ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಐದು ಸ್ಥಾಯೀ ಸಮಿತಿಗಳ ಒಟ್ಟು 33 ಸದಸ್ಯ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ವಿಪಕ್ಷ ಕಾಂಗ್ರೆಸ್ ಒಂದು ಸ್ಥಾನ ಗಳಿಸಿತು. ಉಳಿದೆಲ್ಲ ಸ್ಥಾನಗಳು ಬಿಜೆಪಿ ಪಾಲಾಗಿವೆ. ಸಾಮಾನ್ಯವಾಗಿ ದ.ಕ. ಜಿ.ಪಂ.ನಲ್ಲಿ ಸ್ಥಾಯೀ ಸಮಿತಿಗಳ ಸದಸ್ಯರ ಆಯ್ಕೆ ಜಿ.ಪಂ. ಸದಸ್ಯರು, ಮುಖಂಡರ ನಡುವಿನ ಪರಸ್ಪರ ಮಾತುಕತೆ, ಹೊಂದಾಣಿಕೆಯ ಮೂಲಕ ನಡೆಯುತ್ತಿತ್ತು. ಆದರೆ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಿರ್ದಿಷ್ಟ ಸಂಖ್ಯೆಯ ಸ್ಥಾನಗಳಿಗೆ ಪಟ್ಟು ಹಿಡಿದ ಕಾರಣ ಚುನಾವಣೆ ನಡೆಯಿತು.
ಜಿ.ಪಂ.ನಲ್ಲಿ ಬಿಜೆಪಿ ಬಹುಮತ ಹೊಂದಿದೆ. ಆದರೂ ಅದು ಸ್ಥಾಯೀ ಸಮಿತಿ ಚುನಾವಣೆ ಎದುರಿಸಿತು. ಮತದಾನಕ್ಕೂ ಮೊದಲು ನಡೆದ ಮಾತುಕತೆ ವೇಳೆ 12 ಸ್ಥಾನಗಳನ್ನು ನೀಡಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿಯಿತು. ಆದರೆ ಬಿಜೆಪಿ 11 ಸ್ಥಾನಗಳನ್ನು ಮಾತ್ರ ನೀಡಲು ಒಪ್ಪಿಕೊಂಡಿತು. ಅಂತಿಮವಾಗಿ ಮತದಾನ ನಡೆಯಿತು. ಕಾಂಗ್ರೆಸ್ ಒಂದು ಸ್ಥಾನ ಪಡೆಯಲು ಮಾತ್ರ ಶಕ್ತವಾಯಿತು.
ಜಿ.ಪಂ.ನಲ್ಲಿ ಬಿಜೆಪಿ 21 ಮತ್ತು ಕಾಂಗ್ರೆಸ್ 15 ಸದಸ್ಯರನ್ನು ಹೊಂದಿದೆ. ಶಾಸಕರಾದ ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ, ಎಸ್. ಅಂಗಾರ, ಉಮಾನಾಥ ಕೋಟ್ಯಾನ್, ರಾಜೇಶ್ ನಾೖಕ್ ಮತದಾನದಲ್ಲಿ ಪಾಲ್ಗೊಂಡರು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ ಉಪಸ್ಥಿತರಿದ್ದರು. ಸಿಇಒ ಡಾ| ಆರ್. ಸೆಲ್ವಮಣಿ ಚುನಾವಣೆ ನಿರ್ವಹಿಸಿದರು.
Click this button or press Ctrl+G to toggle between Kannada and English