ಮಡಿಕೇರಿ : ಈದ್ ಮಿಲಾದ್, ಟಿಪ್ಪು ಜಯಂತಿ ಹಾಗೂ ಸಧ್ಯದಲ್ಲಿಯೇ ಅಯೋಧ್ಯೆ ವಿವಾದದ ತೀರ್ಪು ಹೊರ ಬರಲಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಅಗತ್ಯ ಭದ್ರತಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕೊಡಗು ಪ್ರವೇಶದ ಚೆಕ್ ಪೋಸ್ಟ್‌ಗಳಲ್ಲಿ ಪೊಲೀಸ್ ಕಣ್ಗಾವಲು ಇರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಪಿ, ಕೇರಳ ರಾಜ್ಯದ ಕಣ್ಣೂರು, ವಯನಾಡು, ಕಾಸರಗೂಡು ಹಾಗೂ ಹಾಸನ, ಮೈಸೂರು ಜಿಲ್ಲೆಗಳ ಗಡಿಭಾಗಗಳಿಗೆ ಹೊಂದಿಕೊಂಡಂತೆ ೧೪ ಚೆಕ್ ಪೋಸ್ಟ್‌ಗಳನ್ನು ತೆರೆದಿದ್ದು, ವಾಹನ ಗಸ್ತು, ತಪಾಸಣೆ ಹೆಚ್ಚುವರಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಸ್ಥಳೀಯ ಠಾಣಾ ಮಟ್ಟದಲ್ಲಿ ಸಾರ್ವಜನಿಕ ಸಭೆ ನಡೆಸಿ ಶಾಂತಿ ಕಾಪಾಡುವಂತೆ ಸೂಚನೆ ನೀಡಲಾಗಿದೆ. ಈದ್ ಮಿಲಾದ್ ಹಬ್ಬಾಚರಣೆ ಎಂದಿನಂತೆ ನಡೆಯಲಿದ್ದು, ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗುತ್ತದೆ ಎಂದು ಡಾ.ಸುಮನ ಸ್ಪಷ್ಟಪಡಿಸಿದರು.
ಟಿಪ್ಪು ಜಯಂತಿ ಮತ್ತು ಅಯೋಧ್ಯ ತೀರ್ಪು ಕುರಿತು ಈಗಾಗಲೇ ಎರಡು ಕೋಮುಗಳ ಶಾಂತಿ ಸಭೆ ನಡೆಸಲಾಗಿದೆ. ಖಾಸಗಿಯಾಗಿ ಟಿಪ್ಪು ಜಯಂತಿ ಆಚರಿಸಲು ಮುಂದಾಗುವುದಿಲ್ಲ ಎಂದು ಕೆಲವರು ಭರವಸೆ ನೀಡಿದ್ದಾರೆ. ಅದರಂತೆ ಅಯೋಧ್ಯೆ ತೀರ್ಪು ಕುರಿತು ವಿಜಯೋತ್ಸವ ಮತ್ತು ಕರಾಳ ದಿನವನ್ನೂ ಆಚರಿಸುವುದಿಲ್ಲ ಎಂದು ಉಭಯ ಕಡೆಯವರು ತಿಳಿಸಿದ್ದಾರೆ. ಹೀಗಿದ್ದರೂ ಕೂಡ ಜಿಲ್ಲೆಯ ಸೂಕ್ಷ್ಮ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುತ್ತದೆ ಎಂದು ಡಾ.ಸುಮನ ಹೇಳಿದರು.
ಸಾಮಾಜಿಕ ಜಾಲತಾಣಗಳ ಮೇಲೂ ಹದ್ದಿನ ಕಣ್ಣಿಡಲಾಗಿದ್ದು, ಯಾರೂ ಪ್ರಚೋದನೆಗೆ ಒಳಗಾಗಬಾರದು ಮತ್ತು ಯಾವುದೇ ರೀತಿಯ ಕೋಮುಭಾವನೆ ಭಿತ್ತುವ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಾರದೆಂದು ಎಸ್‌ಪಿ ಮನವಿ ಮಾಡಿದರು. ತಪ್ಪು ಮಾಡುವವರ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಈ ಹಿಂದೆ ಕೋಮು ಗಲಭೆ ಪ್ರಕರಣದಲ್ಲಿ ಶಾಮೀಲಾದವರು ಮತ್ತು ಗಲಭೆ ನಡೆಸುವ ಸಾಧ್ಯತೆಯಿರುವವರನ್ನು ಕೂಡ ಠಾಣೆಗಳಿಗೆ ಕರೆಯಿಸಿ ಎಚ್ಚರಿಕೆ ನೀಡಿ, ಮುಚ್ಚಳಿಕೆ ಪಡೆಯಲಾಗಿದೆ ಎಂದು ಡಾ.ಸುಮನ ಹೇಳಿದರು.
ಜಿಲ್ಲೆಯಾದ್ಯಂತ ಬಂದೋಬಸ್ತ್‌ಗಾಗಿ ಒಟ್ಟು 400 ಪೊಲೀಸ್ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಸಿಬ್ಬಂದಿಗಳನ್ನು ಅಗತ್ಯವಿದ್ದಲ್ಲಿ ಮಾತ್ರವೇ ಆಯ ಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗುತ್ತದೆ. ಅದರೊಂದಿಗೆ ಸೂಕ್ಷ್ಮ ಪ್ರದೇಶಗಳಲ್ಲಿ ವಿಡಿಯೋ ಗ್ರಾಫರ್‌ಗಳನ್ನು ಕೂಡ ಬಳಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ ಹೇಳಿದರು. ಕೊಡಗು ಜಿಲ್ಲೆ ಶಾಂತಿ ಪ್ರಿಯ ಜಿಲ್ಲೆಯಾಗಿದ್ದು, ಜಿಲ್ಲೆಯ ಜನರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
Click this button or press Ctrl+G to toggle between Kannada and English