ಮಡಿಕೇರಿ : ವಿದ್ಯಾರ್ಥಿಗಳನ್ನು ಅನ್ವೇಷಣಾ ಕ್ಷೇತ್ರದಲ್ಲಿ ತೊಡಗಿಸುವ ಮೂಲಕ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಮೂಡಿಸಿ ಭವಿಷ್ಯದ ವಿಜ್ಞಾನಿಗಳನ್ನಾಗಿ ರೂಪಿಸಲು ಶಿಕ್ಷಕರು ಪ್ರೇರೇಪಿಸಬೇಕು ಎಂದು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷ ಕೆ.ಟಿ.ಬೇಬಿಮ್ಯಾಥ್ಯೂ ಸಲಹೆ ನೀಡಿದ್ದಾರೆ.
ತಂತ್ರಜ್ಞಾನ ಸಂವಹನ ಮಂಡಳಿ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ, ಕೊಡಗು ವಿಜ್ಞಾನ ಮತ್ತು ಪರಿಸರ ಸಂಸ್ಥೆ, ನಗರದ ರೋಟರಿ ಮಿಸ್ಟಿಹಿಲ್ಸ್ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಜಿಲ್ಲಾ ಪ್ರಾದೇಶಿಕ ಕಚೇರಿಯ ಸಂಯುಕ್ತಾಶ್ರಯದಲ್ಲಿ ಸ್ವಚ್ಛ, ಹಸಿರು ಮತ್ತು ಆರೋಗ್ಯವಂತ ರಾಷ್ಟ್ರಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳು ಎಂಬ ಕೇಂದ್ರ ವಿಷಯದಡಿ ನಡೆಯಲಿರುವ 27 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಪೂರ್ವಭಾವಿಯಾಗಿ ನಗರದ ರೋಟರಿ ಮಕ್ಕಳ ವಿಜ್ಞಾನ ಕೇಂದ್ರದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಕೊಡಗು ಜಿಲ್ಲಾ ಮಟ್ಟದ ಮಾರ್ಗದರ್ಶಿ ಶಿಕ್ಷಕರ ಕಾರ್ಯಗಾರ ಸೋಮವಾರ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರು ಮಕ್ಕಳಲ್ಲಿ ಮೂಲ ವಿಜ್ಞಾನ ಕಲಿಕೆಯಲ್ಲಿ ಆಸಕ್ತಿ ಬೆಳೆಸಬೇಕೆಂದರು. ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ನವೀನ ಪರಿಕಲ್ಪನೆಗಳು ಮತ್ತು ವೈಜ್ಞಾನಿಕ ವಿಧಾನಗಳ ಮೂಲಕ ಪ್ರಚಲಿತ ಪ್ರಾಕೃತಿಕ ಹಾಗೂ ಪರಿಸರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಇಂತಹ ಸಮ್ಮೇಳನಗಳು ಪೂರಕವಾಗಿವೆ ಎಂದರು.
ಜಿಲ್ಲೆಯಲ್ಲಿ ರಾಜ್ಯ ವಿಜ್ಞಾನ ಪರಿಷತ್ತು, ಶಿಕ್ಷಣ ಇಲಾಖೆ ಸಹಕಾರದೊಂದಿಗೆ ವೈವಿದ್ಯಮಯ ವಿಜ್ಞಾನ ಕಾರ್ಯಕ್ರಮಗಳ ಮೂಲಕ ವಿಜ್ಞಾನ ಜನಪ್ರಿಯಗಳಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಬೇಬಿ ಮ್ಯಾಥ್ಯೂ ಅವರು ಹೇಳಿದರು.
ಸಮಾವೇಶದ ಕುರಿತು ಮಾಹಿತಿ ನೀಡಿದ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಕಾರ್ಯದರ್ಶಿ ಟಿ.ಜಿ.ಪ್ರೇಮಕುಮಾರ್, ಈ ಸಮಾವೇಶವು ಮಕ್ಕಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸಲು ಉತ್ತಮ ವೇದಿಕೆ ಒದಗಿಸಿದೆ ಎಂದರು.
ಸಮಾವೇಶದ ಮೂಲಕ ಮಕ್ಕಳನ್ನು ಸ್ಥಳೀಯ ಸಾಮಾಜಿಕ ಸಮಸ್ಯೆಯನ್ನು ಪರಿಹರಿಸಲು ಹಾಗೂ ಸಂಶೋಧನೆ ಕೈಗೊಳ್ಳಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಮಟ್ಟದ ಸಮಾವೇಶವು ಡಿಸೆಂಬರ್ 16 ರಿಂದ 18 ರವರೆಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ ಹಾಗೂ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವು ಡಿಸೆಂಬರ್, 27
5 ದಿನಗಳ ಕಾಲ ಕೇರಳ ರಾಜ್ಯದ ತಿರುವನಂತಪುರದಲ್ಲಿ ನಡೆಯಲಿದೆ ಎಂದು ಪ್ರೇಮಕುಮಾರ್ ಅವರು ಮಾಹಿತಿ ನೀಡಿದರು.
ಸಮಾವೇಶದ ಕೈಪಿಡಿ ಬಿಡುಗಡೆಗೊಳಿಸಿದ ರೋಟರಿ ಕ್ಲಬ್ ಅಧ್ಯಕ್ಷರಾದ ರತನ್ ತಮ್ಮಯ್ಯ ಮಾತನಾಡಿ ಈ ಸಮಾವೇಶದ ಮೂಲಕ ಮಕ್ಕಳು ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ವೈಜ್ಞಾನಿಕ ಕಾರಣಗಳೇನು ಎಂಬುದರ ಬಗ್ಗೆ ಸಂಶೋಧನೆ ನಡೆಸಲು ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಮಿಸ್ಟಿಹಿಲ್ಸ್‌ನ ಅಧ್ಯಕ್ಷರಾದ ಎಂ.ಆರ್.ಜಗದೀಶ್, ಇಂತಹ ಸಮಾವೇಶದ ಮೂಲಕ ಕೊಡಗಿನ ಬಾಲ ವಿಜ್ಞಾನಿಗಳು ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ಶ್ಲಾಘನೀಯ ಎಂದರು.
ಸಮಾವೇಶಕ್ಕೆ ಮಕ್ಕಳಿಂದ ವೈಜ್ಞಾನಿಕ ಯೋಜನಾ ಪ್ರಬಂಧ ತಯಾರಿಸುವ ಕುರಿತು ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಂಪನ್ಮೂಲ ಶಿಕ್ಷಕ ಜಿ.ಶ್ರೀನಾಥ್ ಅವರು ಮಾಹಿತಿ ನೀಡಿದರು.
ರೋಟರಿ ಮಿಸ್ಟಿ ಹಿಲ್ಸ್‌ನ ಕಾರ್ಯದರ್ಶಿ ಪ್ರಮೋದ್ ರೈ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಯುಕ್ತರಾದ ಜಿಮ್ಮಿ ಸಿಕ್ವೇರಾ ಅವರು ಮಾತನಾಡಿದರು. ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಮಾಜಿ ಉಪಾಧ್ಯಕ್ಷರಾದ ರೇವತಿ ರಮೇಶ್, ಸಮಾವೇಶದ ಜಿಲ್ಲಾ ಸಂಯೋಜಕ ಜಿ.ಶ್ರೀಹರ್ಷ, ಜಿಲ್ಲಾ ಶೈಕ್ಷಣಿಕ ಸಂಯೋಜಕ ಎಂ.ಎನ್.ವೆಂಕಟನಾಯಕ್ ಇದ್ದರು.
ಕಾರ್ಯಾಗಾರದಲ್ಲಿ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು. ಸಮಾವೇಶದಲ್ಲಿ ಕೇಂದ್ರ ವಿಷಯದಡಿ ಜೀವ ಪರಿಸರ ಮತ್ತು ಪರಿಸರ ಸೇವೆಗಳು, ಆರೋಗ್ಯ, ನೈರ್ಮಲ್ಯ ಮತ್ತು ಸ್ವಾಸ್ಥ್ಯ ಪರಿಪಾಲನೆ, ತ್ಯಾಜ್ಯದಿಂದ ಸಂಪತ್ತು, ಸಮಾಜ, ಸಂಸ್ಕೃತಿ ಮತ್ತು ಜೀವನೋಪಾಯ, ಸಾಂಪ್ರಾದಾಯಿಕ ಜ್ಞಾನ ವ್ಯವಸ್ಥೆ ಎಂಬ ಉಪ ವಿಷಯಗಳ ಕುರಿತು ಮಕ್ಕಳಿಂದ ಯೋಜನೆಗಳ ರೂಪಿಸುವ ಕುರಿತು ಮಾಹಿತಿ ನೀಡಲಾಯಿತು.
Click this button or press Ctrl+G to toggle between Kannada and English