ಕೊಲ್ಕತ್ತಾ : ಈರುಳ್ಳಿ ಬೆಲೆ ಶತಕ ದಾಟಿದ್ದು ದೇಶಾದ್ಯಂತ ಗ್ರಾಹಕರು ಕಣ್ಣೀರುಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಮಿಡ್ನಾಪೂರ್ ಜಿಲ್ಲೆಯಲ್ಲಿ ಕಳ್ಳರು ಹಣವನ್ನು ಬಿಟ್ಟು ಈರುಳ್ಳಿಯನ್ನೇ ಕದ್ದೊಯ್ದ ಸ್ವಾರಸ್ಯಕರ ಘಟನೆ ನಡೆದಿದೆ.
ಹೌದು. ಪಶ್ಚಿಮ ಬಂಗಾಳದಲ್ಲಿ ಒಂದು ಕಿಲೋ ಈರುಳ್ಳಿ ದರ 100 ರೂ. ಗಡಿ ದಾಟಿದ್ದು ರೈತರ ಮೊಗದಲ್ಲಿ ಮಂದಹಾಸವಿದ್ದರೇ ಗ್ರಾಹಕರ ಮೊಗದಲ್ಲಿ ಕಣ್ಣಿರನ್ನು ತರಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ನಗದಿಗಿಂತ ಈರುಳ್ಳಿಯೇ ಹೆಚ್ಚು ಬೆಲೆಬಾಳುತ್ತದೆಯೆಂದರಿತು ತರಕಾರಿ ಅಂಗಡಿಯೊಂದಕ್ಕೆ ಕನ್ನ ಹಾಕಿದ್ದಾರೆ.
ಅಕ್ಷಯ್ ಎಂಬ ವ್ಯಾಪರಿಯೊಬ್ಬ ಈರುಳ್ಳಿ ಅಂಗಡಿಯನ್ನು ಹೊಂದಿದ್ದು ಬುಧವಾರ ಬೆಳಗ್ಗೆ ಬಂದು ನೋಡಿದಾಗ ಈರುಳ್ಳಿಗಳು ಕಣ್ಮರೆಯಾಗಿ ಎಲ್ಲೆಡೆ ಚದುರಿದ ವಸ್ತುಗಳು ಕಂಡುಬಂದಿದ್ದವು. ಇದರಿಂದ ಆಘಾತಕ್ಕೊಳಗಾದ ಅಕ್ಷಯ್ ಕೂಡಲೇ ನಷ್ಟವನ್ನು ಅಂದಾಜಿಸಿದ್ದಾರೆ. ಸುಮಾರು 50 ಸಾವಿರ ಬೆಳೆಬಾಳುವ ಈರುಳ್ಳಿಯೊಂದಿಗೆ ಬೆಳ್ಳುಳ್ಳಿ ಮತ್ತು ಶುಂಠಿಗಳು ಕೂಡ ಕಾಣೆಯಾಗಿದ್ದವು.
ಆಶ್ಚರ್ಯವೆಂದರೇ ನಗದು ಪೆಟ್ಟಿಗೆಯಲ್ಲಿದ್ದ ಒಂದು ರೂಪಾಯಿ ಹಣವನ್ನು ಕಳ್ಳರು ಮುಟ್ಟದೇ ಕೇವಲ ಈರುಳ್ಳಿ ಚೀಲಗಳನ್ನು ಮಾತ್ರ ಹೊತ್ತೊಯ್ದಿದ್ದಾರೆ. ಕಳ್ಳರಿಗೂ ಈಗ ಹಣಕ್ಕಿಂತ ಈರುಳ್ಳಿಯೇ ಅಮೂಲ್ಯ ಎನಿಸುತ್ತಿದೆ ಎಂದು ಅಕ್ಷಯ್ ದಾಸ್ ನಗುತ್ತಾ ತಿಳಿಸಿದ್ದಾರೆ.
Click this button or press Ctrl+G to toggle between Kannada and English