ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ವಿವಿಧ ದೇವಾಲಯಗಳಲ್ಲಿ ಶ್ರೀಸುಬ್ರಹ್ಮಣ್ಯ ಷಷ್ಠಿ ಶ್ರದ್ಧಾಭಕ್ತಿಯಿಂದ ನಡೆಯಿತು. ನಗರದ ಇತಿಹಾಸ ಪ್ರಸಿದ್ಧ ಶ್ರೀಓಂಕಾರೇಶ್ವರ ದೇವಾಲಯದಲ್ಲಿ ಶ್ರೀಸುಬ್ರಹ್ಮಣ್ಯ ದೇವರಿಗೆ ಅಭಿಷೇಕ, ಅಲಂಕಾರ, ಅರ್ಚನೆ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳು ಬೆಳಗ್ಗೆಯಿಂದಲೇ ನಡೆಯಿತು. ಮಹಾಪೂಜೆ ಮತ್ತು ಮಹಾಮಂಗಳಾರತಿ ಸಂದರ್ಭ ಸಾವಿರಾರು ಭಕ್ತರು ಶ್ರದ್ಧಾಭಕ್ತಿಯನ್ನು ಮೆರೆದರು. ಭಕ್ತಾಧಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಬ್ರಾಹ್ಮಣರ ಬೀದಿಯ ಅಶ್ವತ್ಥ ಕಟ್ಟೆಯಲ್ಲೂ ನಾಗಾರಾಧನೆ ನಡೆಯಿತು. ಭಕ್ತರು ಅಭಿಷೇಕ ಮತ್ತು ವಿಶೇಷ ಪೂಜೆ ಸಲ್ಲಿಸಿದರು.
ಕೂಡಿಗೆಯಲ್ಲಿ ರಥೋತ್ಸವ
ಶ್ರೀಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಕೂಡಿಗೆಯ ಉದ್ಭವ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ರಥೋತ್ಸವ ನಡೆಯಿತು. ಜಿಲ್ಲೆ ಮಾತ್ರವಲ್ಲದೆ ಪಕ್ಕದ ಜಿಲ್ಲೆಯ ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.
ಶ್ರೀಸುಬ್ರಮಣ್ಯ ಗುಡಿಯಲ್ಲಿ ಷಷ್ಠಿ
ಕೆದಕಲ್ ಗ್ರಾಮದ ಶ್ರೀಭದ್ರಕಾಳೇಶ್ವರಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀಸುಬ್ರಮಣ್ಯ ದೇವಸ್ಥಾನದಲ್ಲಿ 20ನೇ ವರ್ಷದ ಷಷ್ಠಿ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ಬೆಳಗ್ಗೆಯಿಂದಲೇ ಅಭಿಷೇಕ, ಅಲಂಕಾರ, ಮಂತ್ರಾಕ್ಷತೆ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ನಡೆದವು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಸುಬ್ರಮಣ್ಯ ದೇವರ ಮೂಲಮೃತ್ತಿಕಾ ಗಂಧ ಪ್ರಸಾದವನ್ನು ಸ್ವೀಕರಿಸಿದರು. ದೇವಾಲಯದ ಅಧ್ಯಕ್ಷರು, ತಕ್ಕ ಮುಖ್ಯಸ್ಥರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಶ್ರೀಮುತ್ತಪ್ಪ ದೇವಾಲಯದಲ್ಲಿ ಷಷ್ಠಿ
ನಗರದ ಶ್ರೀಮುತ್ತಪ್ಪ ದೇವಾಲಯದಲ್ಲಿ ಉತ್ಸವ ಸಮಿತಿ ವತಿಯಿಂದ ಶ್ರೀಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯುತ್ತಿದೆ. ಸುಬ್ರಹ್ಮಣ್ಯ ಸ್ವಾಮಿಯ ಷಷ್ಠಿಯ ಪ್ರಯುಕ್ತ ಮುತ್ತಪ್ಪ ದೇವರ ವೆಳ್ಳಾಟಂ, ಪಂಚಾಮೃತ ಅಭಿಷೇಕ ಸೇವೆ, ಕ್ಷೀರಾಭಿಷೇಕ, ಅಪ್ಪಂ ಸೇವೆ, ಪಂಚಕಜ್ಜಾಯ ಸೇವೆ, ಹಣ್ಣುಕಾಯಿ ಪೂಜೆ, ಪುಷ್ಪಾರ್ಚನೆ, ಮಂಗಳಾರತಿ ಸೇರಿದಂತೆ ಇತ್ಯಾದಿ ಸೇವೆಗಳು ನೆರವೇರಿತು. ಶ್ರೀ ಸುಬ್ರಹ್ಮಣ್ಯ ದೇವರ ಶ್ರೀಭೂತ ಬಲಿ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗವಾಯಿತು.
Click this button or press Ctrl+G to toggle between Kannada and English