ಮಳೆಹಾನಿ ಸಂತ್ರಸ್ತರಿಗೆ ಮನೆಗಳ ಹಸ್ತಾಂತರ : ಕಾವಲು ಪಡೆಯಂತಿರುವ ಪಶ್ಚಿಮ ಘಟ್ಟ ನಾಶವಾದರೆ ವಿನಾಶ; ನ್ಯಾಯಾಧೀಶೆ ನೂರುನ್ನಿಸಾ ಆತಂಕ

5:57 PM, Tuesday, November 5th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

madikeri

ಮಡಿಕೇರಿ : ಮಾನವನ ರಕ್ಷಣೆಗೆ ಕಾವಲು ಪಡೆಯಂತಿರುವ ಪಶ್ಚಿಮಘಟ್ಟ ಪ್ರದೇಶಗಳು ನಾಶವಾದ ಪರಿಣಾಮ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ ಎಂದು ಅಭಿಪ್ರಾಯಪಟ್ಟಿರುವ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನಿಸಾ, ಬೆಟ್ಟಗುಡ್ಡಗಳ ಮೇಲೆ ಕಟ್ಟಡ ನಿರ್ಮಿಸುವ ಸ್ವಯಂಕೃತ ಅಪರಾಧ ನಿಲ್ಲಬೇಕೆಂದು ಹೇಳಿದ್ದಾರೆ.

ನಗರದ ತ್ಯಾಗರಾಜ ಕಾಲೋನಿಯ ಕಾರುಣ್ಯ ಮೊಹಲ್ಲಾದಲ್ಲಿ ಜಮಾಅತೇ ಇಸ್ಲಾಮಿ ಹಿಂದ್‌ನ ಸಮಾಜ ಸೇವಾ ವಿಭಾಗವಾದ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನಡೆದ ಎಂಟು ಮಳೆಹಾನಿ ಸಂತ್ರಸ್ತ ಕುಟುಂಬಗಳಿಗೆ ಮನೆಗಳನ್ನು ಹಸ್ತಾಂತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ನ್ಯಾಯಾಧೀಶರು ಮಾತನಾಡಿದರು.

ಜಲಸ್ಪೋಟ ಸೇರಿದಂತೆ ಪ್ರಾಕೃತಿಕ ವಿಕೋಪ ನಡೆಯುವುದನ್ನು ತಡೆಯಲು ಪಶ್ಚಿಮಘಟ್ಟ ಪ್ರದೇಶಗಳನ್ನು ಉಳಿಸುವ ಅಗತ್ಯವಿದೆ. ಪ್ರಕೃತಿಯನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಕೊಡಗು ಜಿಲ್ಲೆಯ ಬೆಟ್ಟಗುಡ್ಡಗಳು ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಗೆ ಒಳಪಡುತ್ತವೆ. ಗಾಳಿ ಮತ್ತು ಮಳೆಯಿಂದ ಅನಾಹುತಗಳು ಸಂಭವಿಸದಂತೆ ಬೆಟ್ಟಗುಡ್ಡಗಳು ಕಾವಲು ಪಡೆಯಂತೆ ರಕ್ಷಣೆಗೆಂದೇ ಇವೆ. ಪ್ರಕೃತಿಯ ವರದಾನವಾಗಿರುವ ಇವುಗಳನ್ನು ಉಳಿಸಿಕೊಳ್ಳುವ ಬದಲು ಐಶರಾಮಿ ಜೀವನಕ್ಕಾಗಿ ಎಲ್ಲವನ್ನು ನಾಶಮಾಡಲಾಗುತ್ತಿದೆ. ಈ ಸ್ವಯಂಕೃತ ಅಪರಾಧದಿಂದಲೇ ಜಲಸ್ಫೋಟದಂತಹ ಪ್ರಾಕೃತಿಕ ವಿಕೋಪ ಸಂಭವಿಸಿದೆ ಎಂದು ನೂರುನ್ನಿಸಾ ಹೇಳಿದರು.

ಜೇನುಹುಳುವಿನಂತೆ ಬದುಕಿ : ಮನುಷ್ಯ ಜೇನು ಹುಳುವಿನಂತೆ ಬದುಕಬೇಕು, ಜೇನುಹುಳಗಳು ಯಾವುದೇ ಕೊಳೆತ ವಸ್ತುಗಳ ಮೇಲೆ ಆಕರ್ಷಿತವಾಗದೆ ಕೇವಲ ಒಂದು ಹನಿ ಮಕರಂದಕ್ಕಾಗಿ ಹೂವನ್ನು ಅವಲಂಭಿಸುತ್ತವೆ. ಆದರೆ ಮಕರಂದವನ್ನು ಹೀರುವ ಸಂದರ್ಭ ಎಲ್ಲೂ ಹೂವನ್ನು ನಾಶ ಮಾಡುವುದಿಲ್ಲ, ಬದಲಿಗೆ ಕೇವಲ ಒಂದು ಹನಿ ಜೇನನ್ನು ಸೂಕ್ಷ್ಮವಾಗಿ ಪಡೆದು ಅದನ್ನು ಶೇಖರಣೆ ಮಾಡಿ ಸಮಾಜಕ್ಕೆ ನೀಡುತ್ತದೆ. ಇದೇ ರೀತಿಯಲ್ಲಿ ಮನುಷ್ಯ ಕೂಡ ಪ್ರಕೃತಿಗೆ ಹಾನಿ ಮಾಡದೆ ತನಗೆ ಬೇಕದಷ್ಟನ್ನು ಮಾತ್ರ ಪಡೆದು ಸಮಾಜಕ್ಕೆ ಮರಳಿ ನೀಡಬೇಕೆಂದು ನೂರುನ್ನಿಸ ಕರೆ ನೀಡಿದರು.

madikeri

ಇಂದಿನ ಸಮಾಜದಲ್ಲಿ ನಕಾರಾತ್ಮಕ ಚಿಂತನೆಗಳೇ ಹೆಚ್ಚಾಗಿ ಕಂಡುಬರುತ್ತಿದೆ, ಇವುಗಳನ್ನೆಲ್ಲ ಬದಿಗೊತ್ತಿ ಸಕಾರಾತ್ಮಕ ಆಲೋಚನೆಗಳೊಂದಿಗೆ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಹೆಚ್ಚು ಹೆಚ್ಚು ಪದವಿಗಳನ್ನು ಪಡೆದ ವಿದ್ಯಾವಂತರು ಪದವಿಯನ್ನಷ್ಟೇ ಪಡೆದಿರುತ್ತಾರೆ. ಆದರೆ ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದಾರೆ ಎಂದು ನ್ಯಾಯಾಧೀಶೆ ವಿಷಾದ ವ್ಯಕ್ತಪಡಿಸಿದರು.

ಈ ಸಮಾಜಕ್ಕೆ ಸಂಪತ್ತನ್ನು ನೀಡಲು ನಮ್ಮಿಂದ ಸಾಧ್ಯವಾಗದಿದ್ದರೂ, ಮಾನವೀಯ ಮೌಲ್ಯಕ್ಕೆ ಹತ್ತಿರವಾದ ಸೇವೆಯನ್ನಾದರು ಮಾಡಬೇಕು. ಎಲ್ಲವನ್ನು ಸರ್ಕಾರದಿಂದಲೇ ಬಯಸದೆ ಸ್ವಯಂ ಸೇವಾ ಸಂಸ್ಥೆಗಳು ಸಮಾಜಸೇವೆಯಲ್ಲಿ ತೊಡಗಬೇಕೆಂದರು.

ಸಂತ್ರಸ್ತರಿಗೆ ಕಾನೂನು ನೆರವು : ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ಜಿಲ್ಲಾಡಳಿತ ಆಶ್ರಯ, ಆಹಾರ, ಮತ್ತು ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸಿದೆಯೇ ಎನ್ನುವುದನ್ನು ಗಮನಿಸುವ ಜವಾಬ್ದಾರಿಯನ್ನು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹೈಕೋರ್ಟ್ ನೀಡಿದೆ ಎಂದು ನೂರುನ್ನಿಸಾ ಹೇಳಿದರು. ೨೦೧೦ರಲ್ಲೇ ಪ್ರಾಕೃತಿಕ ವಿಕೋಪ ಸಂತ್ರಸ್ತರ ಬಗ್ಗೆ ಗಮನ ಹರಿಸುವುದಕ್ಕಾಗಿ ಕಾನೂನು ಜಾರಿಗೆ ಬಂದಿದ್ದು, ಜಿಲ್ಲಾಡಳಿತ ಮೂಲಭೂತ ಸೌಲಭ್ಯ ಕಲ್ಪಿಸಿದೆಯೇ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳುವ ಕಾರ್ಯ ನ್ಯಾಯಾಂಗ ವ್ಯವಸ್ಥೆಯಿಂದ ಆಗಲಿದೆ. ಹಿಂದೆ ನ್ಯಾಯಾಧೀಶರು ಕೇವಲ ನ್ಯಾಯಾಲಯಕಷ್ಟೇ ಸೀಮಿತವಾಗುತ್ತಿದ್ದರು, ಆದರೆ ಇಂದು ಜನರೊಂದಿಗೆ ಸೇತುವೆಯಂತೆ ಕಾರ್ಯನಿರ್ವಹಿಸಬೇಕೆಂದು ನಿಯಮ ರಚಿಸಲಾಗಿದೆ. ಆ ಪ್ರಕಾರವಾಗಿ ನಾನು ಜಿಲ್ಲೆಯ ಮಳೆಹಾನಿಯ ಪ್ರತಿಯೊಂದು ಪ್ರದೇಶಕ್ಕೆ ಭೇಟಿ ನೀಡಿ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದೇನೆ ಎಂದರು.

ಮಳೆಹಾನಿ ಸಂತ್ರಸ್ತರಿಗೆ ಉಚಿತವಾಗಿ ಕಾನೂನಿನ ನೆರವನ್ನು ನ್ಯಾಯಾಲಯ ನೀಡುತ್ತಿದೆ. ಆಡಳಿತ ವ್ಯವಸ್ಥೆಯಿಂದ ಕುಂದುಕೊರತೆ ಉಂಟಾದಲ್ಲಿ ಅನ್ಯಾಯಕ್ಕೆ ಒಳಗಾದ ಸಂತ್ರಸ್ತರು ನ್ಯಾಯಾಲಯದ ಮೂಲಕ ನ್ಯಾಯ ಪಡೆದುಕೊಳ್ಳಬಹುದಾಗಿದೆ ಎಂದು ನ್ಯಾಯಾಧೀಶೆ ನೂರುನ್ನಿಸಾ ತಿಳಿಸಿದರು.

ಪ್ರಕೃತಿಯನ್ನು ಕೊಳ್ಳೆ ಹೊಡೆಯಲಾಗಿದೆ : ಪ್ರಾಸ್ತಾವಿಕವಾಗಿ ಮಾತನಾಡಿದ ಜಮಾಅತೇ ಇಸ್ಲಾಮಿ ಹಿಂದ್‌ನ ರಾಜ್ಯ ಕಾರ್ಯದರ್ಶಿ ಅಕ್ಬರಲಿ ಉಡುಪಿ, ಪ್ರಕೃತಿ ವಿಕೋಪ ದೇವರ ಶಿಕ್ಷೆಯಲ್ಲ, ಬದಲಿಗೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ಕೊಳ್ಳೆ ಹೊಡೆದ ಪರಿಣಾಮ ಎಂದು ಅಭಿಪ್ರಾಯಪಟ್ಟರು.

ಮುಂದೆ ಈ ರೀತಿಯ ಅನಾಹುತಗಳು ಸಂಭವಿಸಬಾರದು ಎಂದಾದರೆ ಸರ್ಕಾರ ಪ್ರಕೃತಿಯ ಮೇಲೆ ತನ್ನ ಹಿಡಿತ ಸಾಧಿಸಬೇಕು. ಒಂದು ಮರ ಕಡಿದರೆ ನೂರು ಮರ ಬೆಳೆಸುವ ನಿಯಮ ಜಾರಿಯಾಗಬೇಕು. ಪ್ರಕೃತಿ ನಾಶವಾದರೆ ಯಾರೂ ಉಳಿಯಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟ ಅವರು, ನಮ್ಮ ಸಂಸ್ಥೆಯು ಜನರೊಂದಿಗೆ ಪ್ರೀತಿಯ ಭಾವನೆಯನ್ನು ಬೆಳೆಸಿಕೊಂಡಿರುವುದರಿಂದ ಸಂತ್ರಸ್ತರಿಗಾಗಿ ಮನೆ ನಿರ್ಮಿಸಿಕೊಡುವ ಕಾರ್ಯವನ್ನು ಸಾಕಾರಗೊಳಿಸುತ್ತಿದೆ ಎಂದರು.

ಮಳೆ ಮನುಷ್ಯನ ಮೂಲಭೂತ ಅಗತ್ಯವಾಗಿದೆ, ಮಳೆಯಿಂದ ಅನಾಹುತ ಸಂಭವಿಸಿದೆ ಎನ್ನುವುದು ತಪ್ಪು ಅಭಿಪ್ರಾಯವಾಗಿದ್ದು, ಮನುಷ್ಯನ ಸ್ವಾರ್ಥಕ್ಕೆ ಸಿಲುಕಿದ ಪ್ರಕೃತಿಯ ಅಸಮತೋಲನದಿಂದ ದುರ್ಘಟನೆಗಳು ನಡೆದಿವೆ ಎಂದು ಅಕ್ಬರಲಿ ಉಡುಪಿ ತಿಳಿಸಿದರು.

ಸ್ವಾರ್ಥಕ್ಕಾಗಿ ಸಾಮರಸ್ಯದ ಸಮಾಜವನ್ನು ಒಡೆಯುವ ಯತ್ನಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ. ಜಾತಿ, ಧರ್ಮದ ಆಧಾರದಲ್ಲಿ ಕೇಸರಿ, ಬಿಳಿ, ಹಸಿರು ಯಾವುದೇ ಬಣ್ಣವನ್ನು ತೊಟ್ಟು ಬೇರ್ಪಡಿಸುವ ಕಾರ್ಯ ನಡೆದರೆ ಅದನ್ನು ಪ್ರತಿಯೊಬ್ಬರು ವಿರೋಧಿಸಬೇಕು ಎಂದರು.

ಬಾದಾಮಿಯಲ್ಲಿ ಜಮಾಅತೇ ಇಸ್ಲಾಮಿ ಹಿಂದ್‌ನಿಂದ ಸಂತ್ರಸ್ತರಿಗಾಗಿ ಮೂವತ್ತಾರು ಶೆಡ್‌ಗಳನ್ನು ನಿರ್ಮಿಸಲಾಗಿದ್ದು, ಇವುಗಳನ್ನು ಹಿಂದೂ ಕುಟುಂಬಗಳಿಗೆ ನೀಡಲಾಗಿದೆ. ನಮ್ಮ ಸಂಘಟನೆ ಮಾನವೀಯತೆಯ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ರಾಜ್ಯದ ಮಳೆಹಾನಿ ಸಂತ್ರಸ್ತರ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದೆ ಬರಬೇಕೆಂದು ಒತ್ತಾಯಿಸಿದರು. ಸಂಘಟನೆಯು ಆರಂಭಿಸಿರುವ ನಾಗರಿಕ ಸೇವಾ ಕೇಂದ್ರದ ಲಾಭ ಪಡೆದುಕೊಳ್ಳುವಂತೆ ಜನರಿಗೆ ಕರೆ ನೀಡಿದರು.

ಬಂಡವಾಳಶಾಹಿಗಳ ಹಿಡಿತದಲ್ಲಿ ಪ್ರಕೃತಿ : ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಸ್ವಾರ್ಥಕ್ಕಾಗಿ ಮನುಷ್ಯ ಸೃಷ್ಟಿಸಿದ ಪ್ರಾಕೃತಿಕ ಅಸಮತೋಲನವೇ ಅನಾಹುತಗಳಿಗೆ ಕಾರಣವೆಂದು ಅಭಿಪ್ರಾಯಪಟ್ಟರು. ಹಿಂದಿನ ವರ್ಷಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಮಳೆಯಾಗುತ್ತಿತ್ತಾದರೂ ವಿಕೋಪ ಸಂಭವಿಸುತ್ತಿರಲಿಲ್ಲ. ಆದರೆ ಇಂದು ಪ್ರಕೃತಿಯ ಮೇಲಿನ ಅತ್ಯಾಚಾರದಿಂದಾಗಿ ಪ್ರಾಕೃತಿ ದುರ್ಘಟನೆಗಳು ನಡೆಯುತ್ತಿದೆ ಎಂದರು.

ಪ್ರಕೃತಿ ಮತ್ತು ಸಮಾಜ ಬಂಡವಾಳಶಾಹಿಗಳ ಹಿಡಿತದಲ್ಲಿದ್ದು, ಇದೇ ಕಾರಣಕ್ಕೆ ಇಂದು ಅಶಾಂತಿ, ಅಸಹನೆ, ಅನಾಹುತಗಳು ಎದುರಾಗುತ್ತಿವೆ ಎಂದು ತಿಳಿಸಿದರು. ಬಂಡವಾಳಶಾಹಿಗಳ ವಿರುದ್ಧ ಜನ ಮೊದಲು ಜಾಗೃತರಾಗಬೇಕಾಗಿದೆ. ವಿಭಜನೆಯ ಕಾಲದಲ್ಲಿ ವಿಪತ್ತುಗಳು ಸಂಭವಿಸುತ್ತಿವೆ ಎಂದು ಅಭಿಪ್ರಾಯಪಟ್ಟ ಮುಹಮ್ಮದ್ ಕುಂಞಿ ಯಾವುದೇ ಜಾತಿ ಧರ್ಮ ನೋಡಿ ಪ್ರಕೃತಿ ವಿಕೋಪಗಳು ಸಂಭವಿಸುವುದಿಲ್ಲ ಎಂದರು.

ಬೇರೆ ಬೇರೆ ಧರ್ಮಗಳಲ್ಲಿ ಭಿನ್ನಾಭಿಪ್ರಾಯಗಳಿವೆ, ಇದರ ಜೊತೆಯಲ್ಲಿ ಭಿನ್ನಮತ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ವಿಭಜನೆಯ ಸಿದ್ಧಾಂತ ದೂರವಾಗಬೇಕೆಂದರು. ಸಮಾಜವನ್ನು ಒಡೆಯುವ ಮಾನಸಿಕ ರೋಗಗಳಿಗೆ ಔಷಧವಾಗಿ ಪ್ರಾಕೃತಿ ವಿಕೊಪದಂತಹ ಘಟನೆಗಳು ನಡೆಯುತ್ತಿವೆ ಎಂದು ಅಭಿಪ್ರಾಯಪಟ್ಟರು.

ಜಮಾಅತೇ ಇಸ್ಲಾಮಿ ಹಿಂದ್‌ನ ಕೊಡಗು ಮತ್ತು ಮಂಗಳೂರು ವಲಯ ಸಂಚಾಲಕ ಅಬ್ದುಲ್ ಅಬ್ದುಸ್ಸಲಾಮ್ ಯು. ಮಾತನಾಡಿ, ಸುಮಾರು ೩೦೦ ಮಳೆಹಾನಿ ಸಂತ್ರಸ್ತ ಕುಟುಂಬಗಳ ಸರ್ವೆ ನಡೆಸಿ ಅರ್ಹ ಎಂಟು ಫಲಾನುಭವಿಗಳಿಗೆ ಮಡಿಕೇರಿ ಹಾಗೂ ಐದು ಫಲಾನುಭವಿಗಳಿಗೆ ಸಿದ್ದಾಪುರದಲ್ಲಿ ಮನೆಗಳನ್ನು ನಿರ್ಮಿಸಿಕೊಡಲಾಗಿದೆ ಎಂದರು.

ಮಾನಸಿಕ, ದೈಹಿಕ, ಕೌಟುಂಬಿಕ ಮತ್ತು ಸಾಮಾಜಿಕ ಸ್ವಾಸ್ಥ್ಯದ ಆಧಾರದಲ್ಲಿ ಸಂತ್ರಸ್ತರಿಗೆ ನೆರವು ನೀಡುವ ಕಾರ್ಯವನ್ನು ಸಂಸ್ಥೆ ಮಾಡಿತು ಎಂದು ತಿಳಿಸಿದ ಅವರು, ಸಂತ್ರಸ್ತರಿಗಾಗಿ ನೀಡಿದ ನೆರವನ್ನು ವಿವರಿಸಿದರು.

madikeri

ಮನೆ ಹಸ್ತಾಂತರ : ಸಮಾರಂಭದಲ್ಲಿ ಮಡಿಕೇರಿಯ ಅಶ್ರಫ್, ಅಫ್ಸರ, ತಾಳತ್ತಮನೆಯ ವಿಜಯ, ಮಡಿಕೇರಿ ರಾಣಿಪೇಟೆಯ ರಝಿಯ, ಗದ್ದಿಗೆ ಸಮೀಪದ ಸಮೀನ, ಸುಂಟಿಕೊಪ್ಪದ ಎಂ.ಎಂ.ಚೋಂದಮ್ಮ, ಮಡಿಕೇರಿ ಗಣಪತಿ ಬೀದಿಯ ಮಕ್ಬೂಲ್, ಜಲಾಶಯ ಬಡಾವಣೆಯ ಜೋಸ್ಟಿನ್ ಡಿ’ಸೋಜ ಅವರುಗಳಿಗೆ ಮನೆಗಳ ಕೀ ಯನ್ನು ಹಸ್ತಾಂತರಿಸಲಾಯಿತು.

ಕರ್ನಾಟಕ ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ ನಿರ್ದೇಶಕ ಕೆ.ಎಂ.ಅಶ್ರಫ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕೆ.ಬಾಡಗ ಗ್ರಾ. ಪಂ. ಅಧ್ಯಕ್ಷೆ ರೀಟಾ ಮುತ್ತಣ್ಣ, ಕೇರಳದ ಜ.ಇ. ಹಿಂದ್ ಕಾರ್ಯದರ್ಶಿ ಕೆ.ಸಾದಿಕ್ ಉಳಿಯಿಲ್, ಕೆ. ನಿಡುಗಣೆ ಗ್ರಾ.ಪಂ. ಸದಸ್ಯ ಜಾನ್ಸನ್ ಪಿಂಟೊ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಕೊಡಗು ಜಿಲ್ಲಾ ಜ.ಇ. ಹಿಂದ್ ಸಂಚಾಲಕಿ ವಹೀದಾ ಶೌಕತ್, ಕೊಡಗು ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್, ನಾಗರಿಕ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ರವಿ ಗೌಡ, ಮಾನವೀಯ ಸ್ನೇಹಿತರ ಒಕ್ಕೂಟದ ಸಂಚಾಲಕ ಮೈಕಲ್ ವೇಗಸ್, ಮಡಿಕೇರಿಯ ಆರ್.ಎಸ್.ಎಫ್ ಇಂಜಿನಿಯರಿಂಗ್ ವರ್ಕ್ಸ್‌ನ ಎಂ.ಹೆಚ್.ಸಾದಿಕ್, ಕಾಫಿ ಬೆಳೆಗಾರರಾದ ಪ್ರಭಾಕರ್, ಮಡಿಕೇರಿ ಜಾಮಿಯಾ ಮಸೀದಿ ಅಧ್ಯಕ್ಷರಾದ ಮುಹಮ್ಮದ್ ಇಮ್ರಾನ್, ಜಮಾಅತೆ ಇಸ್ಲಾಮೀ ಹಿಂದ್ ಮಡಿಕೇರಿ ಅಧ್ಯಕ್ಷ ಜಿ.ಹೆಚ್.ಮುಹಮ್ಮದ್ ಹನೀಫ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

madikeri

madikeri4

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English