ಸುಪ್ರೀಂಕೋರ್ಟಿನಲ್ಲಿ ಇಂದು ಅನರ್ಹ ಶಾಸಕರ ಅರ್ಜಿ ವಿಚಾರಣೆ

10:31 AM, Wednesday, November 13th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Anarha-shasakaru

ನವದೆಹಲಿ : ಇಂದು ಸುಪ್ರೀಂ ಕೋರ್ಟಿನಲ್ಲಿ ಅನರ್ಹ 17 ಮಂದಿ ಶಾಸಕರ ಅರ್ಜಿ ವಿಚಾರಣೆ ನಡೆಯಲಿದೆ. ರಾಷ್ಟ್ರ ರಾಜಕಾರಣಕ್ಕೆ ಮಹತ್ವದ ದಿನವಾಗಿದೆ. ರಾಜಕೀಯ ಇತಿಹಾಸದಲ್ಲಿಯೂ ಮೈಲುಗಲ್ಲಾಗಿ ಉಳಿಯುವ ದಿನ. ಅನರ್ಹತೆ ಪಟ್ಟ ಹೊತ್ತ 17 ಮಂದಿ ಶಾಸಕರ ಭವಿಷ್ಯ ನಿರ್ಧಾರ ಆಗುವ ದಿನ. ಅನರ್ಹ ಶಾಸಕರ ಅಂತಿಮ ತೀರ್ಪಿಗೆ ಕೆಲವೇ ಗಂಟೆಗಳು ಬಾಕಿ ಉಳಿದಿದೆ.

ಇಂದು 17 ಮಂದಿ ಅನರ್ಹ ಶಾಸಕರ ಭವಿಷ್ಯ ನಿರ್ಧಾರ ಆಗಲಿದೆ. ಸ್ಪೀಕರ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ತೀರ್ಪು ಪ್ರಕಟ ಆಗಲಿದೆ. ಸುಪ್ರೀಂಕೋರ್ಟಿನ ನ್ಯಾ. ಎನ್ ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠ ತೀರ್ಪು ನೀಡಲಿದೆ. ಈ ತೀರ್ಪು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ರಾಷ್ಟ್ರ ರಾಜಕಾರಣದಲ್ಲಿ ಮೈಲುಗಲ್ಲು ಆಗಲಿದೆ. ಹೀಗಾಗಿ ಇಂದು ಬೆಳಗ್ಗೆ 10.30ಕ್ಕೆ ಪ್ರಕಟ ಆಗುವ ಈ ತೀರ್ಪು ಸಾಕಷ್ಟು ಕುತೂಹಲ ಮೂಡಿಸಿದೆ.

ಸ್ಪೀಕರ್ ಆದೇಶವನ್ನ ಎತ್ತಿ ಹಿಡಿಯಬಹುದು. ಸ್ಪೀಕರ್ ಸಂವಿಧಾನಿಕ ಹುದ್ದೆಯನ್ನ ನಾವು ಪ್ರಶ್ನೆ ಮಾಡಲ್ಲ ಎನ್ನಬಹುದು. ಪಕ್ಷಾಂತರ ನಿಷೇಧ ಕಾಯ್ದೆಯನ್ನ ಉಲ್ಲೇಖಿಸಿ ತೀರ್ಪು ನೀಡಬಹುದು. 15ನೇ ವಿಧಾನಸಭೆಯ ಅವಧಿ ಅಂತ್ಯದ ತನಕ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಆದೇಶವನ್ನೂ ಎತ್ತಿಹಿಡಿಯಬಹುದು. 10ನೇ ಷೆಡ್ಯೂಲ್ ಅನ್ನು ಎತ್ತಿಹಿಡಿದು ಸರ್ಕಾರದ ಹುದ್ದೆಗಳನ್ನ ಹೊಂದುವಂತಿಲ್ಲ ಎಂಬ ಆದೇಶವನ್ನೂ ಎತ್ತಿಹಿಡಿಯುವ ಸಾಧ್ಯತೆಗಳಿವೆ.

ಅನರ್ಹತೆ ಆದೇಶವನ್ನು ಎತ್ತಿಹಿಡಿದು, ಚುನಾವಣೆ ಸ್ಪರ್ಧೆಗಿರುವ ನಿರ್ಬಂಧ ತೆರವುಗೊಳಿಸಬಹುದು. ಚುನಾವಣೆ ಸ್ಪರ್ಧೆಗೆ ನಿರ್ಬಂಧ ಮಾಡುವುದು, ಬಿಡುವುದು ಆಯೋಗಕ್ಕೆ ಬಿಟ್ಟದ್ದು ಎನ್ನಬಹುದು. ಸಂವಿಧಾನಿಕ ಪೀಠ ಸ್ಪೀಕರ್ ವ್ಯಾಪ್ತಿಗೆ ಮಾತ್ರ ಅನರ್ಹತೆ ಆದೇಶ ಬರುತ್ತದೆ ಎನ್ನಬಹುದು. ಆದರೆ ಚುನಾವಣೆಗೆ ಇಷ್ಟು ವರ್ಷಗಳ ಕಾಲ ಸ್ಪರ್ಧಿಸುವುದು ಬೇಡ ಅಂತಾ ಹೇಳುವ ಅಧಿಕಾರ ಇಲ್ಲ ಎನ್ನಬಹುದು. ಅಂತಿಮವಾಗಿ ಸ್ಪೀಕರ್ ಆದೇಶ ಎತ್ತಿ ಹಿಡಿದು, ಅನರ್ಹರಿಗೂ ಸ್ವಲ್ಪ ರಿಲೀಫ್ ಕೊಡುವ ಸಾಧ್ಯತೆಗಳು ಕೂಡ ಇವೆ.

ಸ್ಪೀಕರ್ ಅನರ್ಹತೆ ಆದೇಶವನ್ನ ರದ್ದುಗೊಳಿಸಬಹುದು. ಸ್ಪೀಕರ್ ವ್ಯಾಪ್ತಿಯ ಬಗ್ಗೆ ಸಂವಿಧಾನಿಕ ಪೀಠಕ್ಕೆ ವರ್ಗಾಯಿಸಬಹುದು. ಪ್ರತ್ಯೇಕ ಅನರ್ಹ ಶಾಸಕರ ವಿಚಾರದಲ್ಲಿ ಒಂದೇ ಆದೇಶ ಏಕೆ ಅಂತ ಪ್ರಶ್ನಿಸಬಹುದು. ರಾಜೀನಾಮೆ ಪುನರ್ ಪರಿಶೀಲನೆ ಮಾಡಿ ಅಂತೇಳಿ ಹಾಲಿ ಸ್ಪೀಕರ್‍ಗೆ ಆದೇಶಿಸಬಹುದು. ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶ ಕಲ್ಪಿಸಬಹುದು.

ಅನರ್ಹರ ಶಾಸಕರು ಉಪಚುನಾವಣೆಗೆ ಸ್ಪರ್ಧಿಸಬಹುದು. ಗುರುವಾರ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಬಹುದು. ಬಳಿಕ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದು ಅಖಾಡಕ್ಕೆ ಇಳಿಯಬಹುದು. ಮುಂದೆ ಉಪಚುನಾವಣೆಯಲ್ಲಿ ಗೆದ್ದರೆ ಮಾತ್ರ ಮಂತ್ರಿಯೂ ಆಗಬಹುದು. ಸರ್ಕಾರದ ಬೇರೆ ಬೇರೆ ಸ್ಥಾನಗಳನ್ನ ಹೊಂದಲು ಅವಕಾಶ ಸಿಗಲಿದೆ. ಬಿಎಸ್‍ವೈ ಸರ್ಕಾರ ಸದ್ಯಕ್ಕೆ ಸ್ವಲ್ಪ ಮಟ್ಟಿನ ರಿಲೀಫ್ ಸಿಗಬಹುದು. ಉಪಚುನಾವಣೆಗೆ ಹಾದಿ ಅಷ್ಟೊಂದು ಕಠಿಣ ಆಗದಿರಬಹುದು.

ಅನರ್ಹ ಶಾಸಕರು ಉಪಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಮುಂದಿನ ಮೂರೂವರೆ ವರ್ಷದ ತನಕ ಸಚಿವರಾಗುವಂತಿಲ್ಲ. ಸರ್ಕಾರದ ಯಾವುದೇ ಸ್ಥಾನಮಾನಗಳನ್ನ ಪಡೆಯುವಂತಿಲ್ಲ. ಸಂವಿಧಾನಿಕ ಪೀಠಕ್ಕೆ ಮತ್ತೆ ಮೇಲ್ಮನವಿಯನ್ನ ಸಲ್ಲಿಸಬಹುದು. ಚುನಾವಣೆಗೆ ತಡೆ ಸಾಧ್ಯವಾಗದಿದ್ದರೆ ತಮ್ಮ ಕುಟುಂಬದವರನ್ನ ನಿಲ್ಲಿಸಬಹುದು. ಪತ್ನಿ, ಮಕ್ಕಳನ್ನ ಬಿಜೆಪಿ ಚಿನ್ಹೆಯಡಿ ಚುನಾವಣಾ ಅಖಾಡಕ್ಕೆ ಇಳಿಸಬಹುದು. ತಮಗೆ ಮೀಸಲು ಎನ್ನುತ್ತಿದ್ದ ಸಚಿವ ಸ್ಥಾನಗಳನ್ನ ಕುಟುಂಬದವರಿಗೆ ಕೊಡಿಸಬಹುದು.

ಇಂದು ತೀರ್ಪು ಪ್ರಕಟ ಆಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಅನರ್ಹ ಶಾಸಕರಾದ ರಮೇಶ್ ಜಾರಕಿಹೋಳಿ, ಮುನಿರತ್ನ, ಎಸ್.ಟಿ ಸೋಮಶೇಖರ್, ಬಿಸಿ ಪಾಟೀಲ್, ಬೈರತಿ ಬಸವರಾಜ್, ಹೆಚ್. ವಿಶ್ವ ನಾಥ್, ರೋಷನ್ ಬೇಗ್, ಆರ್ ಶಂಕರ್ ಸೇರಿ ಇನ್ನು ಹಲವರು ದೆಹಲಿ ತಲುಪಿದ್ದು ಇಂದಿನ ತೀರ್ಪು ಬಗ್ಗೆ ವಕೀಲರ ಜೊತೆ ಚರ್ಚೆ ಮಾಡುತ್ತಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English