ಭಕ್ತ ಕನಕದಾಸರ ಕೀರ್ತನೆಗಳು ಸಾರ್ವಕಾಲಿಕ : ಜಿಲ್ಲಾಧಿಕಾರಿ

6:55 PM, Friday, November 15th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Kanakadasa-Jayanthiಮಡಿಕೇರಿ :  ಭಕ್ತ ಕನಕದಾಸರ ಕೀರ್ತನೆಗಳು ಸಾರ್ವಕಾಲಿಕವಾಗಿದ್ದು, ಕನಕದಾಸರ ಸಂದೇಶಗಳನ್ನು ತಿಳಿದುಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸಲಹೆ ಮಾಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಡಿ.ದೇವರಾಜು ಅರಸು ಭವನದಲ್ಲಿ ಶುಕ್ರವಾರ ನಡೆದ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕನಕದಾಸರು ’ನಾನು ಹೋದರೆ, ಹೋದೇನೂ’ ಎಂಬ ಸಂದೇಶ ಸಾರಿದ್ದಾರೆ. ’ನಾನು’ ಎಂಬುದನ್ನು ಬಿಡಬೇಕು, ಇದರಿಂದ ಸಮಸ್ಯೆಗಳು ಹೆಚ್ಚಾಗುತ್ತವೆಯೇ ಹೊರತು, ಪರಿಹಾರವಾಗುವುದಿಲ್ಲ, ಆದ್ದರಿಂದ ಸೌಜನ್ಯ, ಭ್ರಾತೃತ್ವ, ಸಹೋದರತೆ ಬೆಳೆಸಿಕೊಳ್ಳಬೇಕು. ಬದುಕಿನಲ್ಲಿ ’ನಾನು’ ಎಂಬುದನ್ನು ಬಿಟ್ಟರೆ, ಉತ್ತಮ ಜೀವನ ನಡೆಸಬಹುದು ಎಂಬುದನ್ನು ಕನಕದಾಸರು ಸಾರಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಮುಖ್ಯ ಭಾಷಣ ಮಾಡಿದ ಸರಸ್ವತಿ ಡಿಇಡಿ ಕಾಲೇಜಿನ ಪ್ರಾಂಶುಪಾಲರಾದ ಕುಮಾರ್ ಅವರು ದಾಸ ಸಾಹಿತ್ಯವು ಒಂದು ಸಾಲು, ನಾಲ್ಕು ಪದ ಹೊಂದಿದೆ ಎಂದು ಅವರು ತಿಳಿಸಿದರು.

Kanakadasa-Jayanthiಭಕ್ತ ಕನಕದಾಸರು ಅಂಬಲಿ, ಕಂಬಳಿ, ಹಮ್ಮು ಮತ್ತು ಬಿಮ್ಮು ಈ ನಾಲ್ಕು ಪದಗಳಲ್ಲಿ ಸಾಕಷ್ಟು ಅರ್ಥಗಳನ್ನು ತಿಳಿಸಿದ್ದಾರೆ. ಪ್ರತಿಯೊಬ್ಬರಿಗೂ ಊಟ, ಬಟ್ಟೆ ಅತಿ ಅವಶ್ಯಕ, ಇವುಗಳನ್ನು ಗಳಿಸಲು ಹಮ್ಮು, ಬಿಮ್ಮು ಬಿಡಬೇಕು ಎಂದು ಭಕ್ತ ಕನಕದಾಸರು ಹೇಳಿದ್ದಾರೆ ಎಂದರು.

ಜನರ ನಾಯಕನಾಗಿ ಬೆಳೆದ ಕನಕದಾಸರು, ಇವರ ಕೀರ್ತನೆ ಮತ್ತು ಸಂದೇಶಗಳು ೨೧ ನೇ ಶತಮಾನದಲ್ಲಿ ದಾಸ ಸಾಹಿತ್ಯ ಪ್ರಾಯೋಗಾಲಯವಿದ್ದಂತೆ. ಕನಕದಾಸ ಚಿಂತನೆಗಳನ್ನು ಅಧ್ಯಯನ ಮಾಡಬೇಕು. ’ಕುಲ ಕುಲವೆಂದು ಹೊಡೆದಾಡದಿರಿ, ಕುಲ ಯಾವುದೆಂದು ಬಲ್ಲಿರ’ ಎಂಬ ಸಂದೇಶ ಸಾರುವ ಮೂಲಕ ಕನಕದಾಸರು ಎಲ್ಲರೂ ಸರಿ ಸಮಾನವಾಗಿ ಬದುಕಬೇಕು ಎಂಬುದನ್ನು ತಿಳಿಸಿದ್ದಾರೆ ಎಂದರು.

ಭಕ್ತ ಕನಕದಾಸ ವಿಚಾರಧಾರೆ ಹಾಗೂ ಜೀವನ ಚರಿತ್ರೆ ತಿಳಿದುಕೊಳ್ಳಬೇಕು. ಇದರಿಂದ ಹೆಚ್ಚಿನ ಜ್ಞಾನಾರ್ಜನೆ ದೊರೆಯುತ್ತದೆ ಎಂದು ಉಪನ್ಯಾಸಕರಾದ ಕುಮಾರ್ ಅವರು ಹೇಳಿದರು.

ಕನಕದಾಸರು ರಾಮಧಾನ್ಯ ಚರಿತ್ರೆ, ಮೋಹನ ತರಂಗಿಣಿ, ನಳ ಚರಿತ್ರೆ ಹಾಗೂ ಹರಿ ಭಕ್ತಸಾರ ಕಾವ್ಯ ಮತ್ತು ಕೀರ್ತನೆಗಳನ್ನು ರಚಿಸಿ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ್ದಾರೆ ಎಂದು ಅವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಲೋಕೇಶ್ ಸಾಗರ್ ಅವರು ಮಾತನಾಡಿ ಕನಕದಾಸರ ಕೀರ್ತನೆಗಳು ಪ್ರತಿಯೊಬ್ಬರೂ ಓದಬೇಕು. ಇದರಿಂದ ಸಮಾಜದಲ್ಲಿ ಬದಲಾವಣೆ ಕಾಣಬಹುದು ಎಂದರು.

ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಜಿ.ಕೆಂಚಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಕರಾದ ಮಚ್ಚಾಡೊ, ನಗರಸಭೆ ಪೌರಾಯುಕ್ತರಾದ ರಮೇಶ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಪುಟ್ಟರಾಜು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ, ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಗೀತಾ, ಬಿಸಿಎಂ ಇಲಾಲೆಯ ತಾಲ್ಲೂಕು ಅಧಿಕಾರಿ ಕವಿತಾ, ಐಟಿಡಿಪಿ ಇಲಾಖೆಯ ವ್ಯವಸ್ಥಾಪಕರಾದ ದೇವರಾಜು ಇತರರು ಇದ್ದರು.

ಕಲಾವಿದರಾದ ಶಂಕರಯ್ಯ ನಾಡಗೀತೆ ಹಾಡಿದರು, ಮಂಜುನಾಥ್ ನಿರೂಪಿಸಿದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್ ಸ್ವಾಗತಿಸಿ, ವಂದಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English