ಶಾಲೆ-ಕಾಲೇಜುಗಳ ಆವರಣದ ಬಳಿ ತಂಬಾಕು ಮಾರಾಟ ಕಂಡು ಬಂದಲ್ಲಿ ಕ್ರಮ ಕೈಗೊಳ್ಳಿ : ಜಿಲ್ಲಾಧಿಕಾರಿ ಜಿ.ಜಗದೀಶ್

11:42 AM, Friday, November 15th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Jagadeesh

ಉಡುಪಿ : ಶಾಲೆ-ಕಾಲೇಜುಗಳ ಆವರಣದ ಬಳಿ ತಂಬಾಕು ಉತ್ಪನ್ನಗಳನ್ನು ಮಾರುವ ಪ್ರಕರಣ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು , ದಂಡ ವಿಧಿಸಿ, ದಂಡ ವಿಧಿಸುವಲ್ಲಿ ಯಾವುದೇ ದಾಕ್ಷಿಣ್ಯ ತೋರಬೇಡಿ ಎಂದು ಜಿಲ್ಲಾ ತಂಬಾಕು ನಿಯಂತ್ರಣ ದಳದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ. ಅವರು ಗುರುವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ತಂಬಾಕು ನಿಯಂತ್ರಣ ಘಟಕ, ಜಿಲ್ಲಾ ತಂಬಾಕು ನಿಷೇಧ ಕೋಶದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳ ಸಮೀಪದ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ತೆರನಾದ ತಂಬಾಕು ಉತ್ಪನ್ನಗಳು ಮಾರಾಟವಾಗುತ್ತಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಂಡು ಒಂದು ವಾರದೊಳಗೆ ವರದಿ ನೀಡುವಂತೆ ಪ್ರೌಡ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಇಲಖೆಯ ಅಧಿಕಾರಿಗಳಿಗೆ ಸೂಚಿಸಿದ ಡಿಸಿ, ನಿಷೇಧಿತ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮತ್ತು ಬಳಕೆ ತಡೆಯಲು ಹಾಗೂ ಕಾಯಿದೆಯ ಸಮರ್ಪಕ ಮಾಡಲು ಕರಿಣ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಹೇಳಿದರು. ತಂಬಾಕು ವರ್ಜನೆ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲೆಯ ಸರಕಾರಿ ಮತ್ತು ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲೂ , ತಂಬಾಕು ತ್ಯಜಿಸಲು ಕ್ವಿಟ್ ಲೈನ್ ಸಂಖ್ಯೆಯ ಫಲಕ ಅಳವಡಿಸುವಂತೆ ಸೂಚಿಸಿದರು.

ಜಿಲ್ಲೆಯ ಎಲ್ಲಾ ಬೀಚ್ ಗಳಲ್ಲೂ ‘ತಂಬಾಕು ಮುಕ್ತ ವಲಯ’ ಹೋರ್ಡಿಂಗ್ ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ನಿರ್ದೇಶನ ನೀಡಿದ ಡಿಸಿ, ಹೊಸದಾಗಿ ರಚನೆಯಾದ ನಾಲ್ಕೂ ತಾಲೂಕುಗಳಲ್ಲಿ ತಂಬಾಕು ನಿಗ್ರಹ ದಳದ ಸದಸ್ಯರುಗಳನ್ನು ನೇಮಕ ಮಾಡಿಕೊಳ್ಳಲು ಹಾಗೂ ಬಾರ್ ಅಂಡ್ ರೆಸ್ಟೊರೆಂಟ್ ಗಳಲ್ಲಿ ಧೂಮಪಾನ ಮಾಡಲು ಪ್ರತ್ಯೇಕ ಸ್ಮೋಕಿಂಗ್ ಜೋನ್ ನಿರ್ಮಿಸಿರುವ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೋಟ್ಪಾ ನಿಯಂತ್ರಣ ದಳದ ಅಧಿಕಾರಿಗಳು ಜಿಲ್ಲೆಯಾದ್ಯಂತ ತನಿಖೆ ನಡೆಸಿದ್ದು, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವವರು, ಚಿಲ್ಲರೆ ಸಿಗರೇಟ್ ಮಾರುವ ವ್ಯಾಪಾರಸ್ಥರ ಮೇಲೆ ದಂಡ ವಿಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ , ಏಪ್ರಿಲ್ 2019 ರಿಂದ ಇದುವರೆಗೆ 242 ಪ್ರಕರಣಗಳಲ್ಲಿ 26440 ರೂ ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ್ ಮಾಹಿತಿ ನೀಡಿದರು.

ಸಿಗರೇಟ್ ಮತ್ತು ತಂಬಾಕಿನ ಚಟದಿಂದ ಮುಕ್ತಿ ಹೊಂದಲು ಬಯಸುವವರಿಗೆ ಡಿಅಡಿಕ್ಷನ್ ಕ್ಯಾಂಪ್ ಗಳನ್ನು ಹಮ್ಮಿಕೊಳ್ಳಲಾಗಿದ್ದು, 2018 ರಲ್ಲಿ 2046 ಜನರಿಗೆ ಕೌನ್ಸೆಲಿಂಗ್ ನೀಡಲಾಗಿತ್ತು, ಇದರಲ್ಲಿ 211 ಜನ ಮತ್ತು 2019 ರಲ್ಲಿ 936 ಜನರಲ್ಲಿ 89 ಜನರು ಶಾಶ್ವತವಾಗಿ ಸಿಗರೇಟ್ ಸೇದುವುದನ್ನು ತ್ಯಜಿಸಿದ್ದಾರೆ ಎಂದು ಡಾ. ವಾಸುದೇವ್ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಪ್ರೀತಿ ಗೆಹಲೋತ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಬಾಳಿಗಾ ಆಸ್ಪತ್ರೆ ವೈದ್ಯ ಡಾ. ಬಿ.ವಿ.ಭಂಡಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English