ವಿದೇಶದಲ್ಲಿ ಭಾರೀ ಪ್ರಮಾಣ ಹೂಡಿಕೆ : ಮಾಜಿ ಸಚಿವ ಕೆಜೆ ಜಾರ್ಜ್ ವಿರುದ್ಧ ತನಿಖೆ ಆರಂಭಿಸಿದ ಇಡಿ

1:11 PM, Tuesday, November 12th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

KJ

ಬೆಂಗಳೂರು : ವಿದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆಜೆ ಜಾರ್ಜ್ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ತನಿಖೆ ಆರಂಭಿಸಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೇಮಾ) ಅಡಿ ಇಡಿ ಪ್ರಕರಣ ದಾಖಲಿಸಿದ್ದು, ಈಗ ಜಾರ್ಜ್ ಹೊಂದಿರುವ ಆಸ್ತಿಯ ಅಧಿಕೃತ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಜಾರ್ಜ್ ಅವರು 1985 ರಿಂದ 2019ರವರೆಗೆ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ. ಹೀಗಾಗಿ ವಿಧಾನಸಭೆಗೆ ಆಯ್ಕೆಯಾದ ವರ್ಷದಿಂದ ಇಲ್ಲಿಯವರೆಗೆ ಲೋಕಾಯುಕ್ತದಲ್ಲಿ ಜಾರ್ಜ್ ಘೋಷಿಸಿಕೊಂಡಿರುವ ಆಸ್ತಿಯ ವಿವರವನ್ನು ಆಧಾರವಾಗಿಟ್ಟುಕೊಂಡು ತನಿಖೆ ಆರಂಭಿಸಲಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಲೋಕಾಯುಕ್ತದಲ್ಲಿ ಜಾರ್ಜ್ ಘೋಷಿಸಿಕೊಂಡಿರುವ ಆಸ್ತಿ ವಿವರಗಳನ್ನು ಇಡಿ ಈಗಾಗಲೇ ಪಡೆದುಕೊಂಡಿದೆ.

ಜಾರ್ಜ್ ಅಥವಾ ಅವರ ಕುಟುಂಬ ಸದಸ್ಯರು, ಜಾರ್ಜ್ ಗೆ ಸಂಬಂಧಿಸಿದ ವ್ಯವಹಾರಗಳ ಜೊತೆ ಪಾಲುದಾರಿಕೆ ಹೊಂದಿರುವವರ ವಿಚಾರಣಾ ವರದಿಗಳಿದ್ದರೆ ಅವುಗಳನ್ನೂ ನೀಡುವಂತೆ ಇಡಿ ಲೋಕಾಯುಕ್ತಕ್ಕೆ ಪತ್ರ ಬರೆದಿದೆ.

ಅಮೆರಿಕದ ನ್ಯೂಯಾರ್ಕಿನಲ್ಲಿ ಜಾರ್ಜ್ ಭಾರಿಪ್ರಮಾಣದ ಆಸ್ತಿ ಹೊಂದಿದ್ದಾರೆ. ಜಾರ್ಜ್ ಅವರ ಮಗಳು ರೇನಿತಾ ಅಬ್ರಹಾಂ ಮತ್ತು ಅಳಿಯ ಕೆವಿನ್ ಅಬ್ರಹಾಂ ನ್ಯೂಯಾರ್ಕಿನಲ್ಲಿದ್ದು, ಈ ಆಸ್ತಿಗಳ ಮೌಲ್ಯ ಹತ್ತಾರು ಕೋಟಿಯಾಗಿದ್ದು ಇದು ಜಾರ್ಜ್ ಅವರಿಗೆ ಸೇರಿದೆ. ನ್ಯೂಯಾರ್ಕ್‍ನ ಮ್ಯಾನ್ ಹಟನ್‍ನ ಲಫಯೇಟ್ ಸ್ಟ್ರೀಟ್‍ನಲ್ಲಿರುವ ಕೆಲವು ಆಸ್ತಿಗಳೂ ಸೇರಿದಂತೆ ಅನೇಕ ಆಸ್ತಿಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆ.ಜೆ.ಜಾರ್ಜ್ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದರು. ಅಕ್ರಮವಾಗಿ ಹಣ ವರ್ಗಾವಣೆ, ವಿದೇಶದಲ್ಲಿ ಆಸ್ತಿ, ಆಸ್ತಿ ವಿವರ ಘೋಷಣಾ ಪತ್ರದಲ್ಲಿ ಈ ಕುರಿತು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರವಿ ಕೃಷ್ಣಾರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ದೀಪಕ್ ಅವರು ಅಗಸ್ಟ್ ತಿಂಗಳಿನಲ್ಲಿ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ರವಿ ಕೃಷ್ಣಾರೆಡ್ಡಿ, ಪ್ರಮುಖ ರಾಜಕೀಯ ನಾಯಕರು ತಮ್ಮ ಶಕ್ತಿ ಬಳಸಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಈಗ ಇಡಿ ವಶದಲ್ಲಿರುವ ಡಿ.ಕೆ.ಶಿವಕುಮಾರ್ ಮೇಲೆ ಸಹ ಈ ಬಗ್ಗೆ ನಾವು ಇಡಿಗೆ ದೂರು ನೀಡಿದ್ದೆವು. ಎರಡು ವರ್ಷದ ಹಿಂದೆಯೇ ದೂರು ನೀಡಿದ್ದೆವು ಆದರೆ, ನಿಧಾನವಾಗಿ ತನಿಖೆ ನಡೆಸಿ ಇಡಿ ಕ್ರಮ ಕೈಗೊಂಡಿದೆ. ಇಂದೂ ಸಹ ಅನೇಕ ಮಂತ್ರಿಗಳ ಮಕ್ಕಳ ಹೆಸರಲ್ಲಿ ನೂರಾರು ಕೋಟಿ ರೂ. ಆಸ್ತಿ ಇದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಸೇರಿದಂತೆ ವಿವಿಧ ನಾಯಕರ ಮಕ್ಕಳ ಹೆಸರಿನಲ್ಲಿ ಬೇನಾಮಿ ಆಸ್ತಿಗಳಿವೆ ಎಂದು ಆರೋಪಿಸಿದ್ದರು.

ಕೇರಳದಿಂದ ಕೊಡಗಿಗೆ ಬಂದು, ಸಣ್ಣ ಪುಟ್ಟ ಟಿಂಬರ್ ಕೆಲಸ ಮಾಡಿಕೊಂಡಿದ್ದ ಜಾರ್ಜ್ ನಂತರ ರಾಜಕಾರಣ ಮಾಡಿಕೊಂಡು ಬೆಂಗಳೂರಿಗೆ ಬಂದು ಇಷ್ಟೆಲ್ಲ ಆಸ್ತಿ ಸಂಪಾದಿಸಿದ್ದಾರೆ. ಕೆ.ಜೆ.ಜಾರ್ಜ್ ಇದೀಗ ಸಾವಿರಾರು ಕೋಟಿ ರೂ.ಗಳ ಆಸ್ತಿಯ ಒಡೆಯ. ಅವರ ಮಗನ ಹೆಸರಿನಲ್ಲಿ ಬೇನಾಮಿ ಆಸ್ತಿ ಇದೆ. ಮಗಳ ಹೆಸರಿನಲ್ಲಿ ಅಮೆರಿಕದಲ್ಲಿ ಆಸ್ತಿ ಇದೆ. ಲೋಕಾಯುಕ್ತಕ್ಕೆ ಆಸ್ತಿ ಘೋಷಣೆ ಮಾಡುವಾಗ ಸಲ್ಲಿಸಿರುವ ಅಫಿಡೆವಿಟ್‍ನಲ್ಲಿ ಆಸ್ಟ್ರೇಲಿಯಾದಲ್ಲಿ ಆಸ್ತಿ ಇದೆ ಎಂದು ನಮೂದಿಸಿದ್ದಾರೆ. ಆದರೆ, ಚುನಾವಣೆಗೆ ಸ್ಪರ್ಧಿಸುವಾಗ ಈ ಆಸ್ತಿಗಳನ್ನು ಘೋಷಿಸಿಲ್ಲ ಎಂದು ತಿಳಿಸಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English