ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಿ : ನ್ಯಾಯಾಧೀಶ ವಿ.ವಿ.ಮಲ್ಲಾಪುರ ಸಲಹೆ

10:44 AM, Wednesday, November 27th, 2019
Share
1 Star2 Stars3 Stars4 Stars5 Stars
(No Ratings Yet)
Loading...

Madikeri

ಮಡಿಕೇರಿ : ಇಡೀ ಜಗತ್ತಿನಲ್ಲಿಯೇ ಬೃಹತ್ ಲಿಖಿತ ಸಂವಿಧಾನ ಹೊಂದಿರುವ ರಾಷ್ಟ್ರದಲ್ಲಿ, ಸಂವಿಧಾನವು ಪವಿತ್ರ ಮಹಾಗ್ರಂಥವಾಗಿದ್ದು, ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಅವರು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಎಫ್‌ಎಂಕೆಎಂಸಿ ಕಾಲೇಜು ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತಾಶ್ರಯದಲ್ಲಿ ನಗರದ ಎಫ್‌ಎಂಕೆಎಂಸಿ ಕಾಲೇಜಿನಲ್ಲಿ ಮಂಗಳವಾರ ನಡೆದ ’ಸಂವಿಧಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಷ್ಟ್ರದ ಸಂವಿಧಾನದಲ್ಲಿ 25 ವಿಭಾಗಗಳಲ್ಲಿ 448 ವಿಧಿಗಳು, 12 ಪರಿಚ್ಛೇದಗಳು, 5 ಅನುಬಂಧಗಳು ಇವೆ. ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಸಂಪೂರ್ಣ ಕೈಬರಹದಲ್ಲಿ ಬರೆದು ಕ್ಯಾಲಿಗ್ರಾಫ್ ಮಾಡಲಾಗಿದೆ. ಸಂವಿಧಾನದ ಮೂಲ ಪ್ರತಿಗಳನ್ನು ಸಂಸತ್ತಿನ ಗ್ರಂಥಾಲಯದಲ್ಲಿ ಸಂರಕ್ಷಿಸಿಡಲಾಗಿದೆ ಎಂದರು.

1949ರ ನವೆಂಬರ್, 26 ರಂದು ಸಂವಿಧಾನವನ್ನು ಸಂವಿಧಾನ ಸಭೆಯಲ್ಲಿ ಅಂಗೀಕರಿಸಲಾಯಿತು. ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಪ್ರತಿಯನ್ನು ಸಭೆಯಲ್ಲಿ ಮಂಡಿಸಿದರು. ಅದರಂತೆ 1950 ಜನವರಿ, 26 ರಂದು ಸಂಪೂರ್ಣ ಜಾರಿಯಾಗಿ ಅಂದಿನಿಂದಲೇ ಗಣರಾಜ್ಯ ದಿನವಾಗಿ ಆಚರಿಸಿಕೊಂಡು ಬರಲಾಗಿದೆ ಎಂದು ವಿ.ವಿ.ಮಲ್ಲಾಪುರ ಅವರು ವಿವರಿಸಿದರು.

ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ತಿಳಿಸಲಾಗಿದ್ದು, ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹೇಳಿದರು.

ಪುತ್ತೂರಿನ ವಕೀಲರ ಸಂಘದ ಮಾಜಿ ಅಧ್ಯಕ್ಷರು ಹಾಗೂ ವಿವೇಕಾನಂದ ಕಾನೂನು ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಕೆ.ಆರ್.ಆಚಾರ್ಯ ಅವರು ಮಾತನಾಡಿ ಸಂವಿಧಾನ ಪ್ರಸ್ತಾವನೆಯಲ್ಲಿ ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣತಂತ್ರ ರಾಷ್ಟ್ರವೆಂದು ಹೇಳಲಾಗಿದೆ ಎಂದರು.

ರಾಷ್ಟ್ರದ ಎಲ್ಲಾ ಪ್ರಜೆಗಳಿಗೆ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯವನ್ನು ನೀಡಿ, ಸಮಾನ ಅವಕಾಶ ಕಲ್ಪಿಸಲಾಗಿದೆ. ವೈಯಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ ಭ್ರಾತೃತ್ವ ಹೊಂದಿ ಸಂವಿಧಾನ ರಚನಾಸಭೆಯಲ್ಲಿ 1949ರ ನವೆಂಬರ್ 26 ರಂದು ಸಂವಿಧಾನವನ್ನು ಸ್ವೀಕರಿಸಲಾಗಿದೆ ಎಂದು ಆಚಾರ್ಯ ಅವರು ನುಡಿದರು.

Madikeri

ಪ್ರತಿಯೊಬ್ಬರಲ್ಲಿಯೂ ಕಾನೂನಿನ ಪ್ರಜ್ಞೆ ಇರಬೇಕು. ಕಾನೂನು ಇಲ್ಲದ ಸಮಾಜ ಊಹಿಸಿಕೊಳ್ಳುವುದು ಅಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಸಂವಿಧಾನ ಪ್ರಸ್ತಾವನೆಯನ್ನು ತಿಳಿದುಕೊಳ್ಳಬೇಕು. ರಾಷ್ಟ್ರದ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ದೇಶದ ಸಂವಿಧಾನ ರಕ್ಷಣೆ ಮಾಡಿ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು ಎಂದರು.

ಸಂವಿಧಾನ ರಾಷ್ಟ್ರದ ಪವಿತ್ರ ಗ್ರಂಥವಾಗಿದ್ದು, ಪ್ರತಿಯೊಬ್ಬರ ಮನೆಯಲ್ಲೂ ಸಂವಿಧಾನದ ಪುಸ್ತಕ ಕಡ್ಡಾಯವಾಗಿ ಇರಬೇಕು. ಸಂವಿಧಾನದ ಮೂಲ ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಪ್ರತಿಪಾಧಿಸಿದರು.

ಭಾರತೀಯ ಸಂವಿಧಾನ ಇದುವರೆಗೆ 104 ತಿದ್ದುಪಡಿಗಳನ್ನು ಕಂಡಿದೆ. ಮೊದಲ ತಿದ್ದುಪಡಿ ನಡೆದದ್ದು 1951 ರ ಮೇ 10 ರಂದು. ಸಾಂವಿಧಾನಿಕವಾಗಿ ದತ್ತವಾದ ಹಕ್ಕು ಮತ್ತು ಸ್ವಾತಂತ್ರ್ಯಗಳನ್ನು ಅಪಹರಿಸುವ ಯಾವುದೇ ಕಾನೂನನ್ನು ಪ್ರಶ್ನಿಸುವ ಅಧಿಕಾರವನ್ನು ಈ ತಿದ್ದುಪಡಿಯಲ್ಲಿ ನೀಡಲಾಯಿತು. ಕೊನೆಯ ತಿದ್ದುಪಡಿಯನ್ನು 2019ರ ಜನವರಿ 26 ರಂದು ಮಾಡಲಾಯಿತು ಎಂದರು.

ಎಫ್‌ಎಂಕೆಎಂಸಿ ಕಾಲೇಜಿನ ಪ್ರಾಂಶುಪಾಲರಾದ ಜಗತ್ ತಿಮ್ಮಯ್ಯ, ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ, ವಕೀಲರ ಸಂಘದ ಅಧ್ಯಕ್ಷರಾದ ಕೆ.ಎಸ್.ಕವನ್, ಅಖಿಲ ಭಾರತೀಯ ಅಧಿವಕ್ತ ಪರಿಷತ್‌ನ ಅಧ್ಯಕ್ಷರಾದ ಪಿ.ಕೃಷ್ಣಮೂರ್ತಿ ಇದ್ದರು. ತನುಶ್ರೀ ಮತ್ತು ತಂಡ ಪ್ರಾರ್ಥಿಸಿದರು. ಸಾಕ್ಷತ್ ನಿರೂಪಿಸಿದರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಬಿ.ಎಸ್. ಜಯಪ್ಪ ಅವರು ಸ್ವಾಗತಿಸಿ, ವಂದಿಸಿದರು.

ಜಿಲ್ಲಾಡಳಿತದಿಂದ ಸಂವಿಧಾನ ದಿನಾಚರಣೆ : ಕೊಡಗು ಜಿಲ್ಲಾಡಳಿತ ವತಿಯಿಂದ ಸಂವಿಧಾನ ದಿನಾಚರಣೆಯ ಪ್ರಯುಕ್ತ ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಭಾರತದ ಜನತೆಯಾದ ನಾವು, ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮ ನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ, ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯ, ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ; ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆ ಮೂಡಿಸುವುದಕ್ಕೆ ದೃಢಸಂಕಲ್ಪ ಮಾಡಿ, ಸಂವಿಧಾನ ಸಭೆಯಲ್ಲಿ 1949 ನೆಯ ಇಸವಿಯ ನವೆಂಬರ್ ತಿಂಗಳ 26 ನೇ ದಿನದಂದು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English