ಬಂಟ್ವಾಳ : ಎಂಆರ್ ಪಿಎಲ್ ಸಂಸ್ಥೆಯು ಸಿಎಸ್.ಆರ್. ನಿಧಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕು ಆಸ್ಪತ್ರೆಗಳಿಗೆ ನೀಡಿರುವ 4 ಹೊಸ ಆ್ಯಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಬುಧವಾರ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ನಡೆಯಿತು.
ಆ್ಯಂಬುಲೆನ್ಸ್ ಗಳ ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದಲ್ಲಿ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಇತ್ತೀಚಿನ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಹೆರಿಗೆ ಸಾವುಗಳು ಸಂಪೂರ್ಣ ಕಡಿಮೆಯಾಗಿದ್ದು , ಈ ಮಟ್ಟಕ್ಕೆ ಇಲ್ಲಿನ ಆರೋಗ್ಯ ವ್ಯವಸ್ಥೆಗಳು ಮುಂದುವರಿದಿದೆ ಎಂಬುದಕ್ಕೆ ಸಂತಸವಾಗುತ್ತದೆ. ಇಂತಹ ಆರೋಗ್ಯ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ಉಳಿಸಿಕೊಂಡು, ಮತ್ತಷ್ಟು ಶಕ್ತಿಯುತವಾಗಿ ಮಾರ್ಪಾಡು ಮಾಡಲು ಮೂಲಭೂತ ಸೌಕರ್ಯಗಳ ಅಗತ್ಯತೆ ಬಹಳಷ್ಟು ಇದ್ದು, ಎಂ.ಆರ್.ಪಿ.ಎಲ್.ನಂತಹ ಸಂಸ್ಥೆಗಳು ಸಹಕಾರ ನೀಡಿರುವುದು ಅಭಿನಂದನೀಯ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಜಿಲ್ಲೆಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಂ.ಆರ್.ಪಿ.ಎಲ್. ತನ್ನ ಸಾಮಾಜಿಕ ಜವಾಬ್ದಾರಿಯನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದೆ. ಕಳೆದ ವರ್ಷ 40 ಕೋಟಿ ರೂ.ಗಳ ನೆರವನ್ನು ಸಂಸ್ಥೆ ಯ ಸಿ.ಎಸ್.ಆರ್. ನಿಂದ ನೀಡಿದೆ. ಮಂಗಳೂರಿನ ಲೇಡಿ ಗೋಶನ್ ಆಸ್ಪತ್ರೆಗೆ 34 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡದ ನಿರ್ಮಾಣ ಮಾಡಿಕೊಟ್ಟಿದೆ. ಸಂಸ್ಥೆಯು ಇಂತಹ ಅನೇಕ ಕೊಡುಗೆಯನ್ನು ನೀಡಿದ್ದು ಸಾಮಾಜಿಕ ಕಳಕಳಿಯ ಬಗ್ಗೆ ಶ್ಲಾಘಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ ಶುಭ ಹಾರೈಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೂಡು, ಜಿ.ಪಂ. ಸ್ಥಾಯಿ ಸಮಿತಿಯ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಕಾವು, ಜಿ.ಪಂ. ಸದಸ್ಯರಾದ ಎಂ.ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ, ಎಂ.ಎಸ್.ಮುಹಮ್ಮದ್, ಮಂಜುಳಾ ಮಾಧವ ಮಾವೆ, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ಎಂ.ಆರ್.ಪಿ.ಎಲ್. ಪ್ರಮುಖರಾದ ಬಿಎಚ್.ವಿ.ಪ್ರಸಾದ್, ರಾಮ ಸುಬ್ರಹ್ಮಣ್ಯ, ಭಟ್ , ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English