನ್ನು ಒಂದೆಡೆ ಏಕಕಾಲಕ್ಕೆ ಪ್ರತಿಷ್ಠಾಪಿಸಿ ಪೂಜಿಸುವುದು `ಮಂಗಳೂರು ದಸರಾ’ದ ವಿಶೇಷ. ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಸ್ಥಳೀಯರನ್ನಲ್ಲದೆ, ಕರಾವಳಿ ಪ್ರದೇಶದ ದೇವಸ್ಥಾನಗಳ ದರ್ಶನಕ್ಕೆ ಬರುವ ಪ್ರವಾಸಿಗರನ್ನು ದೊಡ್ಡ ಪ್ರಮಾಣದಲ್ಲಿ ಆಕರ್ಷಿಸುತ್ತಿದೆ.
ಶೂದ್ರ ಸಮುದಾಯಗಳ ಜನರಿಗೆ ಧಾರ್ಮಿಕ ಮಾರ್ಗದರ್ಶನ ನೀಡಿದವರು ಕೇರಳದ ನಾರಾಯಣ ಗುರುಗಳು. ಅವರ ಆಶಯದಂತೆ ಕುದ್ರೋಳಿಯಲ್ಲಿ 1912ರಲ್ಲಿ ಗೋಕರ್ಣನಾಥೇಶ್ವರ ದೇವಳ ಸ್ಥಾಪನೆಯಾಯಿತು. ನಂತರ ಈ ಕ್ಷೇತ್ರ ಎಲ್ಲ ವರ್ಗಗಳ ಜನರ ಶ್ರದ್ಧಾ ಕೇಂದ್ರವಾಗಿ ಅಭಿವೃದ್ಧಿ ಪಡೆಯಿತು. ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರು ಕ್ಷೇತ್ರದ ಜೀರ್ಣೋಧಾರ ಹಾಗೂ ನವೀಕರಣಕ್ಕೆ ಕಾರಣ ಕರ್ತರು. ಖ್ಯಾತ ಶಿಲ್ಪಿಗಳಾದ ಎಸ್.ಕೆ. ಆಚಾರ್ ಮತ್ತು ಅವರ ಪುತ್ರ ದಕ್ಷಿಣಮೂರ್ತಿ ಶ್ರೀಕ್ಷೇತ್ರದ ವಿನ್ಯಾಸ ರೂಪಿಸಿದರು. ಶ್ರೀ ಕ್ಷೇತ್ರದ ರಾಜಗೋಪುರ ಪ್ರಧಾನ ಆಕರ್ಷಣೆ. 60 ಅಡಿ ಎತ್ತರದ ಗೋಪುರ ಚೋಳರ ಶೈಲಿಯಲ್ಲಿದೆ. ದೇವಸ್ಥಾನ ಸಂಕೀರ್ಣದ ಮೇಲ್ಭಾಗಕ್ಕೆ ಬಂಗಾರದ ಬಣ್ಣ ಲೇಪಿಸಲಾಗಿದೆ. ಹೀಗಾಗಿ ನೋಡುಗರಿಗೆ ಸುವರ್ಣ ದೇವಾಲಯದಂತೆ ಭಾಸವಾಗುತ್ತದೆ.
ಶ್ರೀ ಕ್ಷೇತ್ರದ ಆಶ್ರಯದಲ್ಲಿ ಹತ್ತೊಂಬತ್ತು ವರ್ಷಗಳಿಂದ ದಸರಾ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಮೈಸೂರು ದಸರಾದಲ್ಲಿ ಚಾಮುಂಡೇಶ್ವರಿ ದೇವಿಯನ್ನು ಅಂಬಾರಿಯಲ್ಲಿ ಪ್ರತಿಷ್ಠಾಪಿಸಿ ಅದನ್ನು ಆನೆಯ ಮೇಲೆ ಮೆರವಣಿಗೆ ಮಾಡುವ ಪದ್ಧತಿ ಇದ್ದರೆ ಮಂಗಳೂರು ದಸರಾದಲ್ಲಿ ನವದುರ್ಗೆಯರು, ಗಣಪತಿ ಹಾಗೂ ಶಾರದಾ ಮಾತೆಯರ ಉತ್ಸವ ಮೂರ್ತಿಗಳನ್ನು ವಾಹನದಲ್ಲಿರಿಸಿ `ಶೋಭಾಯಾತ್ರೆ’ ನಡೆಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ `ಶಕ್ತಿ’ ದೇವತೆಗಳ ಕ್ಷೇತ್ರಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ನವರಾತ್ರಿ ಉತ್ಸವಕ್ಕೆ ವಿಶೇಷ ಮಹತ್ವವಿದೆ. ನವರಾತ್ರಿ ಸಂದರ್ಭದಲ್ಲಿ ಕುದ್ರೋಳಿಯ ಗೋಕರ್ಣನಾಥ ದೇವಳ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತದೆ.
`ಶೋಭಾಯಾತ್ರೆ’ ಸಂದರ್ಭದಲ್ಲಿ ಬೆಂಗಳೂರು, ಮೈಸೂರು, ಮಡಿಕೇರಿ ಮತ್ತಿತರ ಕಡೆಗಳಿಂದ ಆಗಮಿಸುವ ಜಾನಪದ ಕಲಾ ತಂಡಗಳು ಹಾಗೂ ನೃತ್ಯ ತಂಡಗಳು, ಮಹಾರಾಷ್ಟ್ರದ ಡೋಲು ನೃತ್ಯ, ಕಲ್ಲಡ್ಕದ ಗೊಂಬೆ ಬಳಗ, ಕೇರಳದ ತ್ರಿಶೂರಿನ ನೂರಾರು ಬಣ್ಣದ ಕೊಡೆಗಳು, ಕರಾವಳಿಯ ಯಕ್ಷಗಾನ, ಹುಲಿ ವೇಷ ಇತ್ಯಾದಿಗಳು ಮೆರವಣಿಗೆಯ ಸಂಭ್ರಮವನ್ನು ಇಮ್ಮಡಿಗೊಳಿಸುತ್ತವೆ.
Click this button or press Ctrl+G to toggle between Kannada and English