ಡಿ.12ರಂದು ಮಂಗಳೂರು ಮೀನು ಸಾಗಾಟ ಲಾರಿಗಳ ಮುಷ್ಕರ

4:54 PM, Wednesday, December 4th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

meenu

ಮಂಗಳೂರು : ಮೀನು ಸಾಗಾಟದ ಸಂದರ್ಭ ಲಾರಿಗಳ ತ್ಯಾಜ್ಯ ನೀರನ್ನು ನಿರ್ದಿಷ್ಟ ಪ್ರದೇಶಗಳಲ್ಲಿ ಚೆಲ್ಲಲು ಅವಕಾಶವಿಲ್ಲದೆ ವಿನಾಕಾರಣ ಲಾರಿ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ಸ್ಥಳಾವಕಾಶಕ್ಕೆ ಒತ್ತಾಯಿಸಿ ಡಿ.12ರಂದು 24 ಗಂಟೆಯ ಲಾರಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಮೋಟಾರ್ ಟ್ರಾನ್ಸ್‌ಪೋರ್ಟ್ ಮತ್ತು ಇಂಜಿನಿಯರಿಂಗ್ ವರ್ಕರ್ಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಈ ವಿಷಯ ತಿಳಿಸಿದರು. ಲಾರಿ ಚಾಲಕರು ದುಡಿಯುವ ವರ್ಗದವರಾಗಿದ್ದಾರೆ. ಹಿಂದೆ ಮೀನು ಸಾಗಾಟ ಮಾಡುವ ಲಾರಿಗಳಲ್ಲಿ ತ್ಯಾಜ್ಯ ನೀರು ಸಂಗ್ರಹಿಸುವ ಕ್ರಮವಿರಲಿಲ್ಲ. ರಸ್ತೆಗಳಲ್ಲಿ ಇದನ್ನು ಹರಿಯಬಿಡುತ್ತಿದ್ದರಿಂದ ವಾತಾವರಣ ಕಲುಷಿತವಾಗುತ್ತಿರುವ ಹಿನ್ನೆಲೆಯಲ್ಲಿ 400 ಲೀಟರ್ ಸಾಮರ್ಥ್ಯದ ಟ್ಯಾಂಕ್‌ಗಳನ್ನು ಲಾರಿಗಳಲ್ಲಿ ಅಳವಡಿಸಲಾಗಿದೆ. ಆದರೆ ದೂರದ ಊರಿಗೆ ಮೀನು ಸಾಗಾಟ ಮಾಡುವಾಗ ಟ್ಯಾಂಕ್‌ನಲ್ಲಿ ನೀರು ಚೆಲ್ಲುತ್ತದೆ. ಈ ಕಾರಣಕ್ಕಾಗಿ ಲಾರಿಗಳನ್ನು ತಡೆದು ಚಾಲಕರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸಲಾಗುತ್ತಿದೆ. ಮಾಲಕರು ಚಾಲಕರನ್ನು ಬಿಡುಗಡೆಗೊಳಿಸಲು ಸಾವಿರಾರು ರೂ. ಖರ್ಚು ಮಾಡುವ ಪರಿಸ್ಥಿತಿ ಇದೆ. ಇದರಿಂದ ದುಡಿಯುವ ವರ್ಗಕ್ಕೆ ತೊಂದರೆಯಾಗಿದೆ ಎಂದು ಅವರು ಹೇಳಿದರು.

ಕರಾವಳಿ ಜಿಲ್ಲೆಯಲ್ಲಿ ಮತ್ಸ್ಯೋದ್ಯಮ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದು ಇಲ್ಲಿನ ಬಂದರುಗಳ ಮುಖಾಂತರ ಹೊರ ರಾಜ್ಯಗಳಿಗೆ ಮೀನು ಸಾಗಾಟವಾಗುತ್ತದೆ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಮೀನಿನ ಲಾರಿಯಲ್ಲಿ ಸಂಗ್ರಹವಾಗುವ ನೀರು ಬಿಡಲು ಜಾಗವೇ ಇಲ್ಲದ ಕಾರಣ ಕಳೆದ ಏಳೆಂಟು ವರ್ಷಗಳಿಂದ ಈ ಬಗ್ಗೆ ಮನವಿ ಮಾಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮನುಷ್ಯರು ಬಳಸುವ ಮೀನಿಗೆ ಮಂಜುಗಡ್ಡೆ ಹಾಕುವುದರಿಂದ ದುರ್ವಾಸನೆ ಬರುವುದಿಲ್ಲ. ಆದರೆ ಗೊಬ್ಬರಕ್ಕೆ ಬಳಸುವ ಮೀನುಗಳಿಗೆ ಮಂಜುಗಡ್ಡೆ ಹಾಕದ ಕಾರಣ ಅದು ಕೊಳೆತು ಅದರ ನೀರು ದುರ್ವಾಸನೆ ಬೀರುತ್ತದೆ. ಮೀನು ಸಾಗಾಟದ ಲಾರಿಗಳಿಗೆ ಇಲಾಖೆ ಹಾಗೂ ಸಾರ್ವಜನಿಕರಿಂದ ಆಗುತ್ತಿರುವ ತೊಂದರೆಯ ಹಿನ್ನೆಲೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಲು ಲಾರಿ ಚಾಲಕರು ಮತ್ತು ಮಾಲಕರ ಹೋರಾಟದ ಹಾದಿ ಹಿಡಿಯಲೇಬೇಕಾಗಿದೆ. ಈ ನಿಟ್ಟಿನಲ್ಲಿ ಡಿಸೆಂಬರ್ 12ರಂದು 24 ಗಂಟೆಗಳ ಮೀನು ಸಾಗಾಟ ಲಾರಿಗಳ ಮುಷ್ಕರ ನಡೆಯಲಿದೆ.

ಅಂದು ಬೆಳಿಗ್ಗೆ 11 ಗಂಟೆಗೆ ಚಾಲಕರು ಮಿನಿ ವಿಧಾನ ಸೌಧದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಯ ಬಳಿ ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ನೀಡಲು ತೀರ್ಮಾನ ಕೈಗೊಂಡಿದೆ ಎದು ವಸಂತ ಆಚಾರಿ ಹೇಳಿದರು.

ಸುದ್ದಿಗೋಷ್ಡಿಯಲ್ಲಿ ಮಂಗಳೂರು ಧಕ್ಕೆ ಮೀನು ಚಾಲಕರ ಸಂಘದ ಅಧ್ಯಕ್ಷರಾದ ಅಮೀರ್ ಹುಸೈನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲತೀಫ್, ಮುಖಂಡರಾದ ಸಿ.ಕೆ.ಇಸ್ಮಾಯಿಲ್, ಶರೀಫ್ ಹಾಗೂ ಬಶೀರ್ ಉಪಸ್ಥಿತರಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English