ಮಾಜಿ ಸಿಎಂ ಹೆಚ್‌ಡಿಕೆಗೆ ಇಲ್ಲ ಆಹ್ವಾನ : ಕೊಡಗು ಜೆಡಿಎಸ್ ಅಸಮಾಧಾನ

5:42 PM, Saturday, October 26th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

HDKಮಡಿಕೇರಿ : ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ಮಹಾಮಳೆ ಹಾನಿಯ ಸಂದರ್ಭ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಕಾಲದಲ್ಲಿ ಸ್ಪಂದಿಸಿ ಸಂತ್ರಸ್ತರಿಗೆ ನೂತನ ಮನೆಗಳನ್ನು ನಿರ್ಮಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಮನೆಗಳ ಹಸ್ತಾಂತರದ ಸಂದರ್ಭ ಇಂದಿನ ಬಿಜೆಪಿ ಸರ್ಕಾರ ಕುಮಾರಸ್ವಾಮಿ ಅವರನ್ನು ಕಡೆಗಣಿಸಿದೆ ಎಂದು ಜಾತ್ಯತೀತ ಜನತಾ ದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಆರೋಪಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಅ.25 ರಂದು ಸಂತ್ರಸ್ತರಿಗಾಗಿ ಮೊದಲ ಹಂತದಲ್ಲಿ 35 ಮನೆಗಳನ್ನು ಹಸ್ತಾಂತರಿಸಲಾಗಿದೆ. ಆದರೆ ಈ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರನ್ನು ಆಹ್ವಾನಿಸದೇ ಇರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಡಗು ಜಿಲ್ಲೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಮಹಾಮಳೆಯಿಂದ ಸಂಕಷ್ಟಕ್ಕೆ ಸಿಲುಕಿದಾಗ ಜನರಲ್ಲಿ ಆತ್ಮಸ್ಥೈರ್ಯ ತುಂಬಿದವರು ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್ ಅವರುಗಳು. ಇಂದು ಜಿಲ್ಲೆಯ ವಿವಿಧೆಡೆ ನೊಂದ ಸಂತ್ರಸ್ತರಿಗಾಗಿ ಎಂಟುನೂರಕ್ಕೂ ಹೆಚ್ಚು ಸುಸಜ್ಜಿತ ಮತ್ತು ಗುಣಮಟ್ಟದ ಮನೆಗಳು ನಿರ್ಮಾಣಗೊಳ್ಳುತ್ತಿವೆ ಎಂದರೆ ಅದಕ್ಕೆ ಪ್ರಮುಖ ಕಾರಣ ಇವರಿಬ್ಬರು.
ಆದರೆ ಮನೆಗಳ ಹಸ್ತಾಂತರದ ಸಂದರ್ಭ ಸೌಜನ್ಯಕ್ಕಾದರೂ ಕುಮಾರಸ್ವಾಮಿ ಮತ್ತು ಸಾ.ರಾ.ಮಹೇಶ್ ಅವರನ್ನು ಆಹ್ವಾನಿಸದೆ ಅವಮಾನಿಸಲಾಗಿದೆ ಎಂದು ಗಣೇಶ್ ಆರೋಪಿಸಿದ್ದಾರೆ.

2018 ರಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಅಂದಿನ ಸಮ್ಮಿಶ್ರ ಸರ್ಕಾರ ಮನೆ ಬಾಡಿಗೆ ರೂಪದಲ್ಲಿ ಮಾಸಿಕ ತಲಾ 10 ಸಾವಿರ ರೂ. ನೀಡುತ್ತಾ ಬಂದಿತ್ತು. ಅಲ್ಲದೇ, ಎಂಟುನೂರಕ್ಕೂ ಹೆಚ್ಚಿನ ಕುಟುಂಬಗಳಿಗೆ ತಲಾ 10 ಲಕ್ಷ ರೂ. ವೆಚ್ಚದಲ್ಲಿ ನೂತನ ಮನೆಗಳನ್ನು ನಿರ್ಮಿಸಲು ಆರಂಭಿಸಿತು. ಮಳೆಹಾನಿಗೆ ಸಿಲುಕಿದ ಪ್ರತಿಯೊಬ್ಬರಿಗೂ ತುರ್ತು ಪರಿಹಾರವಾಗಿ ತಲಾ 3,800 ರೂ. ಗಳನ್ನು ವಿತರಿಸಲಾಗಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬುವುದಕ್ಕಾಗಿ ಸುಮಾರು ಆರು ಭಾರಿ ಜಿಲ್ಲೆಗೆ ಭೇಟಿ ನೀಡಿದ್ದರು. ಇದೆಲ್ಲವನ್ನು ಸ್ಮರಿಸಿಕೊಳ್ಳದ ಜಿಲ್ಲೆಯ ಶಾಸಕರು ಹಾಗೂ ಸಚಿವರುಗಳು ಕುಮಾರಸ್ವಾಮಿ ಅವರನ್ನು ನಿರ್ಲಕ್ಷಿಸಿರುವುದು ಕೀಳು ಮಟ್ಟದ ರಾಜಕರಣದ ಒಂದು ಭಾಗವಾಗಿದೆ ಎಂದು ಗಣೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಸ್ತುತ ವರ್ಷ ಸಂಭವಿಸಿದ ಮಳೆಹಾನಿ ಸಂತ್ರಸ್ತರಿಗೆ ಕನಿಷ್ಟ ಸಾಂತ್ವನ ಹೇಳುವುದಕ್ಕು ಜಿಲ್ಲೆಗೆ ಆಗಮಿಸಿಲ್ಲ. ಸಂತ್ರಸ್ತರಿಗೆ ಸಕಾಲದಲ್ಲಿ ಪರಿಹಾರವನ್ನು ವಿತರಿಸುವಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರ ಕೊಡಗಿನ ನೊಂದ ಮಂದಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಟೀಕಿಸಿದ್ದಾರೆ.

ಈಗಿನ ಸರ್ಕಾರ ಮನೆ ಬಾಡಿಗೆ ಮೊತ್ತ ರೂ. 5 ಸಾವಿರ ಮತ್ತು ಮನೆ ನಿರ್ಮಾಣಕ್ಕೆ ಕೇವಲ ತಲಾ 5 ಲಕ್ಷ ರೂ. ನೀಡುವುದಾಗಿ ಹೇಳುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲವೆಂದು ತಿಳಿಸಿರುವ ಗಣೇಶ್, ಈ ಹಿಂದಿನ ಸರ್ಕಾರ ನೀಡುತ್ತಿದ್ದ ರೀತಿಯಲ್ಲೇ ಬಾಡಿಗೆ ತಲಾ 10 ಸಾವಿರ ರೂ. ಹಾಗೂ ನೂತನ ಮನೆ ನಿರ್ಮಾಣಕ್ಕೆ ತಲಾ 10 ಲಕ್ಷ ರೂ. ನೀಡಬೆಕೇಂದು ಒತ್ತಾಯಿಸಿದ್ದಾರೆ. ತಪ್ಪಿದಲ್ಲಿ ಸಂತ್ರಸ್ತರನ್ನು ಒಗ್ಗೂಡಿಸಿ ಜೆಡಿಎಸ್ ವತಿಯಿಂದ ಹೋರಾಟವನ್ನು ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English