ಮೈಸೂರು : ಐತಿಹಾಸಿಕ ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಮುಸ್ಲಿಂ ಬಾಂಧವರೊಂದಿಗೆ ಸಂಭ್ರಮಾಚರಣೆ ಮಾಡಿದ್ದಾರೆ. ರಾಮದಾಸ್ ಕಚೇರಿ ಮುಂಭಾಗದಲ್ಲಿ ಶ್ರೀರಾಮನ ಫೋಟೋ ಇಟ್ಟು ಪೂಜೆ ಮಾಡಿ ಮುಸ್ಲಿಂ ಬಾಂಧವರೊಂದಿಗೆ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಶಾಸಕ ರಾಮ್ದಾಸ್ ಸುಮಾರು 450 ವರ್ಷಗಳಷ್ಟು ಹಳೆಯ ವಿವಾದಕ್ಕೆ ಸುಪ್ರೀಂಕೋರ್ಟ್ನಿಂದ ಐತಿಹಾಸಿಕ ತೀರ್ಪು ಬಂದಿದೆ. ಭಾರತ ದೇಶದಲ್ಲಿ ಇತಿಹಾಸ ಬರೆಯುವಂತಹ ತೀರ್ಪನ್ನು ಕೋರ್ಟ್ ಕೊಟ್ಟಿದೆ. ಲಾಲ್ ಕೃಷ್ಣ ಅಡ್ವಾಣಿ ಅವರ ಹುಟ್ಟು ಹಬ್ಬ ನೆನ್ನೆಯಿತ್ತು. ರಾಮಮಂದಿರಕ್ಕಾಗಿ ಹೋರಾಡಿದ ಅವರಿಗೆ ಈ ತೀರ್ಪು, ಹಿಂದೂ, ಮುಸ್ಲಿಂರು ಕೊಟ್ಟ ಕೊಡುಗೆಯಾಗಿದೆ ಎಂದರು.
ನನ್ನ ತಾಯಿಯವರು ರಾಮಮಂದಿರ ನಿರ್ಮಾಣಕ್ಕೆ ಅಂತ ವಾರದ ಪ್ರತೀ ಶನಿವಾರ ಹಣ ಕೂಡಿಡುತ್ತಿದ್ದರು. ಅದು ರೂ .1ಲಕ್ಷದ 70 ಸಾವಿರವಾಗಿದೆ. ತಾಯಿ ಈಗ ಇಲ್ಲವಾದ್ರೂ ಸದ್ಯ ನನಗೆ ಈ ಸಂದರ್ಭದಲ್ಲಿ ನೆನಪಾಗುತ್ತಿದ್ದಾರೆ ಎಂದರು.
ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಸಿಹಿ ಹಂಚಿದ ಬಳಿಕ ಮಾತನಾಡಿದ ಮುಸ್ಲಿಂ ಸಮುದಾಯದ ಮುಖಂಡ ನಜೀರ್ ಅಹ್ಮದ್ ಇದೊಂದು ಐತಿಹಾಸಿಕ ತೀರ್ಪು ಆಗಿದ್ದು ಎಲ್ಲರಿಗೂ ಸಂತೋಷದ ಸಂಗತಿ. ಭಾರತದಲ್ಲಿ ಈ ತೀರ್ಪು ಹಿಂದೂ, ಮುಸ್ಲಿಂರನ್ನು ಅಣ್ಣತಮ್ಮಂದಿರ ಹಾಗೆ ಬಾಳುವಂತೆ ಸೂಚಿಸಿದೆ ಎಂದರು.
ಮುಸ್ಲಿಂರಿಗೆ ಪ್ರತ್ಯೇಕವಾಗಿ ಐದು ಎಕರೆ ಭೂಮಿ ನೀಡಲು ಕೋರ್ಟ್ ಸೂಚಿಸಿದೆ. ನಮ್ಮ ಧರ್ಮದಲ್ಲೂ ಎಲ್ಲರೂ ಸಂತೋಷ ಸಹಕಾರ, ಕರ್ಮ ಭೂಮಿಗೆ ಋಣಿಯಾಗಿ ಬದುಕಬೇಕೆಂದಿದೆ. ನಾವು ಅಂತೆಯೇ ಮುಂದಿನ ದಿನಗಳಲ್ಲಿ ಬದುಕಬೇಕು ಎಂದರು.
ಇದೇ ವೇಳೆ ಅಯೋಧ್ಯೆ ರಾಮ ಜನ್ಮ ಭೂಮಿ ಬಗ್ಗೆ ಪುರಾತತ್ವ ಇಲಾಖೆ ಜೊತೆ ಕೆಲಸ ಮಾಡಿದ್ದ ಇತಿಹಾಸ ತಜ್ಞ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್ ಅವರರನ್ನ ಸನ್ಮಾನಿಸಲಾಯಿತು.
Click this button or press Ctrl+G to toggle between Kannada and English