‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಬರೀ ನಟ ಮಾತ್ರ ಅಲ್ಲ.. ಉತ್ತಮ ನಿರ್ದೇಶಕ ಕೂಡ ಹೌದು. ‘ಮೈ ಆಟೋಗ್ರಾಫ್’, ‘#73 ಶಾಂತಿನಿವಾಸ’, ‘ವೀರ ಮದಕರಿ’, ‘ಜಸ್ಟ್ ಮಾತ್ ಮಾತಲ್ಲಿ’, ‘ಕೆಂಪೇಗೌಡ’ ಮತ್ತು ‘ಮಾಣಿಕ್ಯ’ ಚಿತ್ರಗಳನ್ನ ನಿರ್ದೇಶನ ಮಾಡಿರುವ ಸುದೀಪ್ ಇದೀಗ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರಂತೆ ಎಂಬ ಗುಸು ಗುಸು ನಿನ್ನೆಯಷ್ಟೇ ಗಾಂಧಿನಗರದಲ್ಲಿ ಕೇಳಿಬಂದಿತ್ತು.
ಡೈರೆಕ್ಟರ್ ಸೀಟ್ ಮೇಲೆ ಸುದೀಪ್ ಕುಳಿತು ಐದು ವರ್ಷಗಳಾಗಿವೆ. ನಟನೆಯಿಂದ ಬ್ಯಾಕ್ ಟು ಬ್ಯಾಕ್ ಹಿಟ್ ಕೊಡುತ್ತಾ ಬರುತ್ತಿರುವ ಸುದೀಪ್ ಇದೀಗ ಮತ್ತೆ ನಿರ್ದೇಶನದ ಕಡೆ ಒಲವು ತೋರುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದ ಬೆನ್ನಲ್ಲೆ ಮತ್ತೊಂದು ಅಪ್ ಡೇಟ್ ಸಿಕ್ಕಿದೆ.
ಅದೇನಪ್ಪಾ ಅಂದ್ರೆ, ತೆಲುಗಿನಲ್ಲಿ ಸೂಪರ್ ಹಿಟ್ ಆದ ‘ಭರತ್ ಅನೇ ನೇನು’ ಚಿತ್ರವನ್ನ ಕನ್ನಡದಲ್ಲಿ ರೀಮೇಕ್ ಮಾಡಲು ಸುದೀಪ್ ಮನಸ್ಸು ಮಾಡಿದ್ದಾರಂತೆ. ‘ಭರತ್ ಅನೇ ನೇನು’ ಚಿತ್ರದ ರೀಮೇಕ್ ರೈಟ್ಸ್ ಸುದೀಪ್ ಬಳಿ ಇದ್ಯಂತೆ ಎಂಬ ಅಂತೆ-ಕಂತೆ ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿದೆ.
ಸದ್ಯಕ್ಕೆ ‘ಕೋಟಿಗೊಬ್ಬ-3’, ‘ದಬ್ಬಂಗ್-3’ ಸಿನಿಮಾಗಳ ಶೂಟಿಂಗ್ ನಲ್ಲಿ ಸುದೀಪ್ ಬಿಜಿಯಾಗಿದ್ದಾರೆ. ‘ಬಿಲ್ಲಾರಂಗಾ ಬಾಷಾ’ ಮತ್ತು ‘ಫ್ಯಾಂಟಮ್’ ಚಿತ್ರಗಳಿಗೆ ಸುದೀಪ್ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಎಲ್ಲಾ ಚಿತ್ರಗಳ ಕಮ್ಮಿಟ್ ಮೆಂಟ್ ಮುಗಿದ ಮೇಲೆ ‘ಭರತ್ ಅನೇ ನೇನು’ ರೀಮೇಕ್ ಪ್ರಾಜೆಕ್ಟ್ ಗೆ ಸುದೀಪ್ ಕೈಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಂದ್ಹಾಗೆ, ಮತ್ತೆ ನಿರ್ದೇಶನದ ಕಡೆ ಮುಖ ಮಾಡಿರುವ ಕುರಿತಾಗಲಿ, ‘ಭರತ್ ಅನೇ ನೇನು’ ರೀಮೇಕ್ ರೈಟ್ಸ್ ತಂದಿರುವ ಬಗ್ಗೆಯಾಗಲಿ ಸುದೀಪ್ ಇನ್ನೂ ಸ್ಪಷ್ಟ ಪಡಿಸಿಲ್ಲ. ಎಲ್ಲವೂ ಗಾಂಧಿನಗರದ ಗುಸುಗುಸು ಅಷ್ಟೇ.
Click this button or press Ctrl+G to toggle between Kannada and English