ಮಳೆಹಾನಿ ಪರಿಹಾರದ ಅನುದಾನ ಖಾಸಗಿ ಬ್ಯಾಂಕ್‌ನಲ್ಲಿಟ್ಟ ಪ್ರಕರಣ : ಸಿಐಡಿ ತನಿಖೆಗೆ ಕಾಂಗ್ರೆಸ್ ಆಗ್ರಹ; : ಜಿ.ಪಂ ಸಭೆಯಿಂದ ಹೊರ ನಡೆದ ಸದಸ್ಯರು

5:58 PM, Thursday, November 7th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

madikeri

ಮಡಿಕೇರಿ : ಪ್ರಾಕೃತಿಕ ವಿಕೋಪದ ಪರಿಹಾರ ಕಾಮಗಾರಿಗಳಿಗೆ ಬಿಡುಗಡೆಯಾದ 21 ಕೋಟಿ ರೂ. ಅನುದಾನವನ್ನು ಜಿಲ್ಲಾ ಪಂಚಾಯ್ತಿ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಶ್ರೀಕಂಠಯ್ಯ ಅವರು ನಿಯಮ ಬಾಹಿರವಾಗಿ ಖಾಸಗಿ ಬ್ಯಾಂಕ್‌ನಲ್ಲಿಟ್ಟಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಜಿ.ಪಂ ಕಾಂಗ್ರೆಸ್ ಸದಸ್ಯರು ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಿಂದ ಹೊರ ನಡೆದ ಪ್ರಸಂಗ ನಡೆಯಿತು.

ನೂತನ ಜಿಲ್ಲಾ ಪಂಚಾಯ್ತಿ ಭವನದ ಸಭಾಂಗಣದಲ್ಲಿ ಜಿ.ಪಂ ಅಧ್ಯಕ್ಷ ಬಿ.ಎ. ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಖಾಸಗಿ ಬ್ಯಾಂಕ್‌ನಲ್ಲಿ ಮಳೆಹಾನಿ ಪರಿಹಾರದ ಹಣವನ್ನು ಠೇವಣಿ ಇಟ್ಟ ಪ್ರಕರಣ ಪ್ರತಿಧ್ವನಿಸಿತು. ಕಾಂಗ್ರೆಸ್ ಸದಸ್ಯ ಶಿವು ಮಾದಪ್ಪ ಅವರು ವಿಷಯ ಪ್ರಸ್ತಾಪಿಸಿ, ಬೇರೆಯವರ ಬೊಕ್ಕಸ ತುಂಬಿಸಲು ಸಾರ್ವಜನಿಕರ ಹಣ ನಿಯಮ ಬಾಹಿರವಾಗಿ ಖರ್ಚಾಗುವುದು ಬೇಡ. ಖಾಸಗಿ ಬ್ಯಾಂಕ್‌ನಲ್ಲಿ ಇರಿಸಲಾಗಿದ್ದ ಹಣದಿಂದ ಕೈಗೊಳ್ಳಲಾಗಿರುವ ಕಾಮಗಾರಿಗಳ ಬಗ್ಗೆಯೂ ತನಿಖೆಯಾಗಬೇಕೆಂದು ಒತ್ತಾಯಿಸಿದರು. ಸಂಬಂಧಿಸಿದ ಕಾರ್ಯಪಾಲಕ ಅಭಿಯಂತರರನ್ನು ಅಮಾನತು ಗೊಳಿಸಿದರೆ ಸಾಲದು, ಉನ್ನತ ಮಟ್ಟದ ತನಿಖೆಯೊಂದಿಗೆ ಕಠಿಣ ಶಿಕ್ಷೆಯಾಗಬೇಕೆಂದರು.

ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿ, ಕಳೆದ ಸಭೆಯಲ್ಲಿ ಕಾರ್ಯಪಾಲಕ ಅಭಿಯಂತರರ ವಿರುದ್ಧ ತನಿಖೆಗೆ ಸಮಿತಿ ರಚನೆ ಮಾಡಲು ತಿಳಿಸಲಾಗಿತ್ತು. ಆದರೆ, ಸಮಿತಿಯನ್ನು ರಚನೆ ಮಾಡಿಲ್ಲವೆಂದು ಆರೋಪಿಸಿದರು. ಕಾಂಗ್ರೆಸ್ ಸದಸ್ಯರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಮುರಳಿ ಕರುಂಬಮ್ಮಯ್ಯ, ಒಬ್ಬ ಅಧಿಕಾರಿಯನ್ನು ಅನವಶ್ಯಕವಾಗಿ ಅಮಾನತು ಮಾಡಲಾಗಿದೆ. ಹಣವನ್ನು ಖಾಸಗಿ ಬ್ಯಾಂಕಿನಲ್ಲಿ ಇಟ್ಟಿರುವುದು ಲೋಪ ದೋಷವೇ ಹೊರತು ಅವ್ಯವಹಾರ ಅಲ್ಲವೆಂದು ಸಮರ್ಥಿಸಿಕೊಂಡರು.

madikeri

ಕಾಂಗ್ರೆಸ್ ಸದಸ್ಯ ಬಿ.ಎನ್.ಪ್ರತ್ಯು ಮಾತನಾಡಿ, ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಬಿ.ಎ.ಹರೀಶ್, ಅವ್ಯವಹಾರವೇನು ನಡೆದಿಲ್ಲವೆಂದು ಸಮಜಾಯಿಷಿಕೆ ನೀಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯ ಮಾತನಾಡಿ, ಸೆ.೧೩ ರಂದೇ ತನಿಖಾ ಸಮಿತಿ ರಚನೆ ಮಾಡಲಾಗಿದೆ. ಆದರೆ, ಕಳೆದ ಸಭೆಗೆ ಮೊದಲೇ ಸಾರ್ವಜನಿಕರೊಬ್ಬರು ಮಳೆಹಾನಿ ಪರಿಹಾರದ ಅನುದಾನ ಖಾಸಗಿ ಬ್ಯಾಂಕ್‌ನಲ್ಲಿ ಠೇವಣಿಯಾಗಿರುವ ಬಗ್ಗೆ ದೂರು ನೀಡಿದ ಹಿನ್ನೆಲೆ ತನಿಖೆ ಪ್ರಗತಿಯಲ್ಲಿತ್ತು. ಈ ನಡುವೆ ಸಮಿತಿ ರಚಿಸಬೇಕೆಂದು ಸಭೆಯಲ್ಲಿ ತೀರ್ಮಾನವಾದ ಕಾರಣ ಸಮಿತಿಯನ್ನು ರಚಿಸಲಾಯಿತು. ಕಾರ್ಯಪಾಲಕ ಅಭಿಯಂತರರನ್ನು ನಾವು ಅಮಾನತು ಮಾಡಿಲ್ಲ. ಬದಲಿಗೆ ಇಲ್ಲಿಯವರೆಗಿನ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು ಎಂದು ಲಕ್ಷ್ಮೀಪ್ರಿಯ ಸ್ಪಷ್ಟಪಡಿಸಿದರು.

ಸದಸ್ಯ ಶಿವು ಮಾದಪ್ಪ ಮಾತನಾಡಿ, ಸಂಬಂಧಿಸಿದ ಇಂಜಿನಿಯರ್ ಸುಮಾರು 23 ಕಾಮಗಾರಿಗಳು ನಡೆದಿದೆಯೆಂದು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ, ಕೂಲಂಕಷವಾಗಿ ಪರೀಕ್ಷಿಸಿದಾಗ ಒಂದು ಕಾಮಗಾರಿಯಷ್ಟೆ ನಡೆದಿದ್ದು, ಉಳಿದ ಯಾವುದೇ ಕಾಮಗಾರಿ ನಡೆದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಂಶಯವಿದೆಯೆಂದು ಶಿವುಮಾದಪ್ಪ ಆರೋಪಿಸಿದರು.

ಅಧ್ಯಕ್ಷ ಹರೀಶ್ ಮಾತನಾಡಿ, ಮುಂದಿನ ಮೂರು ದಿನಗಳಲ್ಲಿ ತನಿಖಾ ಸಮಿತಿಯ ಸಭೆ ಕರೆದು, ಪ್ರಕರಣದ ಕುರಿತು ಯಾವ ನಿರ್ಣಯ ಕೈಗೊಳ್ಳಬೇಕೆಂದು ಅಂತಿಮಗೊಳಿಸೋಣವೆಂದು ಸಲಹೆ ನೀಡಿದರು. ಜೆಡಿಎಸ್ ಸದಸ್ಯ ಪುಟ್ಟರಾಜು ಮಾತನಾಡಿ, ಪ್ರಕರಣ ಬೆಳಕಿಗೆ ಬಂದು ಮೂರು ತಿಂಗಳಾಗಿದ್ದರು ಇಲ್ಲಿಯವರೆಗೆ ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ. ಆದ್ದರಿಂದ ಸಿಐಡಿ ತನಿಖೆಯಾಗಲಿ ಎಂದು ಒತ್ತಾಯಿಸಿದರು. ಅಭಿವೃದ್ಧಿ ಕಾರ್ಯಕ್ಕೆ ಕನಿಷ್ಠ ೧ ಲಕ್ಷ ರೂ. ನೀಡಲು ಹಿಂದೆ ಮುಂದೆ ನೋಡುವ ಜಿಲ್ಲಾ ಪಂಚಾಯ್ತಿ ಅದು ಹೇಗೆ 21 ಕೋಟಿ ರೂ.ಗಳನ್ನು ನಿಯಮ ಬಾಹಿರವಾಗಿ ಠೇವಣಿ ಇಡಲು ಅವಕಾಶ ಒದಗಿಸಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯೆ ಸರಿತಾ ಪೂಣಚ್ಚ ಮಾತನಾಡಿ, ಪ್ರಕರಣವನ್ನು ಸಿಐಡಿಗೆ ಒಪ್ಪಿಸದಿದ್ದಲ್ಲಿ ಪ್ರಕರಣದಲ್ಲಿ ತಾವುಗಳು ಭಾಗಿಯಾಗಿದ್ದೀರಿ ಎಂದು ಪರಿಗಣಿಸುವುದಾಗಿ ತಿಳಿಸಿದರು. ಈ ನಡುವೆ ಆಡಳಿತ ಪಕ್ಷದ ಸದಸ್ಯ ಸಿ.ಕೆ.ಬೋಪಣ್ಣ ಕೂಡ ಒಂದು ಹಂತದಲ್ಲಿ ಸಿಐಡಿ ತನಿಖೆಗೆ ಒಲವು ವ್ಯಕ್ತಪಡಿಸಿದರು.
ಸಿಐಡಿ ತನಿಖೆಗೆ ಒಪ್ಪಿಗೆ ಸೂಚಿಸುವಲ್ಲಿಯವರೆಗೆ ಸಭೆ ನಡೆಸಲು ಬಿಡುವುದಿಲ್ಲವೆಂದು ಸದಸ್ಯ ಪ್ರತ್ಯು ಹಠ ಹಿಡಿದರು. ಕೆ.ಪಿ.ಚದ್ರಕಲಾ ಮಾತನಾಡಿ, ತನಿಖಾ ಸಮಿತಿ ರಚನೆ ಮಾಡಿ, ಸದಸ್ಯರುಗಳ ಗಮನಕ್ಕೆ ತಾರದೆ ಸಭೆಯನ್ನು ನಡೆಸದೆ ಇರುವುದರಿಂದ ಈ ಗೊಂದಲ ಸೃಷ್ಟಿಯಾಗಿದ್ದು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೆ ಇದಕ್ಕೆ ನೇರಹೊಣೆ ಎಂದು ಆರೋಪಿಸಿದರು.

ಈ ನಡುವೆ ಸಿಇಒ ಲಕ್ಷ್ಮೀಪ್ರಿಯ ಮಾತನಾಡಿ, ಜಿಲ್ಲಾಧಿಕಾರಿಗಳ ಮೂಲಕ ಪಿಆರ್‌ಡಿಗೆ ಚೆಕ್ ರೂಪದಲ್ಲಿ ೨೧ ಕೋಟಿ ರೂ. ಮಳೆಹಾನಿ ಪರಿಹಾರದ ಅನುದಾನ ಬಂದಿರುವುದರಿಂದ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವ ಅಧಿಕಾರ ಜಿಲ್ಲಾ ಪಂಚಾಯ್ತಿಗೆ ಇಲ್ಲವೆಂದರು.
ಇದನ್ನೆ ಪುನರುಚ್ಚರಿಸಿದ ಅಧ್ಯಕ್ಷ ಹರೀಶ್, ಸಮಿತಿ ಮೂಲಕವೆ ತನಿಖೆ ನಡೆಸುವ ಭರವಸೆ ನೀಡಿದರು. ಆದರೆ, ಇದಕ್ಕೆ ಒಪ್ಪದ ಕಾಂಗ್ರೆಸ್ ಸದಸ್ಯರು ಸಿಐಡಿ ತನಿಖೆಗಾಗಿ ಒತ್ತಾಯಿಸಿದರು.

ಅಧ್ಯಕ್ಷ ಹರೀಶ್ ಮಾತನಾಡಿ, ಇಂದು ಮಧ್ಯಾಹ್ನ ತನಿಖಾ ಸಮಿತಿಯ ಸಭೆ ನಡೆಸಿ ಮುಂದೆ ಏನು ಮಾಡಬೇಕು ಎನ್ನುವ ಬಗ್ಗೆ ನಿರ್ಧಾರ ಕೈಗೊಳ್ಳೋಣ ಎಂದರು. ಈ ಸಂದರ್ಭ ಕಾಂಗ್ರೆಸ್ ಸದಸ್ಯರಾದ ಶಿವುಮಾದಪ್ಪ, ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಿರುವ ಸಮಿತಿಯಿಂದ ನನ್ನ ಹೆಸರನ್ನು ಕೈಬಿಡುವಂತೆ ತಿಳಿಸಿ, ಸಮಿತಿಯ ಭಾಗವಾಗಿ ನಾನು ತನಿಖೆ ನಡೆಸುವುದಕ್ಕೆ ಒಪ್ಪುವುದಿಲ್ಲ ಮತ್ತು ಇಂತಹ ತನಿಖೆ ನಡೆಸುವ ಅನುಭವವೂ ತನಗಿಲ್ಲವೆಂದರು. ಪ್ರಕರಣವನ್ನು ಸಿಐಡಿಗೆ ಒಪ್ಪಿಸುವಂತೆ ಆಗ್ರಹಿಸಿದರು. ಶಿವುಮಾದಪ್ಪ ಹಾಗೂ ಪ್ರತ್ಯು ಅವರುಗಳು ಮಧ್ಯಾಹ್ನದ ನಂತರವೆ ನಾವು ಸಭೆಗೆ ಬರುತ್ತೇವೆ ಎಂದು ಹೇಳಿ ಸಾಮಾನ್ಯ ಸಭೆಯಿಂದ ಹೊರ ನಡೆದರು. ಉಳಿದ ಕಾಂಗ್ರೆಸ್ ಸದಸ್ಯರುಗಳಾದ ಪಿ.ಎಂ.ಲತೀಫ್, ಪಿ.ಆರ್. ಪಂಕಜ, ಸರಿತಾ ಪೂಣಚ್ಚ ಸೇರಿದಂತೆ ಇನ್ನು ಕೆಲ ವಿರೋಧ ಪಕ್ಷದ ಸದಸ್ಯರು ಅವರನ್ನು ಹಿಂಬಾಲಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹಾಗೂ ಮೂರು ಸ್ಥಾಯಿ ಸಮಿತಿ ಅಧ್ಯಕ್ಷರು ಉಪಸ್ಥಿತರಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English