ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ದೇವೇಂದ್ರ ಫಡ್ನವಿಸ್ ಬಹುಮತ ಇಲ್ಲದ ಕಾರಣ ತಮ್ಮ ಸ್ಥಾನಕ್ಕೆ ಎರಡನೇ ಬಾರಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಡಿಸಿಎಂ ಅಜಿತ್ ಪವಾರ್ ರಾಜೀನಾಮೆ ಬೆನ್ನಲ್ಲೇ ನ.26 ರಂದು ಮಧ್ಯಾಹ್ನ 3:30 ಕ್ಕೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಿಎಂ ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡುವ ಘೋಷಣೆ ಮಾಡಿದ್ದರು.
ಎನ್ ಸಿಪಿಯ ಅಜಿತ್ ಪವಾರ್ ಅವರ ಬಣದ ಶಾಸಕರ ಬೆಂಬಲ ಹೊಂದಿರುವುದಾಗಿ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟು ಶನಿವಾರದಂದು ಧಿಡೀರ್ ಬೆಳವಣಿಗೆಯಲ್ಲಿ ದೇವೇಂದ್ರ ಫಡ್ನವೀಸ್ ಹಾಗೂ ಅಜಿತ್ ಪವಾರ್ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಶಿವಸೇನೆ-ಎನ್ ಸಿಪಿ-ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವುದನ್ನು ತಡೆದು ಬಿಜೆಪಿ ನಾಯಕರು ಎನ್ ಸಿಪಿಯ ಒಂದು ಬಣದ ಶಾಸಕರೊಂದಿಗೆ ಸೇರಿ ಸರ್ಕಾರ ರಚನೆ ಮಾಡುವ ಉತ್ಸಾಹದಲ್ಲಿದ್ದರು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಎನ್ ಸಿಪಿಯ ಅಜಿತ್ ಪವಾರ್ ಬಣದ ಶಾಸಕರು ಕೊನೆ ಕ್ಷಣದಲ್ಲಿ ಬಿಜೆಪಿಗೆ ಕೈಕೊಟ್ಟು ಪುನಃ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ಹೇಳಿದ್ದರು.
ಇತ್ತ ಬಿಜೆಪಿ ಸರ್ಕಾರ ರಚಿಸಿರುವುದನ್ನು ಪ್ರಶ್ನಿಸಿ ಎನ್ ಸಿಪಿ-ಶಿವಸೇನೆ-ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ನ.27 ರಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಬೇಕೆಂದು ಆದೇಶ ನೀಡಿತ್ತು. ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಡಿಸಿಎಂ ಅಜಿತ್ ಪವಾರ್ ರಾಜೀನಾಮೆ ನೀಡಿದ್ದರು. ಡಿಸಿಎಂ ರಾಜೀನಾಮೆ ನೀಡುತ್ತಿದ್ದಂತೆಯೇ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ತನ್ನ ಸರ್ಕಾರ ಉಳಿಸಿಕೊಳ್ಳುವುದಕ್ಕೆ ಅಗತ್ಯ ಶಾಸಕರ ಬೆಂಬಲ ಇಲ್ಲ ಎಂಬುದು ಖಾತ್ರಿಯಾಗಿ, ಸಿಎಂ ದೇವೇಂದ್ರ ಫಡ್ನವಿಸ್ ಸಹ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ.
Click this button or press Ctrl+G to toggle between Kannada and English