ಬೆಂಗಳೂರು: ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ಬೆದರಿಕೆಯೊಡ್ಡಿ ಬಿಜೆಪಿಯ ಮಾಜಿ ಸಚಿವ ರಿಂದ 10 ಕೋಟಿ ರೂ. ಸುಲಿಗೆಗೆ ಮುಂದಾಗಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈ ಮೊದಲು ಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪರಪ್ಪನ ಅಗ್ರಹಾರ ನಿವಾಸಿ ರಾಘವೇಂದ್ರ ಬಂಧಿತ ಆರೋಪಿ ಇತ್ತೀಚೆಗೆ ಕೆಲಸ ತೊರೆದು ಮನೆಯಲ್ಲಿಯೇ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಾಘವೇಂದ್ರ ತನ್ನ ಗೆಳತಿಯ ಮೂಲಕ ಹನಿಟ್ರ್ಯಾಪ್‌ಗೆ ಮಾಜಿ ಸಚಿವರೊಬ್ಬರನ್ನು ಕೆಡವಿದ್ದ. ಗೆಳತಿಯೊಂದಿಗೆ ಮಾಜಿ ಸಚಿವರು ಇರುವ ವಿಡಿಯೋ ಚಿತ್ರೀಕರಿಸಿಕೊಂಡಿದ್ದ. ಅದನ್ನು ಇಟ್ಟುಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟಿದ್ದ.
ಕಳೆದ ಒಂದು ವರ್ಷದಿಂದ ಮಾಜಿ ಸಚಿವರ ಬೆನ್ನು ಬಿದ್ದಿದ್ದ ಈತ ಕೊನೆಗೂ ಈ ಕೃತ್ಯದಲ್ಲಿ ಯಶಸ್ವಿಯಾಗಿದ್ದ. ಮಾಜಿ ಸಚಿವರಿಗೆ ಕರೆ ಮಾಡಿ 10 ಕೋಟಿ ರೂಪಾಯಿ ನೀಡಿದರೆ ವೀಡಿಯೋ ನೀಡುತ್ತೇನೆ. ಇಲ್ಲದಿದ್ದರೆ ಖಾಸಗಿ ವಾಹಿನಿಗಳಿಗೆ ನೀಡುವುದಾಗಿ ಬೆದರಿಸಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಜಿ ಸಚಿವರು ನೀಡಿದ್ದ ದೂರು ಆಧರಿಸಿ ಆರೋಪಿಯ ಬಂಧನಕ್ಕೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದರು.
ಹನಿಟ್ರ್ಯಾಪ್ ಅನ್ನೇ ವೃತ್ತಿಯಾಗಿಸಿಕೊಂಡಿದ್ದ ರಾಘವೇಂದ್ರ ಐವರು ಶಾಸಕರನ್ನು ಹನಿಟ್ರ್ಯಾಪ್ ಮೂಲಕ ಬಲೆಗೆ ಕೆಡವಿ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ಶಾಸಕರುಗಳು ಮಾತ್ರವಲ್ಲದೆ ದೊಡ್ಡ ದೊಡ್ಡ ಉದ್ಯಮಿಗಳನ್ನೂ ಈತ ಬಲೆಗೆ ಬೀಳಿಸಿದ್ದನೆಂಬ ಮಾಹಿತಿ ತನಿಖೆ ವೇಳೆ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಮತ್ತು ಆತನ ಪ್ರೇಯಸಿ ಸೇರಿದಂತೆ ನಾಲ್ಕು ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Click this button or press Ctrl+G to toggle between Kannada and English