ಮುಂಬೈ : ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಬಹುಮತ ಪಡೆದುಕೊಂಡು ರಾಜ್ಯದಲ್ಲಿ ಅಧಿಕಾರ ಉಳಿಸಿಕೊಂಡಿದ್ದರೂ ನಿರೀಕ್ಷಿಸಿದಷ್ಟು ಪ್ರಚಂಡ ಬಹುಮತ ಸಿಕ್ಕಿಲ್ಲ. ಸರಳ ಬಹುಮತಕ್ಕಿಂತ ತುಸು ಹೆಚ್ಚಿನ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಕಾಂಗ್ರೆಸ್ ಮತ್ತು ಎನ್ಸಿಪಿ ಮೈತ್ರಿ ಸೋಲು ಕಂಡಿದ್ದರೂ, ಎರಡೂ ಪಕ್ಷಗಳು ಕಳೆದ ಚುನಾವಣೆಗಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಇದು ಆಡಳಿತಾರೂಢ ಬಿಜೆಪಿ, ಶಿವಸೇನೆಗೆ ಎಚ್ಚರಿಕೆ ಗಂಟೆಯಾಗಿದೆ.
ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆ, ಬಿಜೆಪಿ 100 ಕ್ಷೇತ್ರಗಳಲ್ಲಿ ಜಯಶಾಲಿಯಾಗಿದ್ದು, 5ರಲ್ಲಿ ಮುನ್ನಡೆಯಲ್ಲಿದೆ. ಶಿವಸೇನೆ 56 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಎನ್ಸಿಪಿ ಅಭ್ಯರ್ಥಿಗಳು 51 ಕ್ಷೇತ್ರದಲ್ಲಿ ಜಯಶಾಲಿಯಾಗಿದ್ದು, 3 ಕಡೆ ಮುಂಚೂಣಿ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಉಮೇದುವಾರರು 40 ಕಡೆ ಗೆಲುವು ಸಾಧಿಸಿದ್ದು, 5ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಎನ್ಸಿಪಿ ಕಳೆದ ಸಲಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲುವು ಕಂಡಿದೆ. ರಾಜ್ಯಾದ್ಯಂತ 269 ಕೇಂದ್ರದಲ್ಲಿ ಬೆಳಗ್ಗೆ 8ಕ್ಕೆ ಎಣಿಕೆ ಕಾರ್ಯ ಆರಂಭವಾಯಿತು. 25 ಸಾವಿರ ಸಿಬ್ಬಂದಿ ಭಾಗವಹಿಸಿದ್ದರು. 288 ಕ್ಷೇತ್ರಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಶೇ. 63.20 ಮತದಾನವಾಗಿತ್ತು. 2014ರ ಚುನಾವಣೆಯಲ್ಲಿ ಬಿಜೆಪಿ 122, ಶಿವಸೇನೆ 63 ಮತ್ತು ಕಾಂಗ್ರೆಸ್ 42 ಮತ್ತು ಎನ್ಸಿಪಿ 41 ಸ್ಥಾನಗಳಿಸಿತ್ತು. ಕಳೆದ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು.
ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿ-ಶಿವಸೇನಾ ಮೈತ್ರಿಗೆ ಪ್ರಚಂಡ ಬಹುಮತ ದೊರೆಯಲಿದ್ದು, 200-230 ಸ್ಥಾನ ಸಿಗಲಿವೆ ಎಂದು ಅಂದಾಜಿಸಿದ್ದವು. ಆದರೆ, ಸರಳ ಬಹುಮತಕ್ಕಿಂತ ತುಸು ಹೆಚ್ಚು ಸ್ಥಾನಗಳು ಮಾತ್ರ ದೊರೆತಿದೆ. ಹರಿಯಾಣದಲ್ಲೂ ಬಿಜೆಪಿಗೆ ಪೂರ್ಣ ಬಹುಮತ ಬರಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ ಇದು ಸಂಪೂರ್ಣ ಉಲ್ಟಾ ಆಗಿದೆ.
ಮಹಾರಾಷ್ಟ್ರದ ಸತಾರಾ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಎನ್ಸಿಪಿಯ ಶ್ರೀನಿವಾಸ್ ಪಾಟೀಲ್ ಬಿಜೆಪಿಯ ಉದಯನ್ರಾಜೆ ಭೋಸ್ಲೆಯನ್ನು ಪರಾಭವಗೊಳಿಸಿದ್ದಾರೆ. ಕಳೆದ ಏಪ್ರಿಲ್/ಮೇನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎನ್ಸಿಪಿಯಿಂದ ಗೆದ್ದಿದ್ದ ಭೋಸ್ಲೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು. ಭೋಸ್ಲೆ ಪರ ಪ್ರಧಾನಿ ಮೋದಿಯೇ ಪ್ರಚಾರ ನಡೆಸಿದ್ದರು. ಶ್ರೀನಿವಾಸ ಪಾಟೀಲ್ ಮಾಜಿ ಅಧಿಕಾರಿಯಾಗಿದ್ದು, ಈ ಹಿಂದೆ ಸಿಕ್ಕಿಂ ರಾಜ್ಯಪಾಲರೂ ಆಗಿದ್ದರು.
Click this button or press Ctrl+G to toggle between Kannada and English