ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ

10:24 AM, Thursday, November 14th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Bresil

ನವದೆಹಲಿ : ಪ್ರತಿ ಬಾರಿಯೂ ಗಣರಾಜ್ಯೋತ್ಸವಕ್ಕೆ ಆಹ್ವಾನಿಸುವ ವಿಶೇಷ ಅತಿಥಿಯ ಕುರಿತು ಕುತೂಹಲವಿರುತ್ತದೆ. ಈ ಬಾರಿ ವಿಶೇಷ ಅತಿಥಿಯನ್ನು ಈಗಾಗಲೇ ಆಹ್ವಾನಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನವನ್ನು ಅವರು ಸಹ ಸ್ವೀಕರಿಸಿ ಆಗಮಿಸಲು ಒಪ್ಪಿಗೆ ನೀಡಿದ್ದಾರೆ.

ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಆಗಮಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ಆಹ್ವಾನವನ್ನು ಬ್ರೆಜಿಲ್ ಅಧ್ಯಕ್ಷ ಬುಧವಾರ ಸ್ವೀಕರಿಸಿದ್ದು, ಈ ಮೂಲಕ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಪಕ್ಕಾ ಆಗಿದೆ.

ಭಯೋತ್ಪಾದನೆ ನಿಗ್ರಹಕ್ಕೆ ಸಹಕಾರ ನೀಡುವುದಕ್ಕಾಗಿ ಯಾಂತ್ರಿಕ ವ್ಯವಸ್ಥೆ ನಿರ್ಮಿಸುವ ಹಾಗೂ ವಿಶ್ವದ ಐದು ಪ್ರಮುಖ ಆರ್ಥಿಕತೆಯೊಂದಿಗೆ ಭಾರತದ ಸಂಬಂಧವನ್ನು ಬಲಪಡಿಸುವ 11ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಬ್ರೆಜಿಲ್ ಅಧ್ಯಕ್ಷರನ್ನು ಭೇಟಿಯಾಗಿದ್ದರು. ಇದನ್ನು ಹೊರತಾಗಿಯೂ ಸಭೆಯ ಸಂದರ್ಭದಲ್ಲಿ ಸಮಯ ಸಿಕ್ಕಾಗಲೆಲ್ಲ ಪ್ರಧಾನಿ ಮೋದಿ ಬೋಲ್ಸನಾರೊ ಅವರನ್ನು ಭೇಟಿಯಾಗಿದ್ದರು. ಈ ಮೂಲಕ ಉಭಯ ರಾಷ್ಟ್ರಗಳ ಕುರಿತು ಮಾತುಕತೆ ನಡೆಸಿದ್ದರು. ಈ ವೇಳೆ ಸಾರ್ವಜನಿಕರ ಹಿತದೃಷ್ಟಿಯಿಂದ ಭಯೋತ್ಪಾದನೆ ನಿಗ್ರಹಕ್ಕೆ ನಮಗೆ ಸಹಕಾರ ನೀಡಿ ಎಂದು ಮೋದಿ ಮನವಿ ಮಾಡಿದ್ದರು. ಅಲ್ಲದೆ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸಲು ಪರಸ್ಪರ ಮಾತುಕತೆ ನಡೆಸಿದ್ದರು.

ಇದರ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಗಣರಾಜ್ಯೋತ್ಸವಕ್ಕೆ ಬೋಲ್ಸೊನಾರೊ ಅವರನ್ನು ಆಹ್ವಾನಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬ್ರೆಜಿಲ್ ಅಧ್ಯಕ್ಷರು ಸಹ ಅಷ್ಟೇ ಪ್ರೀತಿಯಿಂದ ಭಾರತದ ಆಹ್ವಾನವನ್ನು ಸ್ವೀಕರಿಸಿದ್ದಾರೆ ಎಂದು ಅಧಿಕೃತ ಹೇಳಿಕೆಯಿಂದ ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಉಭಯ ದೇಶಗಳ ಕಾರ್ಯತಂತ್ರದ ಸಹಭಾಗಿತ್ವವನ್ನು ಹೆಚ್ಚಿಸುತ್ತಿವೆ. ಈ ಸಮಾರಂಭಕ್ಕೆ ಇಬ್ಬರು ನಾಯಕರು ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ವ್ಯಾಪಾರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಎದುರು ನೋಡುತ್ತಿದ್ದೇನೆ. ಕೃಷಿ ಉಪಕರಣಗಳು, ಪಶುಸಂಗೋಪನೆ, ಸುಗ್ಗಿಯ ನಂತರದ ತಂತ್ರಜ್ಞಾನಗಳು ಸೇರಿದಂತೆ ಬ್ರೆಜಿಲ್‍ನಿಂದ ಹೂಡಿಕೆ ಮಾಡಲು ಸಾಧ್ಯವಿರುವ ಪ್ರದೇಶಗಳ ಬಗ್ಗೆ ಪ್ರಧಾನಿ ಮೋದಿ ವಿವರಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬ್ರೆಜಿಲ್ ಅಧ್ಯಕ್ಷರು ತಮ್ಮ ಸನ್ನದ್ಧತೆಯನ್ನು ವ್ಯಕ್ತಪಡಿಸಿದ್ದು, ಭಾರತಕ್ಕೆ ದೊಡ್ಡ ವ್ಯಾಪಾರ ನಿಯೋಗವೊಂದು ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದಾರೆ. ಉಭಯ ನಾಯಕರು ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಗಳು ಸೇರಿದಂತೆ ಸಹಕಾರ ಹಾಗೂ ಇತರೆ ಕ್ಷೇತ್ರಗಳ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖವಾಗಿದೆ. ಅಲ್ಲದೆ ಭಾರತೀಯ ನಾಗರಿಕರಿಗೆ ವೀಸಾ ರಹಿತ ಪ್ರಯಾಣಕ್ಕೆ ಅವಕಾಶ ನೀಡಿರುವ ಅಧ್ಯಕ್ಷರ ನಿರ್ಧಾರವನ್ನು ಪ್ರಧಾನಿ ಮೋದಿ ಸ್ವಾಗತಿಸಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English