ಬೆಂಗಳೂರು: ನವರಸನಾಯಕ ಜಗ್ಗೇಶ್ ನಟಿಸಿರುವ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರ ನೋಡುತ್ತಿದ್ದ ವ್ಯಕ್ತಿಯೊಬ್ಬರು ಚಿತ್ರಮಂದಿರದಲ್ಲೇ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಜಗ್ಗೇಶ್ ಮೃತಪಟ್ಟ ವ್ಯಕ್ತಿಗೆ ಸಂತಾಪ ಸೂಚಿಸಿದ್ದಾರೆ.
ವ್ಯಕ್ತಿಯೊಬ್ಬರು ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾ ನೋಡಲು ಸೋಮವಾರ ಮೈಸೂರಿನ ಪ್ರಭಾ ಚಿತ್ರಮಂದಿರಕ್ಕೆ ಬಂದಿದ್ದರು. ಈ ವೇಳೆ ಸಿನಿಮಾ ನೋಡುತ್ತಿದ್ದಂತೆ ವ್ಯಕ್ತಿ ಮೃತಪಟ್ಟಿದ್ದಾರೆ. ಕೊನೆಗೆ ಚಿತ್ರ ಮುಗಿದ ನಂತರ ಚಿತ್ರಮಂದಿರ ಸ್ವಚ್ಛಗೊಳಿಸಲು ಸಿಬ್ಬಂದಿ ಹೋಗಿದ್ದಾರೆ. ಈ ವೇಳೆ ವ್ಯಕ್ತಿ ಮೃತಪಟ್ಟಿರುವುದು ತಿಳಿದು ಬಂದಿದೆ.
ಮೃತಪಟ್ಟ ವ್ಯಕ್ತಿಯನ್ನು ನೋಡಿ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಮೃತದೇಹವನ್ನು ಮೈಸೂರಿನ ಮೆಡಿಕಲ್ ಕಾಲೇಜು ಮತ್ತು ಸಂಶೋಧನ ಸಂಸ್ಥೆಯ ಶವಾಗಾರಕ್ಕೆ ರವಾನಿಸಿದ್ದಾರೆ
ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ವ್ಯಕ್ತಿಗೆ ಸುಮಾರು 40 ರಿಂದ 50 ವರ್ಷ ವಯಸ್ಸು ಆಗಿದೆ ಎಂಬುದು ತಿಳಿದು ಬಂದಿದೆ. ಅಲ್ಲದೆ ಅವರ ಎಡಗೈ ಮೇಲೆ ಬೋರೆಗೌಡ ಎಂಬ ಹೆಸರು ಅಚ್ಚೆ ಹಾಕಿಸಿಕೊಂಡಿರುವುದು ಪತ್ತೆಯಾಗಿದೆ. ಆದರೆ ಅವರ ವಿಳಾಸ ಇನ್ನೂ ತಿಳಿದು ಬಂದಿಲ್ಲ.
ಈ ವಿಷಯ ತಿಳಿದ ಜಗ್ಗೇಶ್ ಅವರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. “ದಿಘ್ಬ್ರಾಂತನಾದೆ ಈ ವಿಷಯ ಓದಿ. ನನ್ನ ಅಭಿಮಾನದ ಆತ್ಮವೇ ಒಬ್ಬ ಸಹೋದರನ ಕಳೆದುಕೊಂಡ ದುಃಖವಾಯಿತು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ದಯಮಾಡಿ ಇವರ ವಿಳಾಸ ಸಿಕ್ಕರೆ ತಿಳಿಸಿ ವೈಯಕ್ತಿಕವಾಗಿ ನಾನು ಅವರ ಕುಟುಂಬಕ್ಕೆ ಸಾಂತ್ವನ ಹೇಳಬೇಕು. ಹರಿಓಂ” ಎಂದು ಟ್ವೀಟ್ ಮಾಡಿದ್ದಾರೆ.
ನವರಸ ನಾಯಕ ಜಗ್ಗೇಶ್ ಅಭಿನಯದ `ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾ ಕಳೆದ ವಾರ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.
Click this button or press Ctrl+G to toggle between Kannada and English