80 ವರ್ಷ ಯಶಸ್ವಿ ದಾಂಪತ್ಯ ಜೀವನ : ಗಿನ್ನಿಸ್ ವರ್ಲ್ಡ್‌ ರೆಕಾರ್ಡ್

4:35 PM, Monday, November 11th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

tecnes

ಟೆಕ್ಸಸ್ : ಇತ್ತೀಚಿನ ಕಾಲಘಟ್ಟದಲ್ಲಿ ಮದುವೆಯಾದ ತಿಂಗಳೊಳಗೆ ದಂಪತಿ ದೂರವಾಗುವ ಪ್ರಕರಣಗಳು ನಡೆಯುತ್ತಿರುತ್ತೆ. ಆದರೆ ಅಮೆರಿಕದ ಟೆಕ್ಸಸ್‍ನಲ್ಲಿ ಜೋಡಿಯೊಂದಿದೆ. ಬರೋಬ್ಬರಿ 80 ವರ್ಷದಿಂದ ಯಶಸ್ವಿ ದಾಂಪತ್ಯ ಜೀವನ ನಡೆಸಿಕೊಂಡು ಒಟ್ಟಿಗೆ ಬಾಳುತ್ತಿದ್ದಾರೆ. ಜೊತೆಗೆ ಜಗತ್ತಿನಲ್ಲಿಯೇ ಅತೀ ಹಿರಿಯ ದಂಪತಿ ಆಗುವ ಮೂಲಕ ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ಮಾಡಿದ್ದಾರೆ.

ಹೌದು. ಈ ಬಗ್ಗೆ ತಿಳಿದರೆ ಅಚ್ಚರಿಯಾಗುತ್ತೆ. ಆದರೂ ಇದು ಸತ್ಯ. ಸತತ 80 ವರ್ಷಗಳಿಂದ ಟೆಕ್ಸಸ್ ಜಾನ್ ಹ್ಯಾಂಡರ್ಸನ್(106) ಹಾಗೂ ಚಾರ್ಲೆಟ್ (105) ಯಶಸ್ವಿ ದಾಂಪತ್ಯ ಜೀವನ ನಡೆಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಡಿ.15ರಂದು ಈ ದಂಪತಿ ತಮ್ಮ 80ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದ್ದಾರೆ. ಈ ಮೊದಲೇ ಇವರಿಬ್ಬರ ದಾಂಪತ್ಯ ನೋಡಿ ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ಇವರನ್ನು ಜಗತ್ತಿನ ಅತೀ ಹಿರಿಯ ದಂಪತಿ ಎಂದು ಅಧಿಕೃತವಾಗಿ ಘೋಷಿಸಿ ಗೌರವಿಸಿದೆ.

ವಿಶ್ವದ ಅತೀ ಹಿರಿಯ ದಂಪತಿ ವಯಸ್ಸು ಕೇಳಿದರೆ ಎಂಥವರಾದ್ರು ದಂಗಾಗುತ್ತಾರೆ. ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ಪ್ರಕಾರ, ಹ್ಯಾಂಡರ್ಸನ್ 106 ವರ್ಷ, ಚಾರ್ಲೆಟ್ 105 ವರ್ಷ ವಯಸ್ಸು. ಇವರಿಬ್ಬರ ಒಟ್ಟು ಆಯಸ್ಸು ಸೇರಿಸಿದರೆ 211 ವರ್ಷವಾಗುತ್ತದೆ. ಡಿಸೆಂಬರ್ 15ರಂದು ದಂಪತಿ ತಮ್ಮ 80ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು, ಯಶಸ್ವಿ 80 ವರ್ಷ ಆದರ್ಶ ದಾಂಪತ್ಯ ಜೀವನ ನಡೆಸಿದ ಕೀರ್ತಿಗೆ ಪಾತ್ರರಾಗಲಿದ್ದಾರೆ.

ಅವರಿಬ್ಬರು 1934ರಲ್ಲಿ ಟೆಕ್ಸಸ್ ವಿಶ್ವ ವಿದ್ಯಾಲಯದಲ್ಲಿ ಭೇಟಿಯಾಗಿದ್ದರು. ಇವರಿಬ್ಬರು ಸಹಪಾಠಿಗಳಾಗಿದ್ದರು. ಅಲ್ಲಿ ಜಾನ್ ಫುಟ್‍ಬಾಲ್ ತಂಡದ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಕಾಲೇಜಿನ ಸಮಯದಲ್ಲೇ ಚಾರ್ಲೆಟ್ ಹಾಗೂ ಜಾನ್ ನಡುವೆ ಪ್ರೀತಿ ಬೆಳೆದಿತ್ತು. ಹೀಗಾಗಿ 1939ರಲ್ಲಿ ಅವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಲ್ಲದೆ ಜಾನ್ ಅವರು ಟೆಕ್ಸಸ್ ವಿದ್ಯಾಲಯದ ಫುಟ್‍ಬಾಲ್ ತಂಡದ ಅತ್ಯಂತ ಹಳೆಯ ಆಟಗಾರರು ಎಂಬ ಹೆಗ್ಗಳಿಕೆಯನ್ನೂ ಗಳಿಸಿದ್ದಾರೆ.

ಸತತ 84 ವರ್ಷಗಳಿಂದ ವರ್ಷಕ್ಕೆ ಒಮ್ಮೆಯಾದರೂ ಜಾನ್ ಟೆಕ್ಸಸ್ ವಿಶ್ವವಿದ್ಯಾಲಯದ ಫುಟ್‍ಬಾಲ್ ಪಂದ್ಯವನ್ನು ವೀಕ್ಷಿಸಲು ಹೋಗುವ ಸಂಪ್ರದಾಯವನ್ನು ರೂಡಿಸಿಕೊಂಡಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಇಬ್ಬರೂ ಆರೋಗ್ಯವಾಗಿದ್ದಾರೆ. ಜಾನ್ ಅವರು ಪ್ರತಿ ದಿನ ದೇಹಸ್ಥಿತಿಯನ್ನು ಚೆನ್ನಾಗಿ ಇಟ್ಟುಕೊಳ್ಳಲು ವ್ಯಾಯಾಮ ಮಾಡುತ್ತಾರೆ.

2009ರಲ್ಲಿ ದಂಪತಿ ಲಾಂಗ್‍ಹಾರ್ನ್ ಗ್ರಾಮಕ್ಕೆ ಸ್ಥಳಾಂತರಗೊಂಡಿದ್ದಾರೆ. ಈ ಗ್ರಾಮದಲ್ಲಿ ಟೆಕ್ಸಾಸ್ ವಿವಿ ಹಳೇ ವಿದ್ಯಾರ್ಥಿಗಳ ಕೂಟದಿಂದ ಸೀನಿಯರ್ ಲಿವಿಂಗ್ ಕಮ್ಯುನಿಟಿ ರಚನೆಕೊಂಡಿದೆ. ಅಲ್ಲಿ ಜಾನ್ ಹಾಗೂ ಚಾರ್ಲೆಟ್ ವಾಸವಾಗಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English