ಮೀನುಗಾರರಿಗೆ ಭಯ ಹುಟ್ಟಿಸುವ `ಅಳಿವೆ ಬಾಗಿಲು’ ಸಂಪೂರ್ಣ ಡ್ರೆಜ್ಜಿಂಗ್ಗಾಗಿ ಕಾಯುತ್ತಿದ್ದಾರೆ ಮೀನುಗಾರರು…

2:03 PM, Saturday, October 20th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

fishing boat accidentಮಂಗಳೂರು : ಕರಾವಳಿಯಲ್ಲಿ ಮೀನುಗಾರಿಕೆಯೇ ಆರ್ಥಿಕ ಸಂಪತ್ತಿನ ಪ್ರಮುಖ ಕೇಂದ್ರ. ಲಕ್ಷಾಂತರ ಮೊತ್ತದ ವಹಿವಾಟು ಮೀನುಗಾರಿಕೆ ಮೂಲಕ ನಡೆಯುತ್ತದೆ. ದೇಶ ವಿದೇಶಗಳಿಗೆ ಇಲ್ಲಿನ ಮತ್ಸ್ಯ ಸಂಪತ್ತು ರವಾನೆಯಾಗುತ್ತಿದೆ. ಆದರೆ ಮೀನುಗಾರಿಕೆಯನ್ನೇ ಕಾಯಕವನ್ನಾಗಿಸಿಕೊಂಡಿರುವ ಮೀನುಗಾರರು ಮಾತ್ರ ಜೀವ ಭಯದಿಂದಲೇ ಸಮುದ್ರಕ್ಕಿಳಿಯುವ ಸನ್ನಿವೇಶವಿದೆ.

ಕಡಲ ಒಡಲಿಗಿಳಿದು ಮೀನುಗಾರಿಕೆ ನಡೆಸುತ್ತಿರುವ ಮೀನುಗಾರರ ಜೀವಕ್ಕೆ ನಿರಂತರ ಆಪತ್ತು ಎದುರಾಗುತ್ತಿದೆ. ಆಳಸಮುದ್ರಕ್ಕೆ ತೆರಳಿ ಲಕ್ಷಾಂತರ ಮೊತ್ತದ ಮೀನುಗಳನ್ನು ಹೊತ್ತು ವಾಪಾಸು ಬರುತ್ತಿದ್ದರೂ ನೆಮ್ಮದಿಯಿಂದ ದಡ ಸೇರುತ್ತೇವೆ ಎಂಬ ನಂಬಿಕೆ ಅವರಲ್ಲಿರುವುದಿಲ್ಲ. ಮಂಗಳೂರಿನ ಬಂದರು(ಧಕ್ಕೆ) ಪ್ರವೇಶಿಸುವ ಅಳಿವೆ ಬಾಗಿಲು ಕಂಟಕದಂತೆ ಮೀನುಗಾರರನ್ನು ಕಾಡುತ್ತದೆ!

ಹೌದು, ಮಂಗಳೂರಿನ ಮೀನುಗಾರರು ಅಳಿವೆಬಾಗಿಲ ಗಡಿ ಭಾಗ ಎಂದರೆ ಭಯಪಡುತ್ತಾರೆ. ಇಲ್ಲಿ ಸಂಪೂರ್ಣ ಡ್ರೆಜ್ಜಿಂಗ್ ಆಗಬೇಕೆಂಬ ಮೀನುಗಾರರ ಬೇಡಿಕೆ ಇನ್ನೂ ನೆರವೇರಿಲ್ಲ.

ಹೂಳು ತುಂಬಿರುವ ಈ ಭಾಗ ಈಗಾಗಲೇ ನೂರಾರು ಅವಘಡಗಳಿಗೆ ಕಾರಣವಾಗಿದೆ. ಈಗಲೂ ಮುಂದುವರಿಯುತ್ತಿದೆ. ಆಗಸ್ಟ್ ತಿಂಗಳಲ್ಲಿ ಇಲ್ಲಿ ಐದು ದೋಣಿ ಅವಘಡ ಸಂಭವಿಸಿ ಮೀನುಗಾರರನ್ನು ಸಂಕಷ್ಟಕ್ಕೆ ದೂಡಿದೆ.

ಬಂದರು ಪ್ರವೇಶಿಸಬೇಕಾದರೆ ಮೀನುಗಾರಿಕಾ ಬೋಟುಗಳು ಅಳಿವೆಬಾಗಿಲ ಮೂಲಕವೇ ಪ್ರವೇಶಿಸಬೇಕು. ಆದರೆ ಇಲ್ಲಿ ಹೂಳು ತುಂಬಿರುವುದರಿಂದ ದೋಣಿಗಳು ಮರಳ ದಿಣ್ಣೆಗೆ ತಾಗಿ ಮುಳುಗುತ್ತಿವೆ. ಮೀನುಗಾರರ ಜೀವಕ್ಕೂ ಕುತ್ತು ತರುತ್ತಿದೆ.

ಸರಣಿ ಅವಘಡ

ಕಳೆದ ಒಂದು ತಿಂಗಳ ಅವಧಿಯಲ್ಲೇ ಈ ಭಾಗದಲ್ಲಿ ಐದು ಅವಘಡಗಳು ಸಂಭವಿಸಿವೆ. ಆ.26ರ ಮುಂಜಾನೆ ಆಳ ಸಮುದ್ರ ಮೀನುಗಾರಿಕೆ ನಡೆಸಿ ಸುಮಾರು 5 ಲಕ್ಷದಷ್ಟು ಮೊತ್ತದ ಮೀನನ್ನು ಹೊತ್ತು ಬರುತ್ತಿದ್ದ `ಹಾರ್ಬರ್ ಸೀಲ್’ ಹೆಸರಿನ ಬೋಟ್ ಅಳಿವೆ ಬಾಗಿಲಿನಲ್ಲಿ ಮರಳ ದಿಣ್ಣೆಗೆ ತಾಗಿ ಅವಘಡಕ್ಕೆ ತುತ್ತಾಗಿತ್ತು. ತಕ್ಷಣ ಬೇರೆ ಬೋಟ್ ಮೂಲಕ ಇದರಲ್ಲಿದ್ದ 11 ಮಂದಿ ಮೀನುಗಾರರನ್ನು ರಕ್ಷಿಸಲಾಗಿತ್ತು. ಆ.5ರಂದು ಪಿ.ಟಿ.ಸಾದಿಕ್ ಅವರ ಗಿಲ್ನೆಟ್ ಬೋಟೊಂದು ಮಗುಚಿ ಬಿದ್ದಿತ್ತು. ಆ.6ರಂದು ಎರಡು ಅವಘಡಗಳು ಸಂಭವಿಸಿದ್ದವು. ಇದರಿಂದ ಎಂಟು ಮಂದಿ ಮೀನುಗಾರರನ್ನು ಬೇರೆ ಬೋಟ್ನವರು ರಕ್ಷಿಸಿದ್ದರು.

ಸಾನಿಯಾ ಮಂಜುಶ್ರೀ ಎಂಬ ಹೆಸರಿನ ಪರ್ಸೀನ್ ಬೋಟ್ ಅಳಿವೆ ಬಾಗಿಲ ಮೂಲಕ ಬಂದರಿಗೆ ಬರುವಾಗ ಸಮುದ್ರ ಪಾಲಾಗಿತ್ತು. ಅಲ್ಲದೆ ಸೈಯದ್ ಮದನಿ ಹೆಸರಿನ ಗಿಲ್ನೆಟ್ ಬೋಟ್ ಕೂಡ ನೀರುಪಾಲಾಗಿತ್ತು. ಆ.19ರಂದು ಸೋಮೇಶ್ವರ ಕಡಲ ಕಿನಾರೆಯಿಂದ 30 ಮಾರು ದೂರದಲ್ಲಿ ಬೋಟ್ ಅವಘಡ ಸಂಭವಿಸಿ ಸುಮಾರು 30 ಲಕ್ಷದಷ್ಟು ನಷ್ಟ ಉಂಟಾಗಿತ್ತು. ಎಂಟು ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರಪಾಗಿದ್ದರು.

ಹೀಗೆ ನಿರಂತರ ಅವಘಡಗಳು ಸಂಭವಿಸುತ್ತಲೇ ಇವೆ. ಮೀನುಗಾರರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಲೇ ಇದ್ದಾರೆ. ಅಳಿವೆ ಬಾಗಿಲಿನಲ್ಲಿ ಸಂಪೂರ್ಣ ಹೂಳೆತ್ತುವಿಕೆ ಕಾರ್ಯ ಮಾತ್ರ ಇನ್ನೂ ಆಗಿಲ್ಲ. ಇದು ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ ಎಂದು ಮೀನುಗಾರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ಶಾಶ್ವತ ಡ್ರೆಜ್ಜರ್ಗೆ ಆಗ್ರಹ

ಇಲ್ಲಿನ ಬಂದರು ಅಳಿವೆಬಾಗಿಲಿನಲ್ಲಿ ಸಂಪೂರ್ಣವಾಗಿ ಡ್ರೆಜ್ಜಿಂಗ್ ನಡೆಯಬೇಕು. ಮೀನುಗಾರಿಕೆ ನಡೆಸಿ ದಡ ಸೇರುವ ಬೋಟುಗಳಿಗೆ ರಕ್ಷಣೆ ಒದಗಿಸಬೇಕು ಎಂಬ ಬೇಡಿಕೆಗೆ ಇನ್ನೂ ಸೂಕ್ತ ಸ್ಪಂದನೆ ದೊರಕಿಲ್ಲ. ಹೂಳೆತ್ತಲು ಶಾಶ್ವತ ಡ್ರೆಜ್ಜರ್ ಒದಗಿಸಬೇಕೆಂಬ ಬೇಡಿಕೆಯೂ ಈಡೇರಿಲ್ಲ ಎನ್ನುತ್ತಾರೆ ಮೀನುಗಾರರು.

ಮೀನುಗಾರರ ಆಗ್ರಹ

ಅಳಿವೆ ಬಾಗಿಲಿನಲ್ಲಿ ಸರಿಯಾದ ನಿಶಾನೆ ಇಲ್ಲದಿರುವುದು ಕೂಡ ಸಮಸ್ಯೆಯಾಗಿದೆ. ರಾತ್ರಿ ವೇಳೆ ಬೋಟ್ಗಳು ಬರುವಾಗ ನಿಶಾನೆ ಇಲ್ಲದೆ ಅವಘಡಕ್ಕೆ ತುತ್ತಾಗಲು ಕಾರಣವಾಗುತ್ತಿದೆ. ಆದ್ದರಿಂದ ತಕ್ಷಣ ಮೀನುಗಾರಿಕಾ ಇಲಾಖೆ ಸಮರ್ಪಕ ರೀತಿಯ ನಿಶಾನೆ ಅಳವಡಿಸಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ. ಅಲ್ಲದೆ ಡೆಂಡೆನ್ ಹಡಗು ಮುಳುಗಡೆಯಾದ ಪ್ರದೇಶದಲ್ಲಿ ಕೂಡ 11 ದೋಣಿಗಳು ಹಡಗಿಗೆ ತಾಗಿ ಮುಳುಗಡೆಯಾಗಿವೆ. ಆದ್ದರಿಂದ ಶೀಘ್ರ ಡೆಂಡೆನ್ ಹಡಗನ್ನು ಮೇಲೆತ್ತುವ ಕೆಲಸ ಆಗಬೇಕು ಎಂಬುದು ಮೀನುಗಾರರ ಆಗ್ರಹ.

2ಸಾವಿರದಷ್ಟು ಬೋಟ್ಗಳು

ಮಂಗಳೂರು ಬಂದರಿನಲ್ಲಿ ಸುಮಾರು 1 ಸಾವಿರ ಟ್ರಾಲ್ ಬೋಟ್ಗಳು, 120 ಪರ್ಸೀನ್ ಹಾಗೂ 350ರಷ್ಟು ಗಿಲ್ನೆಟ್ ಬೋಟ್ಗಳು ಸೇರಿ 2 ಸಾವಿರದಷ್ಟು ಯಾಂತ್ರೀಕೃತ ಬೋಟ್ಗಳು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಸಾವಿರಾರು ಮಂದಿ ಕಾರ್ಮಿಕರಿದ್ದಾರೆ. ಮೀನುಗಾರಿಕೆಯನ್ನೇ ನಂಬಿರುವ ಈ ಮಂದಿಗೆ ಕಡಲಿಗಿಳಿಯದಿದ್ದರೆ ಬೇರೆ ಉದ್ಯೋಗವಿಲ್ಲ. ಆದರೆ ನಿರಂತರವಾಗಿ ಸಂಕಷ್ಟ ತರುತ್ತಿರುವ ಅಳಿವೆ ಬಾಗಿಲು ಮೀನುಗಾರರಲ್ಲಿ ಆತಂಕ ಹೆಚ್ಚುವಂತೆ ಮಾಡುತ್ತಿದೆ.

3ನೇ ಹಂತದ ಜೆಟ್ಟಿ ಶೀಘ್ರ ಆಗಲಿ

ಮಂಗಳೂರು ಬಂದರಿನಲ್ಲಿ ಸುವ್ಯವಸ್ಥೆಯ ಮೀನುಗಾರಿಕಾ ಜೆಟ್ಟಿ ಆಗಬೇಕೆಂಬುದು ಮೀನುಗಾರರ ಬಹುದೊಡ್ಡ ಬೇಡಿಕೆ. ಸರಕಾರ ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದು ಈಗಾಗಲೇ ಟೆಂಡರ್ ಕರೆದು ಕಾಮಗಾರಿಯನ್ನು ಆರಂಭಿಸಿದೆ. ಆದರೆ ಜಟ್ಟಿ ನಿರ್ಮಾಣದ ವಿನ್ಯಾಸದಲ್ಲಿ ಆದ ಗೊಂದಲದಿಂದಾಗಿ ಇದು ವಿಳಂಭವಾಗಿತ್ತು. ಆದಷ್ಟು ಬೇಗ ಮೂರನೇ ಹಂತದ ಜೆಟ್ಟಿ ನಿರ್ಮಾಣ ಕಾರ್ಯ ಆಗಬೇಕು. ಬೋಟ್ಗಳು ತಂಗಲು ಸೂಕ್ತ ವ್ಯವಸ್ಥೆಯಾಗಬೇಕು ಎಂಬುದು ಮೀನುಗಾರರ ಬೇಡಿಕೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English