ಮೂಡುಬಿದಿರೆ : ನಾವಿಂದು ಅನಗತ್ಯ ಕಾಲ್ಪನಿಕ ಬಂಧನದಲ್ಲಿ ನಮ್ಮನ್ನು ನಾವು ಬಂಧಿಯನ್ನಾಗಿಸಿಕೊಂಡಿದ್ದೇವೆ. ಅಂತಹ ಸೆರೆಯಿಂದ ನಮ್ಮನ್ನು ನಾವು ಮುಕ್ತವಾಗಿಸಿಕೊಳ್ಳಬೇಕು. ಆಗ ನಾವು ಜೀವನದಲ್ಲಿ ಎತ್ತರದ ಸ್ಥಾನವನ್ನು ತಲುಪಬಹುದು ಎಂದು ಉಜಿರೆಯ ಅರ್ಕುಳ ಚ್ಯಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಡಾ ಜಯಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ, ಕಾಮರ್ಸ್ ವೃತ್ತಿಪರ ಕೋರ್ಸು ಹಾಗೂ ಅರ್ಕುಳ ಚ್ಯಾರಿಟೇಬಲ್ ಟ್ರಸ್ಟ್‌ನ ಜಂಟಿ ಆಶ್ರಯದಲ್ಲಿ ನಡೆದ ಉದ್ಯಮಶೀಲತಾ ತರಬೇತಿ ಕಾರ‍್ಯಕ್ರಮ ಉದ್ಘಾಟಸಿ ಮಾತನಾಡಿದರು.
ಪದವಿ ವಿದ್ಯಾಭ್ಯಾಸ ಪಡೆಯುವಾಗಲೇ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತೋಷದ ಸಂಗತಿ. ಇಲ್ಲಿ ಸಿಗುವ ಜೀವನ ಶಿಕ್ಷಣವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಕುರಿಯನ್, ಇಂದು ಶಿಕ್ಷಣದ ಒಳಗಡೆ ಗುಲಾಮಿತನ ಬಂದಿದೆ. ನಾವು ದುಡಿಯುತ್ತಿದ್ದರೂ, ವೈಯುಕ್ತಿಕ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಇಂದಿನ ಉದ್ಯಮರಂಗ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಳ್ಳುವ ಬದಲು, ಶಿಕ್ಷಣ ವ್ಯವಸ್ಥೆಯೆ ಮೇಲೆ ತನ್ನ ಪ್ರಭಾವ ಬೀರುತ್ತಿವೆ ಎಂದರು.
ಕಾರ‍್ಯಕ್ರಮದ ಸಂಯೋಜಕ ಅಶೋಕ ಕೆ ಜಿ ಮಾತನಾಡಿ, ಇಂತಹ ತರಬೇತಿ ಕಾರ‍್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸೃಜನಾಶೀಲತೆ ಹಾಗೂ ಹೊಸತನದೆಡೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಹಕಾರಿ. ವಿದ್ಯಾರ್ಥಿಗಳು ತಮ್ಮ ರಜಾ ಅವಧಿಯನ್ನು ಇಂತಹ ಕಲಿಕಾ ಮನಸ್ಥಿತಿಗೆ ಒಗ್ಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಸಂಪನ್ಮೂಲ ವ್ಯಕ್ತಿ ಜೇಮ್ಸ್ ಉಪಸ್ಥಿತರಿದ್ದರು. ವಿಭಾಗದ ಉಪನ್ಯಾಸಕಿ ಶಿಲ್ಪಾ ಕಾರ್ಯಕ್ರಮವನ್ನು ನಿರೂಪಿಸಿದರು. ಸ್ಪೂರ್ತಿ ಹಾಗೂ ಸ್ನೇಹ ತಂಡದವರು ಪ್ರಾರ್ಥಿಸಿದರು.
Click this button or press Ctrl+G to toggle between Kannada and English