ಮೂಡುಬಿದಿರೆ: ಕಡಂದಲೆ ಹಾಗೂ ಪಾಲಡ್ಕ ಗ್ರಾಮದ ಸಮೀಪದಲ್ಲಿರುವ ಅಡ್ಡಲ್ ಶೆಡ್ ಎಂಬ ಪ್ರದೇಶದಲ್ಲಿನ ಮೋರಿಯೊಂದರಲ್ಲಿ ಸ್ಪೋಟಕಕ್ಕೆ ಬಳಸಿ ನಿರುಪಯುಕ್ತವಾಗಿರು ಸುಮಾರು 4953 ಇಲೆಕ್ಟ್ರಿಕ್ ಡಿಟೋನೇಟರ್ ಕಡ್ಡಿಗಳಿರುವ ಚೀಲಗಳನ್ನು ಮೂಡುಬಿದಿರೆ ಪೊಲೀಸರು ರವಿವಾರದಂದು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಪ್ರದೇಶದಲ್ಲೆ ಕಾರ್ಯನಿರ್ವಹಿಸುತ್ತಿರುವ ಕಲ್ಲು ಗಣಿಗಾರಿಕ ಕಂಪನಿಯಾದ ಪೋಬ್ ಸನ್ಸ್ ಎಂಬ ಕಂಪನಿಯು ಕಲ್ಲಿನ ಕೋರೆಯಲ್ಲಿ ಸ್ಪೋಟಕಕ್ಕೆ ಬಳಸಿ ನಿರುಪಯುಕ್ತವಾದ ಈ ಕಡ್ಡಿಗಳನ್ನು ಯಾರ ಗಮನಕ್ಕೂ ಬಾರದಂತೆ ಮೋರಿಯಲ್ಲಿ ಗೋಣಿ ಚೀಲ ಹಾಗೂ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಡಲಾಗಿತ್ತು. ಸ್ಥಳೀಯ ನಿವಾಸಿ ಹರೀಶ ಪೂಜಾರಿ ಎಂಬುವವರು ದನ ಮೇಯಿಸಲೆಂದು ಹೋಗಿದ್ದಾಗ ಈ ಸ್ಪೋಟಕ ತುಂಬಿದ ಚೀಲಗಳನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು.
ಕಳೆದ ಎರಡು ವರ್ಷಗಳಿಂದ ಬಳಸಿ, ನಿರುಪಯುಕ್ತವಾದ ಈ ಡಿಟೋನೇಟರ್ ಕಡ್ಡಿಗಳನ್ನು ಸುರಕ್ಷತೆಯ ದೃಷ್ಟಿಯಿಂದ ಈ ಪ್ರದೇಶದಲ್ಲಿ ದಾಸ್ತಾನು ಮಾಡಿಟ್ಟುದಾಗಿ ಮತ್ತು ಅದನ್ನು ಸರಬರಾಜು ಮಾಡಿದ ಕಂಪನಿಗೆ ವಾಪಾಸು ಕಳುಹಿಸುವ ಉದ್ದೇಶ ತಮ್ಮದಾಗಿತ್ತು ಎಂದು ಕಂಪನಿಯ ಅಧಿಕಾರಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ಈ ಡಿಟೋನೇಟರ್ ಕಡ್ಡಿಗಳನ್ನು ಮಹಜರು ನಡೆಸಿದ ಪೊಲೀಸರು ಇದನ್ನು ಸುರಕ್ಷಿತ ಸ್ಥಳದಲ್ಲಿ ಸಂಗ್ರಹಿಸಿಟಿದ್ದು ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡು ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
Click this button or press Ctrl+G to toggle between Kannada and English