ಮಡಿಕೇರಿ : ಕೇಂದ್ರ ಸರ್ಕಾರ ಜನ ವಿರೋಧಿ ಆರ್ಥಿಕ ನೀತಿ ಅನುಸರಿಸುತ್ತಿದೆ ಮತ್ತು ದೇಶವನ್ನು ನಿರುದ್ಯೋಗ ಸಮಸ್ಯೆ ಕಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಡಳಿತದ ಭವನದ ಎದುರು ಪ್ರತಿಭಟನೆ ನಡೆಸಿತು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರಮೋದಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮುಂಜುನಾಥ್ ಕುಮಾರ್ ಲೋಕಸಭಾ ಚುನಾವಣೆಯ ಸಂದರ್ಭ ದೇಶದ ಜನತೆಗೆ ಸುಳ್ಳು ಭರವಸೆಗಳನ್ನೇ ನೀಡುತ್ತಾ ಬಂದ ಬಿಜೆಪಿ ಎರಡನೇ ಬಾರಿಯು ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೂ ಜನರ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗಿಲ್ಲವೆಂದು ಆರೋಪಿಸಿದರು.
ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿ ಮಾಡಿ ಅವರು ಮಾಡಿದ ವೆಚ್ಚದ ಒಂದೂವರೆ ಪಟ್ಟು ಹೆಚ್ಚಿನ ಮೊತ್ತ ಸಿಗುವಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿಕೊಳ್ಳುತ್ತಿದ್ದ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಇಂದು ಆಮದು ನೀತಿಯ ಮೂಲಕ ಕೃಷಿಕ ವರ್ಗವನ್ನು ಸಂಕಷ್ಟಕ್ಕೆ ಸಿಲುಕಿಸಲು ಮುಂದಾಗಿರುವುದು ಖಂಡನೀಯವೆಂದರು. ಆರ್‌ಸಿಇಪಿ ಒಪ್ಪಂದವನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಮಾಡಿದ ಪ್ರತಿಭಟನೆಯಿಂದ ಒಪ್ಪಂದವನ್ನು ತಡೆಹಿಡಿದರುವುದು ಕಾಂಗ್ರೆಸ್ ಪಕ್ಷ ಪ್ರಬಲ ಹೋರಾಟವನ್ನು ನಡೆಸಿದ ಪರಿಣಾಮ ಈ ಒಪ್ಪಂದದಿಂದ ಕೇಂದ್ರ ಸರ್ಕಾರ ಹಿಂದಕ್ಕೆ ಸರಿಯಿತು ಎಂದು ಮಂಜುನಾಥ್ ಕುಮಾರ್ ಅಭಿಪ್ರಾಯಪಟ್ಟರು.
ನಿರುದ್ಯೋಗ, ಬಡತನ ನಿರ್ಮೂಲನೆ, ಕೃಷಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ ಮತ್ತು ಆರ್ಥಿಕ ಪ್ರಗತಿಗೆ ಅಗತ್ಯವಿರುವ ಯಾವುದೇ ಮಹತ್ವದ ನಿರ್ಧಾರಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿಲ್ಲ ಎಂದು ಟೀಕಿಸಿದರು.
ರಾಜ್ಯ ಬಿಜೆಪಿ ಸರ್ಕಾರ ಮಳೆಹಾನಿ ಸಂತ್ರಸ್ತರನ್ನು ವಂಚಿಸುತ್ತಲೇ ಬಂದಿದ್ದು, ಇದೀಗ ಬಾಡಿಗೆ ಮನೆಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಮನೆ ಬಾಡಿಗೆಯನ್ನು ಕೂಡ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಕೆಪಿಸಿಸಿ ವೀಕ್ಷಕ ವೆಂಕಪ್ಪಗೌಡ, ಸದಸ್ಯರುಗಳಾದ ಟಿ.ಪಿ.ರಮೇಶ್, ಕೆ.ಪಿ.ಚಂದ್ರಕಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ವಕ್ತಾರ ಟಿ.ಈ.ಸುರೇಶ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ, ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್, ಪ್ರಧಾನ ಕಾರ್ಯದರ್ಶಿ ಆರ್.ಪಿ.ಚಂದ್ರಶೇಖರ್, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಹೊಸೂರು ಸೂರಜ್, ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಎ.ಯಾಕುಬ್, ಜಿ.ಪಂ ಸದಸ್ಯೆ ಕುಮುದಾ ಧರ್ಮಪ್ಪ, ಪಳನಿ ಪ್ರಕಾಶ್ ಮತ್ತಿತರ ಪ್ರಮುಖರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English