ಮಂಗಳೂರು ಕಾಂಗ್ರೆಸ್ ನಲ್ಲಿ ಟಿಕೇಟ್ ರಾಜಕೀಯ

4:59 PM, Wednesday, October 24th, 2012
Share
1 Star2 Stars3 Stars4 Stars5 Stars
(4 rating, 1 votes)
Loading...

Rohan Loboಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ರಾಜಕೀಯ ಈಗ ಗರಿಕೆದರಿಕೊಂಡಿದೆ. ಕ್ರಿಶ್ಚಿಯನ್ ಕೊಂಕಣಿಗರು ದೊಡ್ಡ ಸಂಖ್ಯೆಯಲ್ಲಿ ಮತದಾರರಾಗಿರುವ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಂಗಣದಲ್ಲಿ ಟಿಕೇಟ್ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಎನ್ನುವ ವಿಚಾರ ಮತದಾರ ಪ್ರಭುಗಳಿಗೆ ಗೊಂದಲಕ್ಕೆ ಕಾರಣವಾಗುತ್ತಿದೆ. ಕಾಂಗ್ರೆಸ್ ಟಿಕೇಟ್ ಮಂಗಳೂರು ವಿಧಾನಸಭಾದ ಲೆಕ್ಕಚಾರದ ಪ್ರಕಾರ ಕ್ರಿಶ್ಚಿಯನ್ ಸಮುದಾಯವರಿಗೆ ಸಿಗಬೇಕು ಎನ್ನುವ ನಿಯಮ ಚಾಲ್ತಿಯಲ್ಲಿತ್ತು. ಆದರೆ ಪ್ರತಿ ಬಾರಿನೂ ಇಂತಹ ಟಿಕೇಟ್ ಕ್ರಿಶ್ಚಿಯನ್ ಅಭ್ಯರ್ಥಿಗೆ ಸಿಕ್ಕಿದಾಗ ಸೋಲನ್ನೇ ನೆಚ್ಚಿಕೊಂಡರು. ಕಾಂಗ್ರೆಸ್ ಹೈಕಮಾಂಡ್ ನಲ್ಲೂ ಸೋತ ಸಮುದಾಯಕ್ಕೆ ಯಾಕೆ ಟಿಕೇಟ್ ನೀಡಬೇಕು ಎನ್ನುವ ಚರ್ಚೆ ಕೂಡ ನಡೆದಿತ್ತು.

ಈಗ ಲೆಕ್ಕಚಾರಗಳು ಅದಲು ಬದಲಾಗಿದೆ. ಮತಬೇಟೆಯಲ್ಲಿ ಹಣ ಹರಿಸುವ ತಾಕತ್ತು ಯಾರ ಬಳಿಯಲ್ಲಿ ಇದೆಯೋ ಅವನ ಪಾಲಿಗೆ ಟಿಕೇಟ್ ಗ್ಯಾರಂಟಿ ಎನ್ನುವ ಮಾತು ಮಂಗಳೂರು ತುಂಬಾ ಹರಿದಾಡುತ್ತಿದೆ. ಈ ಬಾರಿಯ ಮಂಗಳೂರು ವಿಧಾನ ಸಭಾ ಕ್ಷೇತ್ರದ ಮತದಾನದ ಪೆಟ್ಟಿಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಿಯಲ್ ಎಸ್ಟೇಟ್ ಉದ್ಯಮಿ, ಯುವ ನಾಯಕ ರೋಹನ್ ಮೊಂತೇರೋ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ. ಮಂಗಳೂರು ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿಗಳಲ್ಲಿ ಕ್ರಿಶ್ಚಿಯನ್ ನಾಯಕರ ಹೆಸರು ಜಾಸ್ತಿಯಾಗಿ ಕೇಳಿ ಬರುತ್ತಿದೆ.

ಮಂಗಳೂರಿನ ಮಾಜಿ ಮನಪಾ ಕಮಿಷನರ್ ಜೆ.ಆರ್. ಲೋಬೋ, ಐವನ್ ಡಿಸೋಜಾ, ಪ್ರಶಾಂತ್ ಡಿಸೋಜ, ನವೀನ್, ಲ್ಯಾನ್ಸಿ, ಅರುಣ್ ಕುವೆಲ್ಲೊ ಮುಂತಾದವರು ಕೂಡ ಕಾಂಗ್ರೆಸ್ನ ಟಿಕೆಟ್ ಆಕಾಂಕ್ಷಿಗಳಾಗಿದ್ದರೂ, ರೋಹನ್ ಹೆಸರು ಅಂತಿಮವಾಗುವ ಸಾಧ್ಯತೆ ಹೆಚ್ಚು.

ಅವರು ಜನಾರ್ದನ ಪೂಜಾರಿ, ಆಸ್ಕರ್ ಫರ್ನಾoಡಿಸ್, ವೀರಪ್ಪ ಮೊಯಿಲಿ ಮುಂತಾದ ಕಾಂಗ್ರೆಸ್ ನಾಯಕರೊಂದಿಗೆ ಹೊಂದಿರುವ ಉತ್ತಮ ಸಂಬಂಧ, ಗುಂಪುಗಾರಿಕೆಯಲ್ಲಿ ಗುರುತಿಸಿಕೊಳ್ಳದ ಉತ್ಸಾಹಿ ಮತ್ತು ಭರವಸೆಯ ನಾಯಕತ್ವ, ಜನಸಾಮಾನ್ಯರೊಂದಿಗೆ ಹೊಂದಿರುವ ನಿಕಟ ಸಂಬಂಧ, ಸಾರ್ವಜನಿಕ ವಲಯದಲ್ಲಿ ಗಳಿಸಿಕೊಂಡಿರುವ ಉತ್ತಮ ಹೆಸರು, ಶುದ್ಧ ಚಾರಿತ್ರ್ಯ, ಮತ ಸೆಳೆಯುವ ಶಕ್ತಿ…ಮುಂತಾದವುಗಳು ಇವರಿಗೆ ಪ್ಲಸ್ ಪಾಯಿಂಟ್ ಆಗಲಿದೆ.

ರೋಹನ್ ಅವರು ಕೇವಲ ಕಾಂಗ್ರೆಸ್ ನಾಯಕರಾಗಿ ಉಳಿದಿಲ್ಲ, ಜತೆಗೆ ಕ್ರಿಶ್ಚಿಯನ್ ಸಮುದಾಯದೊಂದಿಗೆ ಮಾತ್ರ ಗುರುತಿಸಿಕೊಂಡ ನಾಯಕರಲ್ಲ ಎಂಬುದಕ್ಕೆ ಇತ್ತೀಚೆಗೆ ಬಂಟರ ಸಂಘದ ಗಣೇಶೋತ್ಸವ ಸಂದರ್ಭದ ಒಂದು ಕಾರ್ಯಕ್ರಮದಲ್ಲಿ ನಿಟ್ಟೆಗುತ್ತು ರವಿರಾಜ ಶೆಟ್ಟಿ ಅವರು ರೋಹನ್ ಗುಣಗಾನ ಮಾಡಿರುವುದು ಉತ್ತಮ ಸಾಕ್ಷಿ. ಮುಂದಿನ ಬಾರಿ ಮಂಗಳೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರೋಹನ್ ಅವರನ್ನು ಕಣಕ್ಕಿಳಿಸಿದರೆ ಅವರು ವಿಜಯಿಯಾಗಲಿದ್ದಾರೆ. ಅವರ ಗೆಲುವಿಗೆ ನಾವೂ ಶ್ರಮಿಸೋಣ ಎಂಬರ್ಥದ ಮಾತಾಡಿರುವುದು ಮತ್ತು ಅದಕ್ಕೆ ಸಭಿಕರಿಂದ ಸಿಕ್ಕಿರುವ ಅದ್ಭುತ ಕರತಾಡನದ ಪ್ರತಿಕ್ರಿಯೆ ರೋಹನ್ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಇತ್ತ ಕಡೆ ಕಳೆದ ಬಾರಿ ಕಾಂಗ್ರೆಸ್ ನಿಂದ ಟಿಕೇಟ್ ಗಿಟ್ಟಿಸಿಕೊಂಡ ಐವನ್ ಡಿಸೋಜ ಈ ಬಾರಿಯ ಕಾಂಗ್ರೆಸ್ ಟಿಕೇಟ್ ನಿಂದ ವಂಚಿತರಾಗುವ ಸೂಚನೆಗಳು ಹೈಕಮಾಂಡ್ ಮೂಲಕವೇ ರವಾನೆಯಾಗಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಅವರಿಗೊಂದು ನಿಗಮ ಅಥವಾ ಇತರ ಯಾವುದೇ ಹುದ್ದೆ ನೀಡಬಹುದು ಎಂದು ಹಿರಿಯ ಕಾಂಗ್ರೆಸ್ ನಾಯಕರು ಐವನ್ ಜತೆ ಒಂದು ಸುತ್ತಿನ ಮಾತುಕತೆ ನಡೆಸಿ ತಮ್ಮ ಟಿಕೇಟ್ ಆಕಾಂಕ್ಷಿ ಕನಸ್ಸಿಗೆ ತಣ್ಣೀರು ಹಾಕಿದ್ದಾರೆ. ಮತ್ತೊಂದೆಡೆ ಪಿಲಿಕುಳ ನಿಸರ್ಗಧಾಮದ ಮುಖ್ಯಸ್ಥರಾಗಿರುವ ಜೆ. ಆರ್. ಲೋಬೋ ಅವರನ್ನು ಕೂಡ ಕಾಂಗ್ರೆಸ್ ಗೆ ಸೇರಿಸಿಕೊಳ್ಳುವ ಮೂಲಕ ಅವರು ಕೂಡ ಕಾಂಗ್ರೆಸ್ ಟಿಕೆಟ್ ಗೆ ಜೋತು ಬಿದ್ದಿದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ. ಆಸ್ಕರ್ ಫೆನಾಂಡೀಸ್ ಅವರ ಜತೆಯಲ್ಲಿ ಜೆ.ಆರ್.ಲೋಬೋ ಅವರಿಗೆ ತೀರಾ ಹತ್ತಿರದ ಒಡನಾಟ ಇರುವ ಕಾರಣ ಆಸ್ಕರ್ ಹೈಕಮಾಂಡ್ ಮೇಲೆ ಪ್ರಭಾವ ತಂದು ಜೆ. ಆರ್. ಲೋಬೋ ಅವರಿಗೆ ಕೊನೆ ಗಳಿಕೆಯಲ್ಲಿ ಟಿಕೇಟ್ ಕೊಟ್ಟರೂ ಆಶ್ಚರ್ಯ ಪಡುವ ಅಗತ್ಯವಿಲ್ಲ. ಇವುಗಳ ನಡುವೆ ಕಾಂಗ್ರೆಸ್ ನಿಂದ ಬಂಟ್ವಾಳ ಮೂಲದ ಡೋಲ್ಪಿ ಪ್ರಶಾಂತ್ ಡಿಸೋಜ ಅವರು ಕೂಡ ಟಿಕೇಟ್ ಅಂಗಳದಲ್ಲಿ ಕಾದು ಕೂತಿದ್ದಾರೆ ಎನ್ನುವ ವರದಿ ಇದೆ. ವೀರಪ್ಪ ಮೊಯ್ಲಿ ಸೇರಿದಂತೆ ಪ್ರಭಾವಿ ನಾಯಕರ ಜತೆಯಲ್ಲಿ ಕಾಣಿಸಿಕೊಂಡಿರುವ ಪ್ರಶಾಂತ್ ಡಿಸೋಜ ಮಂಗಳೂರು ಮತದಾರನ ಪಾಲಿಗೆ ಎಂದಿಗೂ ಕಾಣಿಸಿಕೊಂಡಿಲ್ಲದ ಮುಖ.

ಬದಲಾಗಿ ಬಂಟ್ವಾಳದಲ್ಲಿ ಮತದಾನ ಹಕ್ಕು ಹೊಂದಿರುವ ಪ್ರಶಾಂತ್ ಮಂಗಳೂರಿನಲ್ಲಿ ಕಾಂಗ್ರೆಸ್ ನಿಂದ ಪ್ರತಿನಿಧಿಸುವ ಹಕ್ಕು ಹೊಂದಿದ್ದಾರೆಯೇ ಎನ್ನುವ ಪ್ರಶ್ನೆ ಕೂಡ ಎದುರಿಗೆ ನಿಂತಿದೆ.

ಉಳಿದಂತೆ ನವೀನ್, ಅರುಣ್, ಲ್ಯಾನ್ಸಿ ಹೆಸರು ಗಳು ಬರೀ ಟಿಕೇಟ್ ಆಕಾಂಕ್ಷಿಗಳ ಸರದಿಯಲ್ಲಿ ಕೇಳಿಸಿಕೊಂಡಿದೆ. ಆದರೆ ಅವರಿಗಂತೂ ಟಿಕೇಟ್ ಸಿಗುವ ಚಾನ್ಸ್ ಬಹಳ ಕಡಿಮೆ ಇದೆ. ಎನ್ನೋದು ಹೈಕಮಾಂಡ್ ಮಾತು. ಈ ಕ್ಷೇತ್ರದಲ್ಲಿ ಪ್ರಸ್ತುತ ಬಿಜೆಪಿ ಶಾಸಕರಿದ್ದರೂ, ರಾಜ್ಯಮಟ್ಟದಲ್ಲಿ ಬಿಜೆಪಿಗೆ ಆಗಿರುವ ಹಾನಿಯ ಪ್ರಭಾವ ಇಲ್ಲೂ ಆ ಪಕ್ಷವನ್ನು ಕಾಡಲಿದೆ. ಅದರ ಸಂಪೂರ್ಣ ಲಾಭ ಕಾಂಗ್ರೆಸ್ಗೆ ಸಿಗುವುದು ಖಚಿತ. ಅಂಥ ಸಂದರ್ಭದಲ್ಲಿ ರೋಹನ್ ಅವರಂಥ ಪ್ರಭಾವಿ, ಆಕರ್ಷಕ ಮತ್ತು ಯುವ ನೇತಾರನನ್ನು ಕಾಂಗ್ರೆಸ್ ಕಣಕ್ಕಿಳಿಸಿದರೆ ವಿರೋಧ ಪಕ್ಷಗಳು ಸುಲಭವಾಗಿ ಸೋಲಲಿದೆ ಎಂದು ಹೇಳುತ್ತಿದ್ದಾರೆ ಇಲ್ಲಿನ ಮತದಾರರು. ತನ್ನ ಆತ್ಮೀಯರ ಗುಂಪಿನಲ್ಲಿ ಎಲ್ಲ ಕೋಮಿನವರನ್ನೂ ಸೇರಿಸಿಕೊಂಡು ಎಲ್ಲರೊಳಗೊಂದಾಗಿ ಸಮಾಜದೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿರುವ ನಗುಮುಖದ ಈ ಯುವ ಉದ್ಯಮಿಗಿಂತ ಉತ್ತಮ ಅಭ್ಯರ್ಥಿ ಕಾಂಗ್ರೆಸ್ಗೆ ಸಿಗುವುದು ಸಾಧ್ಯವಿಲ್ಲ. ಕಾಂಗ್ರೆಸ್ನ ಗೆಲುವಿನ ಸಾಧ್ಯತೆಯನ್ನು ಇವರಿಗಿಂತ ಹೆಚ್ಚು ಯಾರೂ ಗಟ್ಟಿಗೊಳಿಸುವ ಸಂಭವವೂ ಇಲ್ಲ. ಹಾಗಾಗಿ ರೋಹನ್ ಅವರು ಭಾವೀ ಶಾಸಕರು ಎಂದು ಈಗಾಗಲೇ ಜನಮಾನಸದಲ್ಲಿ ಗುರುತಿಸಿಕೊಂಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English