ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಮುಖಂಡರ ಮೇಲೆ ಹಲ್ಲೆ

12:28 PM, Wednesday, December 4th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Hasan

ಹಾಸನ : ಹಣ ಹಂಚುವುದಕ್ಕೆ ಬಂದಿದ್ದಾರೆ ಎಂಬ ಅನುಮಾನದ ಮೇಲೆ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಮುಖಂಡರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ದಂಡಿಗನಹಳ್ಳಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ನಂಬಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಕೆ.ಆರ್ ಪೇಟೆ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ಜೆಡಿಎಸ್ ಮತ್ತು ಬಿಜೆಪಿ ನಡುವೆ ಹಣಾಹಣಿ ನಡೆದಿದ್ದು, ಬಿಜೆಪಿಯ ನಾರಾಯಣಗೌಡ ಮತ್ತು ಜೆಡಿಎಸ್ ನ ಕೆಬಿ ಚಂದ್ರಶೇಖರ್ ನಡುವೆ ಮಹಾಯುದ್ಧವೇ ನಡೆಯುತ್ತಿದೆ. ಚುನಾವಣಾ ಪ್ರಚಾರದ ಕೊನೆಯ ದಿನವಾದ ಇಂದು ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಕದನ ಕಣ ರಂಗೇರಿತ್ತು. ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ನಡುವೆ ಕೆ.ಆರ್ ಪೇಟೆ ತಾಲೂಕಿನ ಮಂದಗೆರೆ ಗ್ರಾಮದಲ್ಲಿ ಗಲಾಟೆ ನಡೆದು ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಇದರ ಬೆನ್ನಲ್ಲಿಯೇ ಕೆಲ ಗಂಟೆಗಳ ನಡುವೆ ಹಾಸನ ಜಿಲ್ಲೆಯಲ್ಲಿಯೂ ಗಲಾಟೆ ನಡೆದು ಇಬ್ಬರು ಮಾರಣಾಂತಿಕ ಹಲ್ಲೆಗೊಳಗಾಗಿದ್ದಾರೆ.

ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಆಕಸ್ಮಿಕವಾಗಿ ಬೆಂಗಳೂರಿನ ವಿಜಯನಗರ ಮೂಲದ ರವೀಂದ್ರ ಎಂಬವರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಂಬಿಹಳ್ಳಿ ಗ್ರಾಮದ ಸ್ನೇಹಿತನ ಮನೆಗೆ ತನ್ನ ಸಹಪಾಠಿಗಳೊಂದಿಗೆ ಬಂದಿದ್ದರು. ರವೀಂದ್ರ ಬಂದಿರುವ ವಿಚಾರವನ್ನು ಜೆಡಿಎಸ್ ಕಾರ್ಯಕರ್ತರು ಸೂರಜ್ ರೇವಣ್ಣನವರಿಗೆ ದೂರವಾಣಿ ಮುಖಾಂತರ ತಿಳಿಸಿದ್ದರು. ರವೀಂದ್ರ ಕೆ.ಆರ್ ಪೇಟೆಯ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ಪರವಾಗಿ ಹಣ ಹಂಚಲು ಬಂದಿದ್ದಾರೆ ಎಂಬ ಅನುಮಾನದ ಮೇಲೆ ಜೆಡಿಎಸ್ ಕಾರ್ಯಕರ್ತರು ಬಿಜೆಪಿಯ ಕೆಲವು ಕಾರ್ಯಕರ್ತರಿಗೆ ಮತ್ತು ಹೊರಬಂದಿದ್ದ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ಮತ್ತು ಗಂಭೀರವಾಗಿ ಗಾಯಗೊಂಡ ಮಾಜಿ ಬಿಬಿಎಂಪಿ ಕಾರ್ಪೊರೇಟರ್ ಸಹಪಾಠಿಗಳಾದ ಆನಂದ್ ಮತ್ತು ಸಂತೋಷ್ ಅವರನ್ನು ಬೆಂಗಳೂರಿನ ಕೊಲಂಬಿಯಾ ಏಪ್ಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಡಲಾಗಿದೆ. ಪರಿಸ್ಥಿತಿ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಿವಾಸ್ ಸೆಪಟ್ ಖುದ್ದು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಸಫಲತೆ ಕಂಡಿದ್ದರೂ, ಕೈ ಮೀರಿ ಹೋಗಿದ್ದರಿಂದ ಡಿಎಆರ್ ತುಕಡಿಯನ್ನು ನಿಯೋಜಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧ ಸ್ಥಳದಲ್ಲಿದ್ದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪುತ್ರ ಸೂರಜ್ ರೇವಣ್ಣನೇ ಕಾರಣ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಗೊಳ್ಳುವ ತನಕ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿರುವ ಜೆಡಿಎಸ್ ಕಾರ್ಯಕರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English