ಮಡಿಕೇರಿ : ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಆತುರ ತೋರಿದ ಬಿಜೆಪಿ ನೂರು ದಿನಗಳ ಅಧಿಕಾರವನ್ನು ಪೂರೈಸಿದ್ದರೂ, ಸರ್ಕಾರ ಇನ್ನೂ ಕೂಡ ’ಟೇಕ್ ಆಫ್’ ಆಗಿಲ್ಲ. ಅಧಿಕಾರವನ್ನು ಉಳಿಸಿಕೊಳ್ಳಲು ’ಬ್ಯಾಲೆನ್ಸ್’ ಮಾಡುತ್ತಾ ಸಾಗುತ್ತಿರುವ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲವೆಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಯು.ಟಿ.ಖಾದರ್ ಟೀಕಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತಾವಧಿಯ ನೂರು ದಿನಗಳಲ್ಲಿ ಯಾವುದೇ ಹೊಸ ಯೋಜನೆಗಳನ್ನು ಜಾರಿಗೆ ತಂದಿಲ್ಲ ಮತ್ತು ಹಿಂದಿನ ಸಿದ್ದರಾಮಯ್ಯ ಸರ್ಕಾರದ ಜನಪರವಾದ ಯೋಜನೆಗಳನ್ನಷ್ಟೇ ಮುಂದುವರೆಸಿಕೊಂಡು ಹೋಗಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ನೆರೆ ಪರಿಹಾರ ಕಾರ್ಯಗಳಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರು ಮುಂದೇನು ಎನ್ನುವ ಆತಂಕಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಕಷ್ಟು ಸಂದರ್ಭಗಳಲ್ಲಿ ಸಂತ್ರಸ್ತರಿಗೆ ನೀಡಿದ ಪರಿಹಾರದ ಚೆಕ್‌ಗೆ ದುಡ್ಡೇ ದೊರಕದ ಪರಿಸ್ಥಿತಿ ಇದೆ. ಹೀಗಿದ್ದೂ ಈ ಸರ್ಕಾರಕ್ಕೆ ಜಾಹೀರಾತಿಗೆ ಬಳಕೆ ಮಾಡಲು ನೂರಾರು ಕೋಟಿ ಹಣವಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಬಿಜೆಪಿ ಸಂಸದರು ನೆರೆ ಪರಿಹಾರವಾಗಿ ಕೇಂದ್ರದಿಂದ ತಮ್ಮ ಹಕ್ಕಿನ ಅನುದಾನವನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ.
ಬಿಜೆಪಿಯ ಎಲ್ಲಾ ಸಂಸದರು ಒಗ್ಗೂಡಿ ಪ್ರಧಾನಮಂತ್ರಿಗಳು, ಗೃಹ ಸಚಿವರು ಹಾಗೂ ಆರ್ಥಿಕ ಇಲಾಖೆಯೊಂದಿಗೆ ಪರಿಹಾರದ ಕುರಿತು ಕನಿಷ್ಠ ಮಾತನಾಡುವ ಪ್ರಯತ್ನವನ್ನೇ ಮಾಡಿಲ್ಲವೆಂದು ಟೀಕಿಸಿದರು. ದೆಹಲಿಯಲ್ಲಿ ಅಗತ್ಯ ಪರಿಹಾರ ಪಡೆಯುವ ಪ್ರಯತ್ನಗಳನ್ನು ನಡೆಸಿದ ರಾಜ್ಯದ ಮುಖ್ಯಮಂತ್ರಿಗಳು ಅವಮಾನಕ್ಕೆ ಒಳಗಾಗಿದ್ದು, ಇದು ರಾಜ್ಯದ ಜನತೆಗೂ ಆದ ಅವಮಾನವಾಗಿದೆ. ಇಂತಹ ಅವಮಾನಕ್ಕೆ ಇಲ್ಲಿಂದ ಆಯ್ಕೆಯಾಗಿ ಹೋದ ಬಿಜೆಪಿಯ ಸಂಸದರೇ ಕಾರಣವೆಂದು ಖಾದರ್ ಆರೋಪಿಸಿದರು.
ರಾಜ್ಯದಿಂದ ಆಯ್ಕೆಯಾದ ಸಂಸದರಲ್ಲಿ ನಾವು ಜನರಿಂದ ಆಯ್ಕೆಯಾದವರು ಎನ್ನುವುದಕ್ಕಿಂತ ಮೋದಿಯಿಂದ ಗೆದ್ದವರು ಎನ್ನುವ ಭಾವನೆ ಮನೆ ಮಾಡಿದೆ. ಸಂಸದರ ಇಂತಹ ಧೋರಣೆ ಮುಂದುವರೆದಲ್ಲಿ ತಕ್ಕ ಉತ್ತರವನ್ನು ಜನತೆಯೇ ನೀಡಲಿದ್ದಾರೆ ಎಂದು ಹೇಳಿದರು.
ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸಮಾಜದ ಬಡವರ್ಗದ 40 ಲಕ್ಷ ಮಂದಿಗೆ ಬಿಪಿಎಲ್ ಕಾರ್ಡ್ ವಿತರಿಸಿ, ಅಗತ್ಯ ಪಡಿತರವನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ಹಿಂದಕ್ಕೆ ಪಡೆಯುತ್ತಿರುವುದಲ್ಲದೆ ಅಗತ್ಯ ದಿನಸಿ ಸಾಮಾಗ್ರಿಗಳನ್ನು ನೀಡದೆ ವಂಛಿಸಲಾಗುತ್ತಿದೆ. ಜನ ಸಮಾನ್ಯರನ್ನು ಸುಳ್ಳರಂತೆ ಮತ್ತು ಶತ್ರುಗಳಂತೆ ಕಾಣಲಾಗುತ್ತಿದೆ ಎಂದು ಖಾದರ್ ಆರೋಪಿಸಿದರು.
ಬಿಪಿಎಲ್ ಕಾರ್ಡ್‌ಗಳನ್ನು ಹಿಂದಕ್ಕೆ ಪಡೆಯುತ್ತಿರುವ ಸರ್ಕಾರ ತನ್ನ ನಿರ್ಧಾರದ ಬಗ್ಗೆ ಪುನರ್ ಪರಿಶೀಲಿಸಬೇಕೆಂದು ಒತ್ತಾಯಿಸಿದರು.
ಜನವಿರೋಧಿ ಕೇಂದ್ರ ಸರ್ಕಾರ : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನವಿರೋಧಿಯಾಗಿದ್ದು, ಅದರ ಆಡಳಿತ ಧೋರಣೆಗಳಿಂದ ರಾಷ್ಟ್ರದಲ್ಲಿ ಉದ್ಯೋಗಾವಕಾಶಗಳು ಇಳಿಮುಖವಾಗಿ, ಆರ್ಥಿಕತೆ ಕುಸಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿ ಬಂಡವಾಳ ಹೂಡಲು ವಿದೇಶಿ ಸಂಸ್ಥೆಗಳು ಹೇಗೆ ಮುಂದೆ ಬರುತ್ತವೆ ಎಂದು ಖಾದರ್ ಪ್ರಶ್ನಿಸಿದರು.
ಭಾವನಾತ್ಮಕವಾದ ವಿಚಾರಗಳಿಂದ ಜನಸಾಮಾನ್ಯರ ಹೊಟ್ಟೆ ತುಂಬುವುದಿಲ್ಲ. ಸರ್ಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಸಿವನ್ನು ನೀಗಿಸುವ ಪ್ರಯತ್ನಕ್ಕೆ ಮುಂದಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ಕಾಂಗ್ರೆಸ್ ಜನಜಾಗೃತಿ ಮೂಡಿಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಚಾಲಕ ತೆನ್ನಿರ ಮೈನಾ, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಸೂರಜ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹನೀಫ್ ಸಂಪಾಜೆ, ಉಸ್ಮಾನ್ ಮೊದಲಾದವರಿದ್ದರು.
Click this button or press Ctrl+G to toggle between Kannada and English