ಮಂಗಳೂರು: ಮಂಗಳೂರು ದಸರಾದ ಭವ್ಯ ಶೋಭಾಯಾತ್ರೆಯು ಬುಧವಾರ ವೈಭವದಿಂದ ನಡೆಯಿತು. ನೂರರ ಸಂಭ್ರಮ ಆಚರಣೆಯ ಅಲೆಯಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನನರಾತ್ರಿಯ ಉತ್ಸವದ ಅಂಗವಾಗಿ ನಡೆಯುವ ನವದುರ್ಗೆಯರು ಸೇರಿದಂತೆ ಟ್ಯಾಬ್ಲೋಗಳ ಭವ್ಯ ಮೆರವಣಿಗೆ ಸಂಜೆ 4.15ರ ವೇಳಗೆ ಕ್ಷೇತ್ರದ ನವೀಕರಣ ಮತ್ತು ಮಂಗಳೂರು ದಸರಾ ರೂವಾರಿ, ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರು.
ಕುದ್ರೋಳಿ ದೇವಸ್ಥಾನದ ಸ್ವರ್ಣ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ, ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದ ಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿದಾತ್ರಿ, ಶಾರದೆಯನ್ನು ಸಂಜೆ ದೇವಸ್ಥಾನದ ಆವರಣಕ್ಕೆ ತಂದಿರಿಸಲಾಯಿತು. ಅಲ್ಲಿಂದ ಭಕ್ತ ಜನಸಾಗರದ ಜಯಘೋಷಗಳೊಂದಿಗೆ ಅಲಂಕೃತ ವಾಹನಗಳಿಗೆ ಏರಿಸಲಾಯಿತು.
ಶೋಭಾಯಾತ್ರೆಯು ಶ್ರೀ ಕ್ಷೇತ್ರದಿಂದ ಹೊರಟು ಮಣ್ಣಗುಡ್ಡೆ, ಲೇಡಿಹಿಲ್, ಲಾಲ್ಬಾಗ್, ಬಲ್ಲಾಳ್ಬಾಗ್, ಎಂಜಿ ರಸ್ತೆ, ಕೆಎಸ್ ರಾವ್ ರಸ್ತೆ, ಹಂಪನಕಟ್ಟೆ, ಜಿಎಚ್ಎಸ್ ರಸ್ತೆ, ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್ಸ್ಟ್ರೀಟ್, ನ್ಯೂಚಿತ್ರಾ ಟಾಕೀಸ್, ಅಳಕೆಯಾಗಿ ಶ್ರೀ ಕ್ಷೇತ್ರದಲ್ಲಿ ಸಮಾಪನಗೊಂಡಿತು.
ಶ್ರೀ ಕ್ಷೇತ್ರದ ವರ್ಣಮಯ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. ಶೋಭಾಯಾತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸಾಂಸ್ಕೃತಿಕ, ಜಾನಪದ ತಂಡಗಳು, ಕೇರಳದ ಚೆಂಡೆವಾದ್ಯ, ಕರಾವಳಿಯ ಹುಲಿವೇಷ, ಮಹಾರಾಷ್ಟ್ರದ ಡೋಲಾನೃತ್ಯ, ತ್ರಿಶೂರಿನ ವರ್ಣಮಯ ಕೊಡೆ, ಕಲ್ಲಡ್ಕದ ಶಿಲ್ಪಾಗೊಂಬೆ, ಮತ್ತು ನೂರಕ್ಕೂ ಹೆಚ್ಚಿನ ಸ್ತಬ್ದಚಿತ್ರಗಳು ವಿಶೇಷ ಆಕರ್ಷಣೆಯಾಗಿದ್ದವು. ಸುಡುಮದ್ದುಗಳ ಪ್ರದರ್ಶನ ನೋಡುಗರ ಮೈ ನವಿರೇಳಿಸಿತು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೆ.ಪಿ ನಂಜುಂಡಿ, ಮೇಯರ್ ಗುಲ್ಜಾರ್ ಬಾನು, ವಿಧಾನಸಭಾ ಉಪಸಭಾಪತಿ ಎನ್. ಯೋಗೀಶ್ ಭಟ್, ಜಯ ಸಿ. ಸುವರ್ಣ, ಹರಿಕೃಷ್ಣ ಬಂಟ್ವಾಳ, ಕಳ್ಳಿಗೆ ತಾರನಾಥ ಶೆಟ್ಟಿ, ಮಾಧವ ಸುವರ್ಣ ಕುದ್ರೋಳಿ, ಯು.ಟಿ ಖಾದರ್, ಎಂ. ಶಶಿಧರ ಹೆಗ್ಡೆ, ಅರಣ್ ಕುವೆಲ್ಲೊ ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು.
ಜನಾರ್ದನ ಪೂಜಾರಿಯವರು ಮಂಗಳೂರು ದಸರದ ಯಶಸ್ಸಿಗೆ ಕಾರಣಕರ್ತರಾದ ಸರ್ವರನ್ನು ಹಾಗೂ ವಿಶೇಷ ಸೇವೆ ಸಲ್ಲಿಸಿದವರನ್ನು ಅಭಿನಂದಿಸಿದರು.
Click this button or press Ctrl+G to toggle between Kannada and English