ಕರಾವಳಿಯಲ್ಲಿ ತಣ್ಣಗೆ ಅಲುಗಾಡಿಸಿದ ಭೂಕಂಪ ಪ್ರಳಯದ ಸೂಚನೆಯಾ?

5:55 PM, Friday, October 26th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Apocalypse in Karavaliಮಂಗಳೂರು : 2012ಕ್ಕೆ ಪ್ರಳಯ ಅಂತೇ ಹೌದಾ ಎಂಬ ಪ್ರಶ್ನೆಗಳು ಈಗ ಎಲ್ಲೆಡೆ ಹರಿದಾಡುತ್ತಿದೆ. ರಾಜ್ಯದಲ್ಲಿ ಅದರಲ್ಲೂ ಪರಶುರಾಮನ ಸೃಷ್ಟಿ ಎಂದೇ ಕರೆಯಲಾಗುವ ಕರಾವಳಿಯ ನಾನಾ ಭಾಗಗಳಲ್ಲಿ ಈ ಭೂಕಂಪನದ ಅನುಭವ ಶ್ರೀಸಾಮಾನ್ಯನಿಗೂ ಆಗಿದೆ. ಈ ಮೂಲಕ 2012ರಲ್ಲಿ ಜಗತ್ತಿನ ವಿನಾಶ ಅರ್ಥಾತ್ ಪ್ರಳಯದ ಮೂನ್ಸೂಚನೆಯೇ ಈ ಭೂಕಂಪನದ ಮೂಲಕ ಬಂದಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ಅಂದಹಾಗೆ ಎಲ್ಲಿ ಧಾರ್ಮಿಕ ನಂಬಿಕೆಗಳು ಪ್ರಬಲವಾದ ಅಸ್ತಿತ್ವವನ್ನು ಹೊಂದಿರುತ್ತವೆಯೋ ಅಲ್ಲೆಲ್ಲ ಅವುಗಳ ಪರಿಣಾಮವೂ ಸಹಾತೀವ್ರವಾಗಿಯೇ ಆಗುತ್ತಿದೆ.

ಅಸಲಿಗೆ ಇಂತಹದ್ದೊಂದು ಪ್ರಶ್ನೆ ನಿನ್ನೆ ಮೊನ್ನೆಯದೇನಲ್ಲ, ಭೂ ಮಂಡಲದ ಮೇಲೆ ಜೀವ ವೈವಿದ್ಯ ಬಂದ ಮೇಲೆ ಮಾನವ ಜೀವಿಯ ಅಸ್ತಿತ್ವ ಹುಟ್ಟಿಕೊಂಡ ಮೇಲೆ ಟಿಸಿಲೊಡೆದ ಮೂಟೆ ಹಲವು ಕುತೂಹಲಗಳನ್ನು ವಿಸ್ಮಯಗಳನ್ನು ತೆರೆದಿಡುತ್ತಾ ಬಂದಿದೆ. ಇಂತಹ ವಿಸ್ಮಯಗಳು ಮತ್ತು ಆತಂಕಗಳನ್ನು ಪರಿಗ್ರಹಿಸಲು ಮತ್ತು ವಿಶ್ಲೇಷಿಸಲು ಜಾಗತಿಕ ಮಟ್ಟದಲ್ಲಿ ನಾಸಾ ಸಂಸ್ಥೆ ನಿರಂತರ ಸಂಶೋಧನೆಗಳನ್ನು ಮಾಡುತ್ತಲೆ ಬಂದಿದೆ. ಈ ಪೈಕಿ ಶೇ.10ರಷ್ಟಕ್ಕೆ ಅದು ಖಚಿತವಲ್ಲದ ಆದರೆ ಸತ್ಯಕ್ಕೆ ಹತ್ತಿರವಾದ ಉತ್ತರಗಳನ್ನು ಸಹಾ ಕಂಡು ಕೊಂಡಿದೆ. ಇನ್ನೂ ಹತ್ತು ಹಲವು ವಿಸ್ಮಯಗಳಿಗೆ ಉತ್ತರ ಸಿಗಬೇಕಾಗಿದೆ. ಇಂತಹವುಗಳಲ್ಲಿ ಆಕಾಶದಲ್ಲಿ ಕಂಡು ಬಂದ ಹಾರುವ ತಟ್ಟೆ, ದೇಗುಲದ ಮೇಲೆ ಬಿದ್ದ ಬೆಳಕಿನ ಕಿರಣಗಳು, ದೂರದ ಸಮುದ್ರದಲ್ಲೆಲ್ಲೋ ದಡದಲ್ಲಿ ಕಂಡು ಬಂದ ಇತ್ತ ಮನುಷ್ಯನೂ ಅಲ್ಲದ ಅತ್ತ ಪ್ರಾಣಿಯೂ ಅಲ್ಲದ ಜೀವಿ, ಮಂಗಳ ಗ್ರಹದಿಂದ ಬಂದ ಜೀವಿಯಂತೆ ಕಾಣುವ ಪುಟ್ಟ ಮಗುವಿನಾಕಾರದ ದೊಡ್ಡಕಣ್ಣುಗಳುಳ್ಳ ಜೀವಿ ಹೀಗೆ 1000ಕ್ಕೂ ಹೆಚ್ಚು ವಿಸ್ಮಯಗಳು ನಂಬಲು ಸಾಧ್ಯವಾಗದ ವಿಚಾರಗಳು ನಾಸಾದ ಸಂಶೋಧನೆಯಲ್ಲಿವೆ.

ಈ ಸಂದರ್ಭದಲ್ಲಿ ಕಳೆದ ನಾಲ್ಕೈದು ವರ್ಷಗಳ ಹಿಂದೆ ಪ್ರಳಯದ ಬಗ್ಗೆ ಜಗತ್ತಿನಲ್ಲಿ ತುಂಬಿರುವ ಕಲ್ಪಿತ ವಿಚಾರಗಳ ಸಂಗ್ರಹ ಮಾಧ್ಯಮಗಳಲ್ಲಿ, ಸಾಹಿತ್ಯದಲ್ಲಿ ಪ್ರಕಟವಾಗಿತ್ತು. ಪಾಶ್ಚಾತ್ಯ ಕಾದಂಬರಿಕಾರರಲ್ಲಿ ಪ್ರಸಿದ್ದರಾದ ಸರ್.ಟನ್ ಆರ್ಥರ್ ಕಾನನ್ ಡಾಯ್ಲ್ “ದಿ ಲಾಸ್ಟ್ ವರ್ಲ್ಡ್” ಕೃತಿಯಲ್ಲಿ ಸಾದ್ಯಂತವಾಗಿ ಚಿತ್ರಿಸಿದ್ದರು. ತಾಂತ್ರಿಕ ವಿಚಾರ ಚಿಂತನೆಯಲ್ಲಿ ದೇಶೀಯರಿಗಿಂತ 100 ವರ್ಷಗಳಷ್ಟು ಮುಂದಿರುವ ಪಾಶ್ಚಾತ್ಯರು ಸಿನಿಮಾಗಳಲ್ಲಿ ಪ್ರಪಂಚ ನಾಶದ ಬಗ್ಗೆ, ಅನ್ಯಗ್ರಹ ಜೀವಿಗಳ ಬಗ್ಗೆ ಕಪೋಲ ಕಲ್ಪಿತ ಚಿತ್ರಗಳನ್ನು ಭೂ ಮಂಡಲದಲ್ಲಿ ಸಾವಿರಾರು ವರ್ಷಗಳಷ್ಟು ಹಿಂದೆ ಜೀವಿಸದ್ದವೆನ್ನಲಾದ ಡೈನೋಸಾರಸ್ ಗಳ ಬಗ್ಗೆ ನೈಜ ರೀತಿಯಲ್ಲಿ ಚಿತ್ರಿಸಿದ್ದು, ಪ್ರಪಂಚವಿನಾಶದ ಕಲ್ಪನೆಗೆ ಜೀವ ತುಂಬಿತು.

ಇದನ್ನೆ ಬಂಡವಾಳ ಮಾಡಿಕೊಂಡ ಜ್ಯೋತಿಷಿಗಳು, ಪಾದ್ರಿಗಳು, ಧಾರ್ಮಿಕ ಸಂಸ್ಥೆಗಳು ಅದಕ್ಕೆ ಇನ್ನಷ್ಟು ಕಟ್ಟುಕಥೆಗಳನ್ನು ತುಂಬಿ ತಮ್ಮ ಧರ್ಮ ಪ್ರಚಾರಕ್ಕನುಗುಣವಾಗಿ ಮತ್ತು ಧಾರ್ಮಿಕ ನಂಬಿಕೆಗಳನ್ನು ಹಣಗಳಿಸುವ ವಿಚಾರ ಮಾಡಿಕೊಂಡು ಜಾಗತಿಕ ಪ್ರಳಯವನ್ನು ಕಣ್ಣಂಚಿಗೆ ತಂದು ನಿಲ್ಲಿಸಿದೆ. ಇದು ಧಾರ್ಮಿಕ ನಂಬಿಕೆ ಇರಿಸಿಕೊಂಡ ಮಿಲಿಯನ್ ನಷ್ಟು ಜನರ ಮೇಲೆ ಗಾಢವಾದ ಪರಿಣಾಮವನ್ನು ಬೀರಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಎಷ್ಟೋ ಮಂದಿ ತಮ್ಮ ಬದುಕಿನ ಆಧಾರವಾದ ಉದ್ದಿಮೆಯನ್ನು ಒಳ್ಳೊಳ್ಳೆ ನೌಕರಿಗಳನ್ನು ತ್ಯಜಿಸಿ ಆಧ್ಯಾತ್ಮಿಕ ಬದುಕಿಗೆ ಶರಣು ಹೋಗುತ್ತಿದ್ದಾರೆ. ಕ್ರೈಸ್ತರ ಮಾಯನ್ ಕನ್ನಡಿ ಕ್ಯಾಲೆಂಡರ್ ಇಂತಹದ್ದಕ್ಕೆ ಪುಷ್ಟಿ ನೀಡಿದೆ.

ಈಗ ಭಾರತದಲ್ಲಿ ಅದರಲ್ಲೂ ರಾಜ್ಯದಲ್ಲಿ ಇಂತಹ ಅಲೆ ಬಂದಿದೆ. ಹೇಳಿಕೇಳಿ ಭಾರತ ಅಪ್ಪಟ ದೈವಿಕ ಸಂಸ್ಕ್ರತಿ, ಮತ್ತು ನಂಬಿಕೆಗಳ ಮೇಲೆ ಆಧಾರವಾಗಿರುವ ಜನರನ್ನು ಹೊಂದಿರುವ ದೇಶ. ಇಂತಹ ನಂಬಿಕೆಗಳನ್ನು ಬಂಡವಾಳ ಮಾಡುವ ನಿಟ್ಟಿನಲ್ಲಿ ಮಾಂತ್ರಿಕರು, ಜ್ಯೋತಿಷಿಗಳು ಪ್ರಪಂಚದ ವಿವಿದೆಡೆ ಸಂಭವಿಸುತ್ತಿರುವ ಅವಘಡಗಳನ್ನು ತಮ್ಮ ಆಧಾರವಾಗಿ ತೋರಿಸಿಕೊಂಡು ನಮ್ಮ ಜನರನ್ನು ಇನ್ನಷ್ಟು ಆತಂಕಗಳಿಗೆ ತಳ್ಳುತ್ತಿದ್ದಾರೆ. ಏಸು ಹುಟ್ಟಿಬರುತ್ತಾನೆ, ಕಲ್ಕಿಯ ಜನ್ಮವಾಗುತ್ತದೆ, ಪೈಗಂಬರ್ ಅವತಾರ ತಾಳುತ್ತಾನೆ ಎಂಬೆಲ್ಲ ಬೊಗಳೆಗಳು ಪ್ರಳಯದ ತೀಕ್ಷಣತೆಯ ಅರಿವು ಮುಡಿಸುವುದರೊಂದಿಗೆ ಜನರ ನಂಬಿಕೆಯನ್ನು ತಮ್ಮ ಹಿಡಿತಕ್ಕೆ ತಂದು ಕೊಳ್ಳುತ್ತಿವೆ. ಆ ಮೂಲಕ ಧರ್ಮಪ್ರಚಾರ, ಇಲ್ಲವೇ ತಮ್ಮ ಬಂಡವಾಳಶಾಹಿ ಮನೋ ಧರ್ಮವನ್ನು ಜನರಿಗೆ ತಿಳಿಯದಂತೆ ಬಿತ್ತಲಾಗುತ್ತಿದೆ.ಧಾರ್ಮಿಕ ಕೇಂದ್ರಗಳು ಈ ನೆಪದಲ್ಲಿ ಜನರ ಆಕರ್ಷಣೆಯ ಕೇಂದ್ರಗಳಾಗಿ ಮಾಡಿಕೊಳ್ಳಲು ಮುಂದಾಗಿವೆ. ಜನರ ಹಪಾಹಪಿತನ, ಭ್ರಷ್ಠಾಚಾರ, ಕೊಲೆ, ಸುಲಿಗೆ ವಂಚನೆ, ಮೋಸ ಇವುಗಳಲ್ಲಿ ಏನಾದರೂ ಪ್ರಳಯದ ಕಾರಣಕ್ಕಾಗಿ ಬದಲಾದೀತೆ ಎಂದು ನೋಡುವುದಾದರೂ ನಮ್ಮ ಜನರ ಮನಸ್ಥಿತಿ ಆ ರೀತಿ ಇಲ್ಲ. ಬದುಕಿದಷ್ಟು ದಿನ ಸಿಕ್ಕಷ್ಟು ದೋಚಿಕೊಂಡು ಸಮೃದ್ದವಾಗಿ ನಾನು ಬದುಕಬೇಕು ಅಂದು ಕೊಳ್ಳುವವರದ್ದೇ ಹೆಚ್ಚಿನ ಸಂಖ್ಯೆ. ಪ್ರಳಯ ಹತ್ತಿರದಲ್ಲಿದೆ ಎಂದರೆ ಪ್ರಪಂಚದ ಎಲ್ಲ ಸುಖಕ್ಕಾಗಿ ಏನು ಬೇಕಾದರೂ ಮಾಡುವ ಮನಸ್ಥಿತಿ ಇದೆ.

ಹಾಗಾದರೆ ಪ್ರಳಯವಾಗೋದು ಸುಳ್ಳ? ಅದಕ್ಕೆ ವೈಜ್ಞಾನಿಕ ಕಾರಣಗಳಿವೆಯಲ್ಲ ಎನ್ನಬಹುದು. ಪ್ರಳಯವಾಗೋದು ನಿಜ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿರುವಂತೆ ಪ್ರಳಯದ ವರ್ಷ ಮತ್ತು ದಿನಾಂಕಗಳೆಲ್ಲ ಶುದ್ದಾಂಗ ಸುಳ್ಳು. ಏಕೆ ಅಂತೀರಾ ಸೌರವ್ಯೂಹದ ಬಗ್ಗೆ ಇನ್ನು ಸಂಶೋಧನೆಗಳು ನಡೆಯುತ್ತಿವೆ. ಅವು ಭೂಮಿ ಗುರುತ್ವಾಕರ್ಷಣೆ ಕಳೆದು ಕೊಳ್ಳುವ ಬಗ್ಗೆ ತನ್ನ ಕಕ್ಷೆಯನ್ನು ಬದಲಿಸುವ ಬಗ್ಗೆ ಎಲ್ಲಿಯೂ ನಿಖರವಾಗಿ ತಿಳಿಸಿಲ್ಲ. ಆದರೆ ಒಂದಂತೂ ನಿಜ ನಾವು ಪ್ರಳಯಕ್ಕೆ ಹತ್ತಿರವಾಗುತ್ತಿದ್ದೇವೆ, ಅದು ಹೇಗೆ??? ಅಮೇರಿಕದಲ್ಲಿ ಹರಿಕೇನ್ ನಂತಹ ಚಂಡಮಾರುತ, ಜಗತ್ತಿನೆಲ್ಲೆಡೆ ಸುನಾಮಿಯಂತಹ ಭಯಾನಕ ಸಮುದ್ರ ಅಲೆಗಳು, ಆಮ್ಲಮಳೆಗಳು, ಜ್ವಾಲಾಮುಖಿಗಳು, ಭೂಕಂಪನಗಳು, ಉಲ್ಕಾಪಾತಗಳು, ಮಹಾ ಯುದ್ದಗಳು, ಕಂಡೂ ಕೇಳರಿಯದ ಮಹಾಮಾರಿ ಕಾಯಿಲೆಗಳು, ಪ್ರಪಂಚದ ಜಾಗತಿಕ ತಾಪಮಾನ ಏರಿಕೆ, ನೀರಿನ ಪ್ರಮಾಣದ ಏರಿಕೆ, ಮಳೆಕಾಡುಗಳ ನಾಶ, ಪರಿಸರ ಅಸಮತೋಲನ, ಓಜೋನ್ ಪದರದ ನಾಶ ಇವು ಮಾತ್ರ ಜಗತ್ತಿನ ನಾಶದ ಸ್ಪಷ್ಟ ಚಿತ್ರಣಗಳು. ಜಗತ್ತಿನಲ್ಲಿ ಬೆಳೆಯುತ್ತಿರುವ ಅತಿಯಾದ ಔದ್ಯೋಗಿಕರಣ,ಅಣೆಕಟ್ಟುಗಳು, ರಾಸಾಯನಿಕ ಉದ್ದಿಮೆಗಳು, ಅಣು ಸ್ಥಾವರಗಳು ನಮ್ಮ ಬದುಕಿನ ವಿನಾಶದ ಕ್ಷಣಗಳನ್ನು ಕಣ್ಣ ಮುಂದೆಯೇ ತಂದು ನಿಲ್ಲಿಸಿವೆ. ಇದು ಕಣ್ಣೆದುರಿನ ಸತ್ಯ. ಈ ಸತ್ಯಕ್ಕೆ ಉತ್ತರವೂ ಇಲ್ಲಿಯೇ ಇದೆ, ನಮ್ಮ ಜನ ವಿಚಾರ ಜಾಗೃತಿ ಬೆಳೆಸಿಕೊಳ್ಳಬೇಕು, ಪರಿಸರದ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು, ಜಾಗತಿಕ ನಾಶಕ್ಕೆ ಕಾರಣವಾಗುವಂತಹ ಕ್ರಿಯೆಗಳ ನಿಯಂತ್ರಣ ಮನುಷ್ಯನಿಂದಲೇ ಸಾಧ್ಯ ಅದಕ್ಕಾಗಿ ಸಂಘಟಿತ ಪ್ರಯತ್ನವಾಗಬೇಕು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English