ಬಾಳೆಲೆಯಲ್ಲಿ ಆರೋಗ್ಯ ತಪಾಸಣಾ ಉಚಿತ ಶಿಬಿರ

11:12 AM, Tuesday, November 5th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Kodagu

ಮಡಿಕೇರಿ : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ವೈದ್ಯಕೀಯ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಧ್ಯೇಯ ವಾಕ್ಯವಾದ ’ಎಲ್ಲರಿಗೂ ಆರೋಗ್ಯ ಎಲ್ಲಡೆಯೂ ಆರೋಗ್ಯ’ ಯೋಜನೆಯಡಿಯಲ್ಲಿ ಬಾಳೆಲೆಯ ಕೊಡವ ಸಮಾಜದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸೋಮವಾರ ನಡೆಯಿತು.

ಬಾಳೆಲೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರದೊಂದಿಗೆ ಶಿಬಿರ ಜರುಗಿತು. ಶಿಬಿರದಲ್ಲಿ ಬಾಳೆಲೆ ಹಾಗೂ ಸುತ್ತಮುತ್ತಲಿನ ಸುಮಾರು 800 ಅಧಿಕ ಸಾರ್ವಜನಿಕರು ಹಾಗೂ ತೋಟಗಳಲ್ಲಿ ಕೆಲಸ ನಿರ್ವಹಿಸುವ ಹಾಗೂ ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕೊಡವ ಸಮಾಜದ ಅಧ್ಯಕ್ಷರಾದ ಮಲ್ಲಚೀರ ಬೋಸ್ ಚಿಟ್ಟಿಯಪ್ಪ ಅವರು ಜ್ಯೋತಿ ಬೆಳಗುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಆರೋಗ್ಯ ಶಿಬಿರವನ್ನು ನಡೆಸಲು ಬಾಳೆಲೆಯನ್ನು ಆರಿಸಿಕೊಂಡು ಸುತ್ತಮುತ್ತಲಿನ ಜನರಿಗೆ ಉಚಿತ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಸಮಾಜದ ಕಾರ್ಯದರ್ಶಿಗಳು ಹಾಗೂ ಮಾಜಿ ನಿರ್ದೇಶಕರು ಮಾತನಾಡಿ ಪ್ರತಿ ಮೂರು ಅಥವಾ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣಾ ಉಚಿತ ಶಿಬಿರ ಏರ್ಪಡಿಸಿದಲ್ಲಿ ಮುಂದೆಯು ಇದೇ ರೀತಿ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು, ವೈದ್ಯಕೀಯ ಅಧೀಕ್ಷಕರು ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ವಿಭಾಗೀಯ ಸಮಾಲೋಚಕರು ಆದ ಕಾರ್ಯಪ್ಪ ಅವರು ಮಾತನಾಡಿ ಭಾರತದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಸಾರ್ವಜನಿಕರು ಆರ್ಥಿಕವಾಗಿ ಹಿಂದುಳಿದಿದ್ದು ಇದನ್ನು ಗಮನಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಬಿಪಿಎಲ್ ಮತ್ತು ಆಧಾರ್ ಕಾರ್ಡ್ ಹೊಂದಿರುವವರಿಗೆ ವಾರ್ಷಿಕವಾಗಿ ರೂ 5 ಲಕ್ಷದ ವರೆಗೆ ಮತ್ತು ಎಪಿಎಲ್ ಕಾರ್ಡ್ ಹೊಂದಿರುವವರಿಗೆ ವಾರ್ಷಿಕವಾಗಿ 1.50 ಲಕ್ಷದ ವರೆಗೆ ತಗಲುವ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದಾಗಿದ್ದು, ಸರ್ಕಾರವು ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಗೊಂದರಂತೆ ವೈದ್ಯಕೀಯ ಕಾಲೇಜುಗಳನ್ನು ತೆರೆದು ಅಂತರಾಷ್ಟ್ರೀಯ ಮಟ್ಟದ ಚಿಕಿತ್ಸೆಗಳನ್ನು ಈ ಭೋಧಕ ಆಸ್ಪತ್ರೆಗಳ ಮುಖಾಂತರ ನೀಡಲು ಕ್ರಮ ವಹಿಸಿದೆ ಎಂದರು.

ಯಾವುದೇ ರೋಗಿಯು ಚಿಕಿತ್ಸೆ ಆಗತ್ಯಬಿದ್ದಲ್ಲಿ ಸರ್ಕಾರದ ಜಿಲ್ಲಾ ಬೋಧಕ ಆಸ್ಪತ್ರೆಯಲ್ಲಿ ಪಡೆದುಕೊಳ್ಳಬಹುದಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯ ಬಿದ್ದಲ್ಲಿ ಮಾತ್ರ ಇನ್ನೂ ಉನ್ನತ ದರ್ಜೆಯ ಆಸ್ಪತ್ರೆಗಳಿಗೆ ಹೋಗಬಹುದು ಎಂದರು.

ಶಿಬಿರದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯ ಎಲ್ಲಾ ವಿಭಾಗಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು, ಪ್ರಾಂಶುಪಾಲರು, ಸ್ಥಾನೀಯ ವೈದ್ಯಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಶುಶ್ರೂಷಕ ಅಧೀಕ್ಷಕರು, ಸ್ನಾತ್ತಕೋತ್ತರ ಹಾಗೂ ಸ್ನಾತಕ ಪೂರ್ವ ವೈದ್ಯಕೀಯ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English