ಮಂಗಳೂರು : ಮಂಗಳೂರು ನಗರದ ಲೇಡಿಹಿಲ್ ಸಮೀಪದ ಉರ್ವ ಚಿಲಿಂಬಿ ಶಿರ್ಡಿ ಸಾಯಿ ಮಂದಿರ ಬಳಿ ಕಾರಿನಲ್ಲಿ ಕುಳಿತು ಮಾದಕ ವಸ್ತುವಾದ ‘ಎಂಡಿಎಂಎ’ ಪೌಡರ್ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸುರತ್ಕಲ್ ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಮುಹಮ್ಮದ್ ನಿಯಾಝ್ (25) ಹಾಗೂ ಪಾಂಡೇಶ್ವರದ ಅಮೃತನಗರ ನಿವಾಸಿ ಮುಹಮ್ಮದ್ ಅಜೀಂ (30) ಎಂದು ಹೆಸರಿಸಲಾಗಿದೆ.
ಮಂಗಳೂರು ನಗರದ ಇಕನಾಮಿಕ್ ಆಯಂಡ್ ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ನಿರೀಕ್ಷಕರಿಗೆ ದೊರೆತ ಖಚಿತ ವರ್ತಮಾನದಂತೆ ನಗರದ ಉರ್ವ ಚಿಲಿಂಬಿ ಶಿರ್ಡಿ ಸಾಯಿ ಮಂದಿರ ಸಮೀಪದ ರಸ್ತೆಯಲ್ಲಿ ಆಲ್ಟೋ ಕಾರಿನಲ್ಲಿ ಕುಳಿತು ಇಬ್ಬರು ಎಂಡಿಎಂಎ ಫೌಡರ್ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳಿಂದ 4.80 ಗ್ರಾಂ ತೂಕದ ಎಂಡಿಎಂಎ ಫೌಡರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮೆರೂನ್ ಬಣ್ಣದ ಆಲ್ಟೋ ಕಾರು, ಮೂರು ಮೊಬೈಲ್ ಹಾಗು 3,000 ರೂ. ನಗದು ವಶಕ್ಕೆ ಪಡೆದಿದ್ದಾರೆ. ಸ್ವಾಧೀನ ಪಡಿಸಿಕೊಂಡಿರುವ ಸೊತ್ತಿನ ಒಟ್ಟು ಅಂದಾಜು ಮೌಲ್ಯ ರೂ.2,08,500 ಎಂದು ಪೊಲೀಸರು ತಿಳಿಸಿದ್ದಾರೆ.
ಮುಹಮ್ಮದ್ ನಿಯಾಝ್ ವಿರುದ್ಧ ಈ ಹಿಂದೆ ಮಂಗಳೂರು ನಗರದ ಕೋಣಾಜೆ ಪೊಲೀಸ್ ಠಾಣೆ,ಉರ್ವಾ ಪೊಲೀಸ್ ಠಾಣೆ,ಸುರತ್ಕಲ್ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುತ್ತದೆ. ಮುಹಮ್ಮದ್ ಅಜೀಂ ವಿರುದ್ಧ ಲೆ ಈ ಹಿಂದೆ ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣೆ, ಸುರತ್ಕಲ್ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಂಗಳೂರು ನಗರ ಇಕನಾಮಿಕ್ ಆಯಂಡ್ ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರದ ಎಕನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ನಿರೀಕ್ಷಕರು ಮತ್ತು ಪೊಲೀಸ್ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.
Click this button or press Ctrl+G to toggle between Kannada and English