ತುಮಕೂರು : ಯಾರನ್ನು ಬೇಕಾದರೂ ಸೋಲಿಸಬಹುದು ಎಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ ಎಂದು ಪರೋಕ್ಷವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೋಲನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಪ್ರಸ್ತಾಪಿಸಿ ಟಾಂಗ್ ನೀಡಿದ್ದಾರೆ.
ನಗರದಲ್ಲಿ ನಡೆದ ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಸುಪರ್ ಸೀಡ್ ಆದ ಸಂದರ್ಭದಲ್ಲಿ ನನ್ನ ಪರವಾಗಿ ನಿಂತು, ಸಾಕಷ್ಟು ಜನ ಪ್ರತಿಭಟಿಸಿದ್ದೀರಿ. ಆಗಲೇ ನನಗೆ ಧೈರ್ಯ ಬಂತು ಜಿಲ್ಲೆಯಾದ್ಯಂತ ನನ್ನೊಂದಿಗೆ ಜನ ಇದ್ದಾರೆ ಎಂದು ತಿಳಿಯಿತು. ಯಾರನ್ನು ಬೇಕಾದರೂ ಸೋಲಿಸುವ ಶಕ್ತಿ ನನಗಿದೆ ಎಂದು ತಿಳಿಯಿತು ಎನ್ನುವ ಮೂಲಕ ಪರೋಕ್ಷವಾಗಿ ದೇವೇಗೌಡರಿಗೆ ಟಾಂಗ್ ನೀಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನಾಡಿನ ದೊರೆ ಎಂದು ಸಂಭೋದಿಸಿದ ಅವರು, ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ವೇಳೆ ಸಿಎಂ ಯಡಿಯೂರಪ್ಪ ನಾನು ಇದ್ದೇನೆ ತಲೆ ಕೆಡಿಸಿಕೊಳ್ಳಬೇಡ ಎಂದು ಅಭಯ ಹಸ್ತ ನೀಡಿದರು. ಮನೆ ಮುರುಕರು ಸಹಕಾರ ಕ್ಷೇತ್ರದಿಂದ ನನ್ನನ್ನು ತೆಗೆಯಬೇಕೆಂದು ನೋಡಿದರು ಎಂದು ವಾಗ್ದಾಳಿ ನಡೆಸಿದರು.
ತುಮಕೂರು ಜಿಲ್ಲೆಯಲ್ಲಿ ಸಾಲ ಮಾಡಿದ ರೈತರು ನಿಧನವಾದರೆ ಅವರ 1 ಲಕ್ಷ ರೂ. ಸಾಲ ಮನ್ನಾ ಮಾಡಲು ಸಿಎಂ ಅನುಮತಿ ನೀಡಿದ್ದಾರೆ. ಅದೂ ಸಹ ಬ್ಯಾಂಕ್‍ನ ಲಾಭದ ಹಣದಲ್ಲಿ. ಅಲ್ಲದೆ ಬಜೆಟ್ ನಲ್ಲಿ ತುಮಕೂರು ಜಿಲ್ಲೆಗೆ ಮೆಗಾ ಡೈರಿ ಮಂಜೂರಾತಿ ಘೋಷಣೆ ಮಾಡಬೇಕೆಂದು ಮನವಿ ಮಾಡಿದ್ದೇನೆ. ಈ ಬಜೆಟ್‍ನಲ್ಲಿ ಆಗದಿದ್ದರೂ ಮುಂದಿನ ಬಜೆಟ್ ನಲ್ಲಾದರೂ ಸಿಎಂ ಮಾಡಿಕೊಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಖಾಸಗಿ ಕಂಪನಿಗಳು ರೈತರ ಚಿನ್ನವನ್ನು ಲೂಟಿ ಮಾಡುತ್ತಿದ್ದಾರೆ. ಅವರಿಗೆ ಕಡಿವಾಣ ಹಾಕಬೇಕಿದೆ. ಅಲ್ಲದೆ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಬೇಕು. ಸಿಎಂ ಯಶಸ್ವಿನಿ ಯೋಜನೆ ಘೋಷಣೆ ಮಾಡಬೇಕು ಎಂದು ರಾಜಣ್ಣ ಈ ವೇಳೆ ಒತ್ತಾಯಿಸಿದರು.
Click this button or press Ctrl+G to toggle between Kannada and English