ಶ್ರೀನಿವಾಸ ವೈದ್ಯಕೀಯ ಕಾಲೇಜಿನಲ್ಲಿ ರಾಷ್ಟ್ರೀಯ ಸಮ್ಮೇಳನ : ವಿಧಿವಿಜ್ಞಾನ ವ್ಯವಸ್ಥೆ ಬಲಪಡಿಸಲು ಸರಕಾರದ ಕ್ರಮ

5:21 PM, Tuesday, December 3rd, 2019
Share
1 Star2 Stars3 Stars4 Stars5 Stars
(5 rating, 1 votes)
Loading...

srinivas

ಮಂಗಳೂರು : ಮಹಿಳಾ ದೌರ್ಜನ್ಯ ಮತ್ತು ಬಾಲಕಿಯರ ಮೇಲಾಗುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಕೇಂದ್ರ ಸರಕಾರವು ದೇಶದಲ್ಲಿ ವಿಧಿವಿಜ್ಞಾನ ವ್ಯವಸ್ಥೆಯನ್ನು ಬಲಪಡಿಸುತ್ತಿದೆ ಎಂದು ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ಉಪ ನಿರ್ದೇಶಕ ಡಾ.ಚಂದ್ರಶೇಖರ್ ಹೇಳಿದರು.

ಅವರು ಇಂದು ಸುರತ್ಕಲ್ ಮುಕ್ಕ ಶ್ರೀನಿವಾಸ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ (ಫಾರೆನ್ಸಿಕ್ ಸಯನ್ಸ್) ವಿಭಾಗದಿಂದ ಆಯೋಜಿಸಲಾದ ಎವಿಡೆನ್ಸ್ ರೆಸ್ ಇಸ್ಪಾಲೋಕ್ಯುಟುರ್ ರಾಷ್ಟ್ರೀಯ ಸಮ್ಮಳನದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ದೇಶದಲ್ಲಿ ಸಂಭವಿಸಿದ ಬಹಳಷ್ಟು ಪೊಕ್ಸೋ ಪ್ರಕರಣಗಳಲ್ಲಿ ವಿಧಿವಿಜ್ಞಾನ ವಿಭಾಗದ ಸಾಕ್ಷಾಧಾರಗಳ ಮೇಲೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿದೆ. ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಿವಿಜ್ಞಾನ ಕೇಂದ್ರಗಳನ್ನು ತೆರೆಯಲು ಸರಕಾರ ಕ್ರಮಕೈಗೊಂಡಿದೆ. ಮಾತ್ರವಲ್ಲದೆ, ಒಂದು ಕೇಂದ್ರೀಯ ಮತ್ತು ಎಂಟು ರಾಜ್ಯ ಫಾರೆನ್ಸಿಕ್ ವಿಶ್ವವಿದ್ಯಾಲಯಗಳ ಸ್ಥಾಪನೆ ಮಾಡಲಾಗುವುದೆಂದು ಸರಕಾರ ಪ್ರಕಟಿಸಿದೆ ಎಂದು ಡಾ.ಚಂದ್ರಶೇಖರ್ ಹೇಳಿದರು.

ನ್ಯಾಯಾಲಯಗಳು ಇತ್ತೀಚಿಗಿನ ದಿನಗಳಲ್ಲಿ ಅಪರಾಧ ಪ್ರಕರಣಗಳ ಇತ್ಯರ್ಥ ಮಾಡಲು ವೈಜ್ಞಾನಿಕ ಸಾಕ್ಷಾಧಾರಗಳನ್ನು ಹೆಚ್ಚಾಗಿ ಪರಿಗಣಿಸುತ್ತಿದ್ದಾರೆ. ಆದುದರಿಂದ, ಅಪರಾಧ ಪತ್ತೆ ಮತ್ತು ಅಪರಾಧ ಸಾಬೀತು ಮಾಡುವಲ್ಲಿ ಫಾರೆನ್ಸಿಕ್ ಸಯನ್ಸ್ ವಿಭಾಗದ ಮಹತ್ವ ಹೆಚ್ಚಿದೆ ಎಂದವರು ಹೇಳಿದರು.

srinivas

ವಿಧಿವಿಜ್ಞಾನ ಸೇರಿದಂತೆ ಯಾವುದೇ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗೆ ಉತ್ತೇಜನ ನೀಡಲಾಗುವುದು ಎಂದು ಸಮ್ಮೇಳನವನ್ನು ಉದ್ಘಾಟಿಸಿದ ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷ ರಾಘವೇಂದ್ರ ರಾವ್ ಹೇಳಿದರು.

ಅಪರಾಧ ತನಿಖೆ ಮತ್ತು ಸಾಬೀತು ಪಡೆಸುವಲ್ಲಿ ಫಾರೆನ್ಸಿಕ್ ಸಯನ್ಸ್ ಹೆಚ್ಚಿನ ಪಾತ್ರ ವಹಿಸುತ್ತಿದೆ ಎಂದು ಶ್ರೀನಿವಾಸ ವಿಶ್ವವಿದ್ಯಾಲಯದ ಪ್ರೊ ಚಾನ್ಸಲರ್ ಮತ್ತು ಶಾಮರಾವ್ ಪ್ರತಿಷ್ಠಾನದ ಉಪಾಧ್ಯಕ್ಷ ಎ.ಶ್ರೀನಿವಾಸ ರಾವ್ ನುಡಿದರು.

ಅಪರಾಧ ಪತ್ತೆಯಲ್ಲಿ ವಿಧಿವಿಜ್ಞಾನದ ಪಾತ್ರ ಎಂಬ ಬಗ್ಗೆ ರೋಶನಿ ನಿಲಯ ಕ್ರಿಮಿನಾಲೋಜಿ ವಿಭಾಗದ ಮುಖ್ಯಸ್ಥರಾದ ಡಾ. ಸರಿತಾ ಡಿ ಸೋಜ ಮತ್ತು ಅಪರಾಥ ತನಿಖೆಯಲ್ಲಿ ಬಯೊಲಾಜಿಕಲ್ ಎವಿಡೆನ್ಸ್ ಎಂಬ ವಿಚಾರದ ಬಗ್ಗೆ ಪ್ರಾದೇಶಿಕ ವಿಧಿವಿಜ್ಞಾನ ಕೇಂದ್ರದ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ ಗೀತಾಲಕ್ಷ್ಮೀ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಇರುವ ಏಕ ಮಾತ್ರ ಡಿಎನ್‌ಎ ಪರೀಕ್ಷಾ ಕೇಂದ್ರದಿಂದಾಗಿ ವಿಶ್ಲೇಷಣಾ ವರದಿಗಳು ಬರುವಾಗ ಒಂದು ವರ್ಷಗಳಾಷ್ಟು ವಿಳಂಬ ಆಗುತ್ತಿದೆ. ಆದುದರಿಂದ, ರಾಜ್ಯದಲ್ಲಿ ಕನಿಷ್ಟ ಪ್ರಾದೇಶಿಕ ಡಿಎನ್‌ಎ ಪರೀಕ್ಷಾ ಕೇಂದ್ರಗಳನ್ನು ಆರಂಭಿಸಬೇಕಾಗಿದೆ. ಕೇವಲ ರಕ್ತ ಮಾದರಿ ಮೂಲಕ ನ್ಯಾಯಾಲಯದಲ್ಲಿ ಏನನ್ನು ಸಾಬೀತು ಮಾಡಲಾಗುತ್ತಿಲ್ಲ.ಡಿಎನ್‌ಎ ಅಪರಾಧ ಸಾಬೀತು ಮಾಡಲು ಉತ್ತಮ ವೈಜ್ಞಾನಿಕ ಸಾಕ್ಷ್ಯವಾಗಿದೆ ಎಂದು ಗೋಷ್ಠಿಯ ಸಂವಾದ ವೇಳೆ ವೈದ್ಯರು ಅಭಿಪ್ರಾಯಪಟ್ಟರು.

ಶ್ರಿನಿವಾಸ ವಿಶ್ವವಿದ್ಯಾಲಯ ಕುಲಪತಿ ಡಾ.ರಮಣರಾವ್, ರಿಜಿಸ್ಟ್ರಾರ್ ಡಾ.ಅನಿಲ್ ಕುಮಾರ್, ಡಾ.ಶ್ಯಾಮ್ ಕಿಶೋರ್, ಡಾ.ಉದಯಕುಮಾರ್, ಸಮ್ಮೇಳನ ಸಂಘಟನಾ ಸಮಿತಿಯ ಡಾ.ವೃಂದಾ ಜೆ ಭಟ್, ಡಿ.ಸ್ವಾತಿ ಅವರು ಉಪಸ್ಥಿತರಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English