ಮಂಗಳೂರು : ಸಂಸದ ನಳಿನ್ ಕುಮಾರ್ ಕಟೀಲ್ ರವರ ನವೀಕೃತ ನೂತನ ಕಚೇರಿ ಯು ಡಿ ಸಿ ಕಟ್ಟಡ ಡಾ 2 ದಾನೆ ಮಹಡಿಯ ಉದ್ಘಾಟನೆಯನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ರವರು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಈ ನವೀಕೃತ ಕಚೇರಿ ಕಾರ್ಯಕರ್ತರಿಗೆ ಆಲಯವಾಗಿದೆ. ಅವರ ನೋವಿಗೆ ಸ್ಪಂದನೆ ನೀಡುವ ಕೇಂದ್ರವಾಗಿದೆ. ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸುವ ಜತೆಗೆ ಸಾಮಾನ್ಯ ಜನರ ಕಣ್ಣೀರು ಒರೆಸುವ ಸಾಂತ್ವನ ಕೇಂದ್ರವಾಗಲಿ. ಜಿಲ್ಲೆಯ ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಲಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮುಖ್ಯ ಸಚೇತಕ ಸುನೀಲ್ ಕುಮಾರ್, ಶಾಸಕರಾದ ಎಸ್.ಅಂಗಾರ, ರಾಜೇಶ್ ನಾಕ್, ಡಾ.ವೈ.ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಪದ್ಮನಾಭ ಕೊಟ್ಟಾರಿ ಮೊದಲಾದವರು ಹಾಜರಿದ್ದರು.
ನವೀಕೃತ ಕಚೇರಿ ಸಂಪೂರ್ಣ ಕಂಪ್ಯೂಟರೀಕೃತಗೊಂಡು ಪೇಪರ್ ಲೆಸ್ ಆಗಿ ಕಾರ್ಯಾಚರಿಸಲಿದೆ. ಸಾರ್ವಜನಿಕರು ಕಚೇರಿಯಲ್ಲಿ ಸಲ್ಲಿಸಿದ ಮನವಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ತಕ್ಷಣ ಕಳುಹಿಸಿ ಕೊಡುವ ಜತೆಗೆ ಅದರ ಪ್ರಗತಿಯ ವಿವರವನ್ನು ಮನವಿ ನೀಡಿದವರಿಗೆ ತಿಳಿಸುವ ಮೂಲಕ ಜನಸ್ನೇಹಿ ಕಾರ್ಯಾಲಯವನ್ನಾಗಿ ಮಾಡಲಾಗಿದೆ ಎಂದು ಸಂಸದ ನಳಿನ್ ಕುಮಾರ್ ತಿಳಿಸಿದರು.
ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ 9 ಗಂಟೆ ತನಕ ಹಾಗೂ ಮಂಗಳವಾರವಿಡೀ ಕಚೇರಿಯಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಿದ್ದು, ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದನೆ ನೀಡಲಾಗುವುದು. ಕಚೇರಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಎಲ್ಲ ಯೋಜನೆಗಳ ಮಾಹಿತಿ ನೀಡಲಾಗುವುದು ಎಂದು ನಳಿನ್ ತಿಳಿಸಿದರು.
Click this button or press Ctrl+G to toggle between Kannada and English