ಕೋಲ್ಕತ್ತಾ : ಅಕ್ರಮವಾಗಿ 25.79 ಕೆಜಿ ಚಿನ್ನ ಸಾಗಿಸುತ್ತಿದ್ದ ಇಬ್ಬರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಸಿಲಿಗುರಿ ನಗರದಲ್ಲಿ ಡಿಆರ್‌ಐ ಅಧಿಕಾರಿಗಳು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 10 ಕೋಟಿ ರೂ. ಮೌಲ್ಯದ 25.79 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಗಳನ್ನು ವಿಚಾರಣೆ ನಡೆಸಿದ ಅಧಿಕಾರಿಗಳು ಇಂದು ಕೋರ್ಟಿಗೆ ಹಾಜರು ಪಡಿಸಿದ್ದಾರೆ.
ಸಿಲಿಗುರಿ ಹಾಗೂ ಹೌರಾ ನಗರದಲ್ಲಿ ಚಿನ್ನವನ್ನು ಅಕ್ರವಾಗಿ ಸಾಗಿಸುತ್ತಿದ್ದ ಆರು ಜನರನ್ನು ಡಿಆರ್‌ಐ ಅಧಿಕಾರಿಗಳು ಅಕ್ಟೋಬರ್ ನಲ್ಲಿ ಬಂಧಿಸಿದ್ದರು. ಈ ವೇಳೆ ಆರೋಪಿಗಳಿಂದ 2.5 ಕೋಟಿ ರೂ. ಮೌಲ್ಯ 6 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದರು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ 25.79 ಕೆಜಿ ಚಿನ್ನ ಸಿಕ್ಕಿದೆ. ಹೀಗಾಗಿ ಚಿನ್ನ ಅಕ್ರಮ ಸಾಗಾಣಿಕೆ ಹಿಂದೆ ದೊಡ್ಡ ಜಾಲವೇ ಇದೆ ಎಂದು ಶಂಕೆ ವ್ಯಕ್ತಪಡಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಆರೋಪಿಗಳು ಪಶ್ಚಿಮ ಬಂಗಾಳದ ಬೆಹಾರ್ ಜಿಲ್ಲೆಯ ದಿನ್ಹಾಟಾ ಅಂತರಾಷ್ಟ್ರೀಯ ಗಡಿಭಾಗದ ಮೂಲಕ ಬಾಂಗ್ಲಾದೇಶದಿಂದ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ. ಹೀಗಾಗಿ ಈ ಜಾಲವನ್ನು ಭೇದಿಸಲು ಡಿಆರ್‌ಐ ಕಾರ್ಯಾಚರಣೆ ನಡೆಸಿದೆ ಎಂದು ವರದಿಯಾಗಿದೆ.
Click this button or press Ctrl+G to toggle between Kannada and English