ಮಂಗಳೂರು: ರಾಜ್ಯ ಹೈಕೋರ್ಟ್ ನ ತಡೆಯಾಜ್ಞೆ ಮತ್ತು ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಷೇಧಾಜ್ಞೆಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸುಮಾರು 200 ಜಲ್ಲಿ ಕ್ರಷರ್ ಗಳು ಸೆಪ್ಟಂಬರ್ 22ರಿಂದ ಮುಚ್ಚಲ್ಪಟ್ಟಿದೆ. ಅಂದರೆ, ಕಳೆದ ಮೂರು ವಾರದಿಂದ ಜಿಲ್ಲೆಯ ಯಾವುದೇ ಜಲ್ಲಿ ಕ್ರಷರ್ ಗಳು ಸ್ತಬ್ಧವಾಗಿದೆ. ಇದರಿಂದ ಜಲ್ಲಿ ಕ್ರಷರ್ ಗೆ ಪೂರಕವಾದ ವಿವಿಧ ಉದ್ಯಮ, ಸಾರಿಗೆ ವ್ಯವಸ್ಥೆ, ಕಾರ್ಮಿಕ ವಿಭಾಗಕ್ಕೆ ಬಾರೀ ಹೊಡೆತ ಬಿದ್ದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಹಾಗಾಗಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ.
ಜಿಲ್ಲಾಡಳಿತದಿಂದ ಅನುಮತಿ ಮತ್ತು ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರಾಕ್ಷೇಪಣ ಪ್ರಮಾಣ ಪತ್ರ ಪಡೆದು ಹಾಗು ಎಲ್ಲ ರೀತಿಯ ನೀತಿಯನ್ನು ಪಾಲಿಸಿಕೊಂಡು, ವಾಯು – ಶಬ್ದ ಮಾಲಿನ್ಯವಿಲ್ಲದೆ ಜಲ್ಲಿ ಕ್ರಷರ್ ಮಾಡಲಾಗುತ್ತಿದೆ ಎಂಬುದು ಕೋರೆ ಗಣಿ ಮಾಲಕರ ಸಂಘದ ಸಬೂಬು.
ಜಿಲ್ಲೆಯಲ್ಲಿ ಸಣ್ಣ ಮತ್ತು ದೊಡ್ಡ ಎಂದೆಲ್ಲಾ 200 ಜಲ್ಲಿ ಕ್ರಷರ್ ಘಟಕಗಳಿವೆ. ಅಂದಾಜು 60 ಸಾವಿರ ಕಾರ್ಮಿಕರು ಮತ್ತವರ ಕುಟುಂಬಗಳು ಈ ಘಟಕವನ್ನು ಅವಲಂಬಿಸಿದೆ. ಅಲ್ಲದೆ, ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳ ಆದಾಯ ಮತ್ತು ಮಾರಾಟ ತೆರಿಗೆ ಪಾವತಿಸಲಾಗುತ್ತದೆ.
ಜಲ್ಲಿ ಕ್ರಷರ್ ಗೆ ವಿಶೇಷ ವಲಯ ಸ್ಥಾಪಿಸಲು ಹೈಕೋರ್ಟ್ ಆದೇಶಿಸಿದೆ. ಆದರೆ, ಇದು ಅವೈಜ್ಞಾನಿಕ ಎಂದು ಕೋರೆ ಗಣಿ ಮಾಲಕರರು ಅಭಿಪ್ರಾಯಪಡುತ್ತಾರೆ. ಯಾಕೆಂದರೆ, ಜಿಲ್ಲೆಯಲ್ಲಿ ಪ್ರತ್ಯೇಕ ವಲಯ ಸ್ಥಾಪಿಸಲು ಸುಮಾರು 800 ಎಕ್ರೆ ಜಾಗ ಬೇಕು. ಭೂಮಿಯ ಮೌಲ್ಯ ಇದೀಗ ಗಗನಕ್ಕೆ ಏರಿದೆ.ಹಾಗಾಗಿ ಪ್ರತ್ಯೇಕ ವಲಯ ಸ್ಥಾಪನೆ ಕನಸಿನ ಮಾತು. ಜಲ್ಲಿ ಕ್ರಷರ್ ಘಟಕ ಸ್ಥಾಪಿಸಲು ಅಗಲವಾದ ರಸ್ತೆ, ಸಾಕಷ್ಟು ವಿದ್ಯುಚ್ಛಕ್ತಿ, ನೀರು ಸರಬರಾಜು, ಕಾರ್ಮಿಕರಿಗೆ ವಸತಿ ಮತ್ತು ಸಾರಿಗೆ ಸೌಕರ್ಯ ಹಾಗು ಕೋರೆ ಕಲ್ಲಿನ ನಿಕ್ಷೇಪ ಹತ್ತಿರದಲ್ಲಿರಬೇಕು. ಆದರೆ ಪ್ರಾಯೋಗಿಕವಾಗಿ ಇದು ಅಸಾಧ್ಯ. ಇದರಿಂದ ಮುಂದಿನ ದಿನಗಳಲ್ಲಿ ಕೋರೆ ಕಲ್ಲಿನ ಬೆಲೆ ಕೂಡ ಹೆಚ್ಚಳವಾಗುವ ಸಂಭವವಿದೆ.
ಈಗಾಗಲೆ ಜಿಲ್ಲಾಡಳಿತ, ಗ್ರಾಮ ಪಂಚಾಯತ್ ಗೆ ಜಲ್ಲಿ ಕ್ರಷರ್ ನಡೆಸದಂತೆ ಸೂಚನೆ ನೀಡಲಾಗಿದೆ. ಅಲ್ಲದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮೆಸ್ಕಾಂಗೆ ತಿಳಿಸಲಾಗಿದೆ. ಸರಕಾರ ತಕ್ಷಣ ಮಧ್ಯ ಪ್ರವೇಶಿಸಬೇಕು ಮತ್ತು ಯಾವುದೇ ಅಡಚಣೆಯಿಲ್ಲದೆ ಮುಕ್ತವಾಗಿ ಜಲ್ಲಿ ಕ್ರಷರ್ ನಡೆಸಲು ಅವಕಾಶ ಕಲ್ಪಿಸಬೇಕು. ಆವರೆಗೆ ಸ್ವಯಂ ಪ್ರೇರಿತವಾಗಿ ಬಂದ್ ನಡೆಸಲಾಗುವುದು ಎಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕೋರೆ ಗಣಿ ಮಾಲಕರ ಸಂಘ ಎಚ್ಚರಿಸಿತ್ತು.
ಜಲ್ಲಿ ಕ್ರಷರ್ ಮುಚ್ಚಿ ಹಲವು ದಿನಗಳಾಗಿವೆ. ಮಧ್ಯ ಪ್ರವೇಶಿಸುವಂತೆ ಪ್ರಯೋಜನ ಮಾತ್ರ ಶೂನ್ಯ. ನಿಷೇಧಾಜ್ಞೆ ಕೇವಲ ಕರ್ನಾಟಕದಲ್ಲಿ ಮಾತ್ರ ಜಾರಿಯಲ್ಲಿದೆ. ಹಾಗಾಗಿ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ವಿಶೇಷ ಗಮನಹರಿಸಿ ಮಧ್ಯ ಪ್ರವೇಶಿಸಬೇಕು ಎಂದು ಸಂಘ ಒತ್ತಾಯಿಸಿದ ಹಿನ್ನೆಲೆಯಲ್ಲಿ ಕಾವೇರಿ ಗಲಾಟೆಯ ಗಡಿಬಿಡಿಯ ಮಧ್ಯೆಯೂ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೋರೆ ಗಣಿ ಮಾಲಕರ ಸಂಘದ ರಾಜ್ಯ ಮುಖಂಡರ ಜತೆ ಚರ್ಚೆ ನಡೆಸಿ ವಸ್ತುಸ್ಥಿತಿ ಅಧ್ಯಯನಕ್ಕೆ ಮತ್ತು ನ್ಯಾಯಾಲಯಕ್ಕೆ ವಿಷಯ ಮನವರಿಕೆ ಮಾಡಿಕೊಳ್ಳುವ ಸಲುವಾಗಿ ಸಮಿತಿಯನ್ನು ರಚಿಸಲು ನಿರ್ಧರಿಸಿದ್ದಾರೆ
* ಕಟ್ಟಡ ನಿರ್ಮಾಣ ಕಾರ್ಯಕ್ಕೆ ಹೊಡೆತ : ಮಂಗಳೂರು ನಗರ ಮತ್ತು ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ವಸತಿ ಮತ್ತು ವಾಣಿಜ್ಯ ಸಂಕೀರ್ಣ ತಲೆ ಎತ್ತುತ್ತಿವೆ. ಅಲ್ಲದೆ ಮನೆ, ಅಂಗಡಿ ಮುಂಗಟ್ಟುಗಳ ನಿರ್ಮಾಣ ವಾಗುತ್ತಿದೆ. ಈ ಎಲ್ಲ ಕಟ್ಟಡಗಳ ನಿರ್ಮಾಣ ಕ್ಕೆ ಜಲ್ಲಿಯ ಅವಶ್ಯಕತೆಯಿದೆ. ಹಿಂದೊಮ್ಮೆ ಮಾಫಿಯಾಗಳ ಕೈಗೆ `ಹೊಗೆ’ ಸಿಲುಕಿ ಬಡಪಾಯಿಗಳು ಮನೆ ಮತ್ತಿತರ ಕಟ್ಟಡಗಳನ್ನು ನಿರ್ಮಿಸಲಾರದಷ್ಟು ಸಂಕಷ್ಟ ಅನುಭವಿಸಿದ್ದರು. ಇದೀಗ ಹೊಗೆಯಿಂದ ಮುಕ್ತಿ ಪಡೆಯುತ್ತಲೇ `ಜಲ್ಲಿ’ಯ ಸಮಸ್ಯೆಗೆ ಸಿಲುಕಿದ್ದಾರೆ.
ಸಕಾಲಕ್ಕೆ ಜಲ್ಲಿ ಸಿಗದೆ ಮನೆ, ಕಟ್ಟಡಗಳ ನಿರ್ಮಾಣ ಕಾರ್ಯ ಕುಂಠಿತಗೊಂಡಿದೆ. ಇದಕ್ಕೆ ಪೂರಕವಾಗಿರುವ ಎಲ್ಲ ವ್ಯವಹಾರಗಳ ಮೇಲೂ `ಜಲ್ಲಿ’ಯ ಕರಿನೆರಳು ಬಿದ್ದಿದೆ.
`ಜಿಲ್ಲೆಯ ಸುಮಾರು 200 ಜಲ್ಲಿ ಕ್ರಷರ್ ಘಟಕಗಳಲ್ಲಿ ಸಾವಿರಾರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಾರೆ. ಅದರಲ್ಲೂ ಉತ್ತರ ಭಾರತದ ಕಾರ್ಮಿಕರೇ ಅಧಿಕ. ಕೆಲಸ ಇಲ್ಲ ಎಂದು ಅವರನ್ನು ಊರಿಗೆ ಕಳುಹಿಸಿದರೆ ಮತ್ತೆ ಅವರನ್ನು ಕರೆತರುವುದು ಕಷ್ಟ. ಹಾಗಾಗಿ ನಷ್ಟದ ಮಧ್ಯೆಯೂ ಅನೇಕ ಜಲ್ಲಿ ಕ್ರಷರ್ ಮಾಲಕರು ಸಂಬಳ ಕೊಟ್ಟು ಊರಿಗೆ ಹೋಗದಂತೆ ತಡೆ ಹಿಡಿದಿದ್ದಾರೆ. ಒಂದು ವೇಳೆ ಸಂಬಳ ಕೊಡದಿದ್ದರೆ, ಕಾರ್ಮಿಕರು ಊರು ಬಿಟ್ಟು ಹೋಗುವುದು ಖಂಡಿತ. ಒಮ್ಮೆ ಊರು ಬಿಟ್ಟರೆ ಮತ್ತೆ ಅವರೆಂದೂ ತಿರುಗಿ ಬರುವ ಸಾಧ್ಯತೆಯಿಲ್ಲ. ಯಾಕೆಂದರೆ, ಅವರು ಬೇರೆ ಕಡೆ ವಲಸೆ ಹೋಗುತ್ತಾರೆ. ಹೀಗಾದರೆ ಎಷ್ಟು ದಿನದಲ್ಲಿ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಹೇಳಲಾಗದು. ಹಾಗಾಗಿ ಸರಕಾರ ತಕ್ಷಣ ಮಧ್ಯ ಪ್ರವೇಶಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಮನೋಜ್ ಶೆಟ್ಟಿ ಆಗ್ರಹಿಸುತ್ತಾರೆ.
ಒಟ್ಟಿನಲ್ಲಿ ಜಲ್ಲಿಯ ಕೊರತೆಯಿಂದ ಎಲ್ಲ ರೀತಿಯ ಕಟ್ಟಡ ಕಾಮಗಾರಿ ಸ್ಥಗಿತದ ಹಂತ ತಲುಪಿದೆ.ಅದರ ನೇರ ಪರಿಣಾಮ ಇದೀಗ ಹಾಲೋಬ್ಲಾಕ್ ಗಳ, ಇಂಟರ್ಲಾಕ್ ನಿರ್ಮಾಣ ಘಟಕಗಳು, ಸಿಮೆಂಟ್, ಕಬ್ಬಿಣ ಖರೀದಿ, ವಿದ್ಯುತ್, ಕಲ್ಲು, ಹೊಗೆ, ಬಡಗಿ, ಗಾರೆ, ಕೂಲಿ ಕಾರ್ಮಿಕರು… ಹೀಗೆ ಒಂದಕ್ಕೊಂದು ಪೂರಕವಾಗಿ ಎಲ್ಲ ಕ್ಷೇತ್ರಗಳ ಮತ್ತು ಜನರ ಮೇಲಾಗುತ್ತಿದೆ. ಅಲ್ಲಲ್ಲಿದ್ದ ಅಲ್ಪಸ್ವಲ್ಪ ಜಲ್ಲಿಗೆ ಹೆಚ್ಚು ಬೆಲೆ ನೀಡಿ ಖರೀದಿಸುವಂತಹ ಪ್ರಮೇಯವೂ ಸೃಷ್ಟಿಯಾಗಿದೆ. ಹೀಗೆ ಮುಂದುವರಿದರೆ ಕಟ್ಟಡ ನಿರ್ಮಾಣ ಮಾತ್ರವಲ್ಲ `ಭೂ ವ್ಯವಹಾರ’ದ ಮೇಲೂ ಇದರ ಪರಿಣಾಮ ಬೀಳುವ ಅಪಾಯ ತಪ್ಪಿದ್ದಲ್ಲ.
Click this button or press Ctrl+G to toggle between Kannada and English