ಮಂಗಳೂರು : ಯುವಕನೋರ್ವನನ್ನು ಹತ್ಯೆಗೈದ ಆರು ಮಂದಿಯ ಮೇಲಿನ ಆರೋಪ, ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ನಗರದ ವೆಲೆನ್ಸಿಯಾ ಸಮೀಪದ ಗೋರಿಗುಡ್ಡೆ ನಿವಾಸಿ ಮೆರ್ಲಿಕ್ ಅಂತೋನಿ ಡಿಸೋಜ(21)ಎಂಬಾತ ಹತ್ಯೆಯಾದಾತ. ವೆಲೆನ್ಸಿಯಾ ನಿವಾಸಿಗಳಾದ ನಿಶಾಕ್ ಪೂಜಾರಿ(30), ವಿನೇಶ್ ಕುಮಾರ್(32), ಪ್ರವೀಣ್ ಪೂಜಾರಿ(43), ಮುಳಿಹಿತ್ಲು ನಿವಾಸಿ ಸಚಿನ್ ಶೆಟ್ಟಿ (23), ಜಪ್ಪಿನಮೊಗರು ನಿವಾಸಿ ಗಣೇಶ್ ಕುಲಾಲ್(27), ಜೆಪ್ಪು ಕುಟ್ಪಾಡಿ ನಿವಾಸಿ ಸಂದೀಪ್ ಶೆಟ್ಟಿ (34) ಶಿಕ್ಷೆಗೊಳಗಾದ ಅಪರಾಧಿಗಳು.
ಮಂಕಿಸ್ಟ್ಯಾಂಡ್ ಮತ್ತು ಮಾರ್ನಮಿ ಕಟ್ಟೆ ಎಂಬಲ್ಲಿ ಎರಡು ಬಣಗಳಿದ್ದು, 2015ರಲ್ಲಿ ಸಂದೀಪ್ ಶೆಟ್ಟಿ ಎಂಬಾತನನ್ನು ಮಾರ್ನಮಿಕಟ್ಟೆ ಎಂಬಲ್ಲಿ ಮೆಲ್ರಿಕ್ ಡಿಸೋಜ ಹಾಗೂ ಆತನ ಸಹಚರರು ಕೊಲೆಗೈಯ್ಯಲು ಯತ್ನಿಸಿದ್ದರು. ಈ ಘಟನೆಗೆ ಸಂಬಂಧಿಸಿ ಜೈಲು ಪಾಲಾಗಿದ್ದ ಮೆಲ್ರಿಕ್ ಡಿಸೋಜ 2019ರ ಡಿಸೆಂಬರ್ 24ರಂದು ಬಿಡುಗಡೆಯಾಗಿದ್ದ. ಇದನ್ನು ಅರಿತ ಸಂದೀಪ್ ಶೆಟ್ಟಿ ಪ್ರತೀಕಾರ ತೀರಿಸಿಕೊಳ್ಳಲು ನಿಶಾಕ್ ಪೂಜಾರಿ ಎಂಬಾತನಿಗೆ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಐವರು ಆರೋಪಿಗಳು ಸೇರಿ ಮೆಲ್ರಿಕ್ ಡಿಸೋಜ ಜೈಲಿನಿಂದ ಬಿಡುಗಡೆಯಾದ ಮರುದಿನವೇ ಕೊಲೆಗೆ ಸಂಚು ರೂಪಿಸಿದ್ದಾರೆ.
ಡಿಸೆಂಬರ್ 25ರಂದು ಮಧ್ಯರಾತ್ರಿ 1.15ರ ಸುಮಾರಿಗೆ ನಿಶಾಕ್ ಪೂಜಾರಿ, ವಿನೇಶ್ ಕುಮಾರ್, ಸಚಿನ್ ಶೆಟ್ಟಿ, ಗಣೇಶ್ ಕುಲಾಲ್, ಪ್ರವೀಣ್ ಪೂಜಾರಿ ಬಂದು ಬಾಗಿಲನ್ನು ತುಳಿದು ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ, ಮಚ್ಚಿನಿಂದ ಕಡಿದು ಮೆಲ್ರಿಕ್ನನ್ನು ಕೊಲೆಗೈದಿದ್ದಾರೆ. ಈ ಸಂದರ್ಭ ಮನೆಯಲ್ಲಿ ಮೆಲ್ರಿಕ್ ಮತ್ತು ಆತನ ಅಜ್ಜಿ ಮಾತ್ರ ಇದ್ದರು. ಸುದ್ದಿ ತಿಳಿದ ಮೆಲ್ರಿಕ್ ಗೆಳೆಯ ಸುಶೀಲ್ ಕೂಡಲೇ ಮನೆಗೆ ಬಂದು ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಆತ ಮೃತಪಟ್ಟಿದ್ದ.ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪಾಂಡೇಶ್ವರ ಠಾಣಾ ಇನ್ ಸ್ಪೆಕ್ಟರ್ ಬೆಳ್ಳಿಯಪ್ಪ ಪ್ರಕರಣದ ತನಿಖೆ ನಡೆಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೆಲ್ರಿಕ್ ಹತ್ಯೆಯಾದಾಗ ಸ್ಥಳದಲ್ಲಿದ್ದ ಅಜ್ಜಿ ರೋಜಿ(75) ಅವರ ಸಾಕ್ಷಿಯನ್ನು ಪ್ರಧಾನವಾಗಿ ತೆಗೆದುಕೊಂಡಿದೆ. ವಿಚಾರಣೆ ಮುಗಿದ ಕೆಲವೇ ದಿನಗಳಲ್ಲಿ ಅವರು ಮೃತಪಟ್ಟಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಮಲಿಂಗೇ ಗೌಡ, 20 ಸಾಕ್ಷಿಗಳು ಹಾಗೂ 50 ದಾಖಲೆಗಳನ್ನು ಪರಿಶೀಲನೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಕರಣದ ಆರೂ ಆರೋಪಿಗಳಿಗೂ (ಐಪಿಸಿ ಸೆಕ್ಷನ್ 302) ಕೊಲೆ ಮಾಡಿದ ಕೃತ್ಯಕ್ಕೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.
Click this button or press Ctrl+G to toggle between Kannada and English